ಭಾನುವಾರ, ಡಿಸೆಂಬರ್ 5, 2021
27 °C
ಕಾನೂನು ಹೋರಾಟಕ್ಕೆ ನಿರ್ಧಾರ

ಬೆಳಗಾವಿ: 40 ಮನೆಗಳ ತೆರವಿಗೆ ವಕ್ಫ್ ಮಂಡಳಿ ಆದೇಶ; ನಿವಾಸಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಹೊರವಲಯದಲ್ಲಿರುವ ಆನಂದವಾಡಿಯ 40 ಮನೆಗಳನ್ನು ತೆರವು ಮಾಡಬೇಕು ಎನ್ನುವ ವಕ್ಫ್‌ ಮಂಡಳಿಯ ಆದೇಶ ಖಂಡಿಸಿ ನಿವಾಸಿಗಳು ಹಾಗೂ ಶ್ರೀರಾಮಸೇನೆ ಹಿಂದೂಸ್ತಾನ ಸಂಘಟನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

‘ಸುಮಾರು 100 ವರ್ಷಗಳಿಂದ ನಿರ್ಮಾಣಗೊಂಡಿರುವ ಮನೆಗಳನ್ನು ತೆರವುಗೊಳಿಸಲು ಆದೇಶ ಬಂದಿರುವುದು ಖಂಡನಾರ್ಹ. ಹಿಂದಿನಿಂದಲೂ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದೇವೆ. ಈಗ ಏಕಾಏಕಿ ತೆರವುಗೊಳಿಸಿ ಎಂದರೆ ಹೇಗೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆನಂದವಾಡಿಯ ಜಾಗಕ್ಕಾಗಿ ವಕ್ಫ್‌ ಮಂಡಳಿ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಅದರಂತೆ ಈಗ ಈ ಎಲ್ಲ ಮನೆಗಳನ್ನು ತೆರವುಗೊಳಿಸಿ ಜಾಗ ಮರಳಿಸುವಂತೆ ಮಂಡಳಿ ಆದೇಶ ಹೊರಡಿಸಿದ್ದಕ್ಕೆ ಪೊಲೀಸರು ಅಲ್ಲಿನ ನಿವಾಸಿಗಳಿಗೆ ನೋಟಿಸ್ ನೀಡಲು ಗುರುವಾರ ಬಂದಿದ್ದಾರೆ. ನೋಟಿಸ್ ನೀಡುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಸಂಘಟನೆಯ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಪೊಲೀಸರು ಸಮಾಧಾನಪಡಿಸಲು ಯತ್ನಿಸಿದರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸ್ಥಳದಲ್ಲಿ ಗೊಂದಲದ ವಾತಾವರಣ ನಿಮಾಣವಾಗಿತ್ತು.

‘ಈಗ ಏಕಾಏಕಿ ನೋಟಿಸ್ ನೀಡಿ ಮನೆಗಳನ್ನು ತೆರವುಗೊಳಿಸಿ ಎಂದು ಹೇಳಿದರೆ ನಾವು ಬದುಕುವುದಾದರೂ ಹೇಗೆ. ಇಂತಹ ಅವೈಜ್ಞಾನಿಕ ಹಾಗೂ ರಾಜಕೀಯಪ್ರೇರಿತ ನೋಟಿಸ್‌ನಿಂದ ನಾವು ಮನೆ ಕಳೆದುಕೊಳ್ಳಬೇಕಾಗುತ್ತದೆ. ಬೀದಿಗೆ ಬೀಳಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಯಾವುದೇ ಕಾರಣಕ್ಕೂ ನಮ್ಮ ಮನೆಗಳನ್ನು ಬಿಟ್ಟುಕೊಡುವುದಿಲ್ಲ. ಎಲ್ಲ ರೀತಿಯ ತೆರಿಗೆಯನ್ನೂ ಪ್ರತಿ ತಿಂಗಳೂ ತುಂಬುತ್ತಿದ್ದೇವೆ. ಈಗ ಮನೆಗಳನ್ನು ತೆರವುಗೊಳಿಸಿ ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅನೇಕ ವರ್ಷಗಳಿಂದ ನಾವು ಆನಂದವಾಡಿಯಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದೇವೆ. ಈಗ ಈ ಜಾಗ ನಮಗೆ ಸೇರಿದೆ, ಒತ್ತುವರಿಯಾಗಿದೆ ಎಂದು ಹೇಳಿ ಮಂಡಳಿಯವರು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಜಾಗ ಬಿಟ್ಟು ಕೊಡುವುದಿಲ್ಲ. ನೋಟಿಸ್ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ’ ಎಂದು ತಿಳಿಸಿದರು.

ಇನ್‌ಸ್ಪೆಕ್ಟರ್‌ ರಾಘವೇಂದ್ರ ಹವಾಲ್ದಾರ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಅವರ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ‘ಮಂಡಳಿಯ ಆದೇಶದ ನೋಟಿಸ್‌ ಕೊಡಲು ನಮ್ಮ ಸಿಬ್ಬಂದಿ ಬಂದಿದ್ದಾರಷ್ಟೆ; ತೆರವುಗೊಳಿಸಲು ಅಲ್ಲ. ನಮ್ಮ ಕೆಲಸ ನಿರ್ವಹಣೆಗೆ ಬಂದಿದ್ದೇವಷ್ಟೆ’ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ನಿತಿನ್ ಜಾಧವ, ಶ್ರೀರಾಮಸೇನೆ ಹಿಂದೂಸ್ತಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ, ಎಂಇಎಸ್ ಮುಖಂಡ ಶುಭಂ ಶೇಳಕೆ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು