ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ, ನಗರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ವಕೀಲರ ಪರಿಷತ್ ಯಶಸ್ವಿಯಾಯಿತು. ವಕೀಲರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 15ರಂದು ಚರ್ಚೆಗೆ ಆಹ್ವಾನಿಸಿದರು.
ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ತು, ನ್ಯಾಯಪೀಠ– ಕೂಡಲಸಂಗಮ, ಜಿಲ್ಲಾ ವಕೀಲರ ಪರಿಷತ್ ಆಶ್ರಯದಲ್ಲಿ ರಾಜ್ಯದ ವಿವಿಧೆಡೆಯಿಂದ ಪಂಚಮಸಾಲಿ ಸಮಾಜದ ವಕೀಲರು ಸಮಾವೇಶಗೊಂಡರು. ಇಡೀ ದಿನ ಚರ್ಚೆ ನಡೆಸಿದರು.
ಒಂದೇ ವಾರದಲ್ಲಿ ಭೇಟಿಯಾಗಲು ಮುಖ್ಯಮಂತ್ರಿ ಸಮಯ ನೀಡಬೇಕು, ಇಲ್ಲದಿದ್ದರೆ ಈ ಸ್ಥಳದಿಂದಲೇ ಉಗ್ರ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ವಕೀಲರು ಪಟ್ಟು ಹಿಡಿದರು. ಈ ಮಧ್ಯೆ ಸಮಾವೇಶದ ವೇದಿಕೆಗೆ ಬಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಮೀಸಲಾತಿ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಅವರು ಅಕ್ಟೋಬರ್ 15ರಂದು ಸಮಯ ನೀಡಿದ್ದಾರೆ’ ಎಂದು ತಿಳಿಸಿದರು.
ಇದಕ್ಕೆ ಒಪ್ಪದ ವಕೀಲರು ಗದ್ದಲ ಆರಂಭಿಸಿದರು. ಸ್ವತಃ ಸಿದ್ದರಾಮಯ್ಯ ಅವರೇ ಸ್ವಾಮೀಜಿ ಅವರಿಗೆ ಫೋನ್ ಮಾಡಿ ತಿಳಿಸಬೇಕು ಎಂದು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಶಾಸಕ ವಿನಯ ಕುಲಕರ್ಣಿ ಅವರು ಸಿದ್ದರಾಮಯ್ಯ ಅವರಿಗೆ ಮೊಬೈಲ್ ಕರೆ ಮಾಡಿ ಶ್ರೀಗಳ ಕೈಗೆ ಕೊಟ್ಟರು.
‘ಈಗ ದಸರಾ ಹಬ್ಬವಿದೆ. ಮುಗಿದ ಬಳಿಕ ಎಲ್ಲರೂ ಕುಳಿತು ಮಾತನಾಡೋಣ. ಹೋರಾಟ ಮುಂದುವರಿಸಬೇಡಿ’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಇಷ್ಟಕ್ಕೆ ಸುಮ್ಮನಾಗದ ಹಲವು ವಕೀಲರು, ಇಂಥ ಭರವಸೆ ಸಾಕಷ್ಟು ಕೇಳಿದ್ದೇವೆ. ಇದಕ್ಕೆ ಒಪ್ಪುವುದು ಬೇಡ ಎಂದರು. ಈಗಲೇ ರಾಣಿ ಚನ್ನಮ್ಮ ವೃತ್ತಕ್ಕೆ ಹೋಗಿ ಹೋರಾಟ ಆರಂಭಿಸೋಣ ಎಂದರು. ಪರ– ವಿರೋಧ ಚರ್ಚೆಗೆ ಆರಂಭವಾಗಿ ಇಡೀ ಸಭಾಂಗಣ ಗದ್ದಲದಿಂದ ಕೂಡಿತು.
‘ವೃತ್ತದಲ್ಲಿ ಈದ್ ಮಿಲಾದ್ ಅಂಗವಾಗಿ ಮುಸ್ಲಿಮರ ಬೃಹತ್ ಮೆರವಣಿಗೆ ನಡೆದಿದೆ. ನಾವೂ ಅಲ್ಲಿಗೆ ನುಗ್ಗಿದರೆ ಗೊಂದಲ ಮೂಡಬಹುದು. ಕೋಮು ಸೌಹಾರ್ದ ಕದಡುವುದು ಬೇಡ’ ಎಂದು ಶಾಸಕರಾದ ವಿನಯ ಕುಲಕರ್ಣಿ, ಎಸ್.ಎಸ್.ಪಾಟೀಲ ಮನವಿ ಮಾಡಿದರು. ನಂತರ ಸ್ವಾಮೀಜಿ ಹಾಗೂ ಕೆಲವು ವಕೀಲರು ವೃತ್ತಕ್ಕೆ ತೆರಳಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮಾತ್ರ ವೇದಿಕೆ ಮೇಲೆ ಕೂಡಿಸಿ, ಎಲ್ಲ ಜನಪ್ರತಿನಿಧಿಗಳು, ನಾಯಕರನ್ನು ಕೆಳಗೆ ಕೂರಿಸಲಾಯಿತು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಭಾನುವಾರ ನಡೆದ ವಕೀಲರ ಪರಿಷತ್‌ನಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಿರ್ಣಯ ಮಂಡಿಸಿದರು
ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.