ಭಾನುವಾರ, ಆಗಸ್ಟ್ 18, 2019
22 °C

ಗೋಡೆ ಕುಸಿದಿದ್ದರಿಂದ ಮರವೇರಿ ಕುಳಿತಿದ್ದಾರೆ : 2 ದಿನವಾದರೂ ದಂಪತಿ ರಕ್ಷಣೆ ಇಲ್ಲ!

Published:
Updated:

ಬೆಳಗಾವಿ: ತಾಲ್ಲೂಕಿನ ಕಬಲಾಪುರ ಬಳಿಯ ಕಲ್ಯಾಣ್‌ಪೂಲ್‌ ಬಳಿ ರಭಸವಾಗಿ ಹರಿಯುತ್ತಿರುವ ಬಳ್ಳಾರಿ ನಾಲೆಯ ನೀರಿನಲ್ಲಿ ದಂಪತಿ ಸಿಲುಕಿದ್ದು, ಅವರನ್ನು ರಕ್ಷಿಸಲು ತಾಲ್ಲೂಕು ಆಡಳಿತದಿಂದ ನಡೆಸುತ್ತಿರುವ ಪ್ರಯತ್ನ ಬರೋಬ್ಬರಿ 2 ದಿನಗಳು ಕಳೆಯುತ್ತಿದ್ದರೂ ಫಲ ನೀಡಿಲ್ಲ. ಆ ದಂಪತಿಯ ಸ್ಥಿತಿ ಕಂಡು ಜನರು ಮರುಗುತ್ತಿದ್ದಾರೆ.

ಕಲ್ಲಪ್ಪ ಮತ್ತು ರತ್ನವ್ವ ದಂಪತಿ ಸಂಕಷ್ಟದ ಸ್ಥಿತಿಯಲ್ಲಿರುವವರು. ಮಂಗಳವಾರ ಬೆಳಿಗ್ಗೆ 9.30ರ ವೇಳೆಗೆ ಅವರ ಮನೆ ಜಲಾವೃತವಾಗಿತ್ತು. ಕಬಲಾಪುರ ಗ್ರಾಮದ ನಾಗೇಶ ಎನ್ನುವವರು ‘ಪ್ರಜಾವಾಣಿ’ ಪ್ರತಿನಿಧಿಗೆ ಮಾಹಿತಿ ನೀಡಿದ್ದರು. ಕೂಡಲೇ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಅವರ ಗಮನಕ್ಕೆ ಈ ಪ್ರತಿನಿಧಿ ತಂದರು. ಸ್ಪಂದಿಸಿದ ಸಿಇಒ ಕೂಡಲೇ ತಾಲ್ಲೂಕು ಪಂಚಾಯ್ತಿ ಇಒಗೆ ಸೂಚನೆ ನೀಡಿದ್ದರು. ಅವರು, ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ವಿಷಯ ತಿಳಿಸಿ ಸ್ಥಳಕ್ಕೆ ದಾವಿಸಿದರು.

ಬೋಟ್‌ನಲ್ಲಿ ನಡೆಸಿದ ಕಾರ್ಯಾಚರಣೆ ಫಲ ನೀಡಿಲ್ಲ. ಧಾರಾಕಾರ ಮಳೆಯೂ ಸುರಿಯುತ್ತಿರುವುದು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಈ ನಡುವೆ, ಅವರನ್ನು ರಕ್ಷಿಸಲು ಮುಂದಾದ ಯುವಕನೊಬ್ಬ ಕೂಡ ಕೊಚ್ಚಿ ಹೋಗುವ ಹಂತದಲ್ಲಿದ್ದರು. ಕೂಡಲೇ ಮರವನ್ನು ಹಿಡಿದುಕೊಂಡು ಅದನ್ನೇರಿ ಕುಳಿತಿದ್ದರು. ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ, ಎನ್‌ಡಿಆರ್‌ಎಫ್‌ ಸಿಬ್ಬಂದಿ ಯುವಕನನ್ನು ರಕ್ಷಿಸಿದರು. ಆದರೆ, ಮಂಗಳವಾರದಿಂದ ಬುಧವಾರ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರೂ ದಂಪತಿ ರಕ್ಷಿಸಲು ಆಗಿಲ್ಲ.

ಕಾರ್ಯಾಚರಣೆ ಮುಂದುವರಿದಿದೆ. ಸಂಜೆ ಮನೆಯ ಗೋಡೆಯೂ ಬಿದ್ದು ಹೋಗಿದ್ದರಿಂದ, ದಂಪತಿ ಹಗ್ಗ ಕಟ್ಟಿಕೊಂಡು ಪಕ್ಕದಲ್ಲಿದ್ದ ಮಾವಿನ ಮರ ಏರಿ ಕುಳಿತಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ. ನೀರು ರಭಸವಾಗಿ ಹರಿಯುತ್ತಿರುವುದರಿಂದ, ಮಿಲಿಟರಿ ಪಡೆಯಿಂದಲೂ ರಕ್ಷಣೆ ಆಗಿಲ್ಲ. ಕ್ರೇನ್‌ನಿಂದ ನಡೆಸಿದ ಪ್ರಯತ್ನವೂ ಕೈಗೂಡಲಿಲ್ಲ. ಹೆಲಿಕಾಪ್ಟರ್‌ ತರಿಸುವುದೂ ಸಾಧ್ಯವಾಗಿಲ್ಲ.

ಸ್ಥಳಕ್ಕೆ ಶಾಸಕರಾದ ಸತೀಶ ಜಾರಕಿಹೊಳಿ, ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ತಹಶೀಲ್ದಾರ್‌ ಮಂಜುಳಾ ನಾಯಕ ಭೇಟಿ ನೀಡಿದ್ದರು.

Post Comments (+)