ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಆಯುಕ್ತಾಲಯ ವ್ಯಾಪ್ತಿಯಲ್ಲಿ ದಾಖಲೆಯ ₹ 10,172 ಕೋಟಿ ಜಿಎಸ್‌ಟಿ ಸಂಗ್ರಹ

Last Updated 1 ಏಪ್ರಿಲ್ 2022, 10:00 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಜಿಎಸ್‌ಟಿ ಆಯುಕ್ತಾಲಯದಿಂದ 2021-22ನೇ ಸಾಲಿನಲ್ಲಿ ದಾಖಲೆಯ ₹ 10,172 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ’ ಎಂದು ಉಪಆಯುಕ್ತ ಅಜಿಂಕ್ಯಾ ಹರಿ ಕಾಟ್ಕರ್‌ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಪ್ರಕಟಣೆ ನೀಡಿರುವ ಅವರು, ‘ಜಿಎಸ್‌ಟಿ ಸಂಗ್ರಹ ಪ್ರಮಾಣವು ದೃಢವಾದ ಆರ್ಥಿಕ ಬೆಳವಣಿಗೆಯ ಸಂಕೇತವಾಗಿದೆ ಮತ್ತು ದೇಶವು ಸಾಂಕ್ರಾಮಿಕದ ನೆರಳಿನಿಂದ ದೂರವಾಗಿದೆ ಎನ್ನುವುದರ ಸೂಚಕವಾಗಿದೆ’ ಎಂದು ಹೇಳಿದ್ದಾರೆ.

‘ಬೆಳಗಾವಿ ಆಯುಕ್ತಾಲಯ ವ್ಯಾಪ್ತಿ ದೊಡ್ಡದಾಗಿದೆ. ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ವ್ಯಾಪಿಸಿದೆ. ದಾಖಲೆಯ ಸಂಗ್ರಹವು ಈ ಜಿಲ್ಲೆಗಳಲ್ಲಿ ದೃಢವಾದ ಆರ್ಥಿಕ ಚಟುವಟಿಕೆಯ ಸೂಚನೆಯಾಗಿದೆ. ಇದು ಜನರಲ್ಲಿರುವ ಉದ್ಯಮಶೀಲ ಸ್ವಭಾವವನ್ನು ತೋರಿಸುತ್ತದೆ’ ಎಂದಿದ್ದಾರೆ.

2,30,566 ತೆರಿಗೆದಾರರ ನೋಂದಣಿ:

‘ಈ ಜಿಲ್ಲೆಗಳಲ್ಲಿ ಒಟ್ಟು 2,30,566 ತೆರಿಗೆದಾರರು ಜಿಎಸ್‌ಟಿ ಅಡಿ ನೋಂದಾಯಿಸಿದ್ದಾರೆ. ರಾಜ್ಯ ಅಥವಾ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಕೇಂದ್ರ ಜಿಎಸ್‌ಟಿ ಆಡಳಿತದ ಅಡಿಯಲ್ಲಿ ನೋಂದಾಯಿಸಿದ ತೆರಿಗೆದಾರರಿಂದ ₹ 10,172 ಕೋಟಿ ಸಂಗ್ರಹಿಸಲಾಗಿದೆ. 2019-20ನೇ ಸಾಲಿನ ಆಯುಕ್ತಾಲಯದ ಆದಾಯ ₹ 7,677 ಕೋಟಿ ಮತ್ತು 2020-21ರಲ್ಲಿ ₹ 7,124 ಕೋಟಿ ಇತ್ತು. 2021–22ರಲ್ಲಿ ಶೇ 43ರಷ್ಟು ಹೆಚ್ಚಳ ಕಂಡುಬಂದಿದೆ’ ಎಂದು ತಿಳಿಸಿದ್ದಾರೆ.

‘ಉಕ್ಕು, ಸಿಮೆಂಟ್, ಗಣಿಗಾರಿಕೆ, ಸಕ್ಕರೆಯ ಪ್ರಮುಖ ಕೈಗಾರಿಕೆಗಳಿಂದ, ಜೆಎಸ್‌ಡಬ್ಲ್ಯು ಸ್ಟೀಲ್, ಕೆಸೋರಾಮ್ ಇಂಡಸ್ಟ್ರೀಸ್, ಓರಿಯಂಟ್ ಸಿಮೆಂಟ್, ಎನ್‌ಎಂಡಿಸಿ ಮೊದಲಾದವು ಆಯುಕ್ತಾಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಪಾರ ಸಂಖ್ಯೆಯ ವರ್ತಕರು ಕೂಡ ದಾಖಲೆಯ ಜಿಎಸ್‌ಟಿ ಸಂಗ್ರಹಕ್ಕೆ ಕೊಡುಗೆ ನೀಡಿದ್ದಾರೆ’ ಎಂದು ವಿವರಿಸಿದ್ದಾರೆ.

ಸೌಲಭ್ಯ ಕೇಂದ್ರ:

‘ತೆರಿಗೆದಾರರ ಅನುಕೂಲಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಲಾಗಿದೆ ಮತ್ತು ಅವುಗಳನ್ನು ಪರಿಹರಿಸಲು ನಿರ್ದೇಶನಗಳನ್ನು ನೀಡಲಾಗಿದೆ. ವ್ಯಾಪಾರ ಮತ್ತು ಉದ್ಯಮ ಸುಗಮಗೊಳಿಸಲು, ಅರ್ಹವಾದ ಜಿಎಸ್‌ಟಿ ಮರು ಪಾವತಿಗಳ ಸಕಾಲಿಕ ಮಂಜೂರಾತಿ ಖಾತ್ರಿಪಡಿಸಲಾಗಿದೆ. ಸತತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ‘ಆಜಾದಿ ಕಾ ಅಮೃತ್ ಮಹೋತ್ಸ’ವ ಅಂಗವಾಗಿ ವ್ಯಾಪಾರ ಮತ್ತು ಉದ್ಯಮಕ್ಕೆ ನೆರವಾಗಲು ತೆರಿಗೆದಾರರ ಸೌಲಭ್ಯ ಕೇಂದ್ರವನ್ನು ಇಲ್ಲಿ ಆರಂಭಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ತೆರಿಗೆ ವಂಚಕರ ವಿರುದ್ಧವೂ ಉತ್ತಮವಾಗಿ ಕಾರ್ಯನಿರ್ವಹಿಸಲಾಗಿದೆ. 2021ರ ಸೆಪ್ಟೆಂಬರ್‌ನಲ್ಲಿ ಇ-ವೇ ಬಿಲ್ ಇಲ್ಲದೆ ಸಾಗಿಸುತ್ತಿದ್ದ ₹ 7 ಕೋಟಿ ಮೌಲ್ಯದ ಅಡಿಕೆ ಜಪ್ತಿ ಮಾಡಲಾಯಿತು. ಯಶಸ್ವಿಯಾಗಿ ಹರಾಜು ಹಾಕಿ ಜಿಎಸ್‌ಟಿ ಮೊತ್ತ ವಸೂಲಿ ಮಾಡಲಾಗಿದೆ. ಬೇಹುಗಾರಿಕೆ ಅಧಿಕಾರಿಗಳು ₹ 503 ಕೋಟಿ ಹೂಡುವಳಿ ತೆರಿಗೆ ಜಮೆ (ಐಟಿಸಿ)ಯಲ್ಲಿ ಈ ಸಾಲಿನಲ್ಲಿ 101 ಅಪರಾಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಜಿಎಸ್‌ಟಿ ವಸೂಲಿ ಮಾಡಿದ್ದಾರೆ. ಬೇಹುಗಾರಿಕೆ ತಂಡದಿಂದ ₹ 549 ಕೋಟಿ ಬೇಹುಗಾರಿಕೆ ಮತ್ತು ಮರು ಪಡೆಯುವಿಕೆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

‘ಸಮಯಕ್ಕೆ ಸರಿಯಾಗಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಬೇಕು. ದಾವೆಗಳನ್ನು ತಪ್ಪಿಸಿಕೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಆಯುಕ್ತ ಬಸವರಾಜ ನಲೆಗಾವೆ ಕೋರಿದ್ದಾರೆ.

‘ಕೃತಕ ಬುದ್ಧಿಮತ್ತೆ ಪ್ರೇರಿತ ದತ್ತಾಂಶದ ಮೂಲಕ ಮುಂದಿನ ದಿನಗಳಲ್ಲಿ ಸುಸ್ತಿದಾರರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT