ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ರೂಟ್ಸ್‌ ಮಾದರಿಯಲ್ಲೇ ಪಹಣಿಗೆ ಆಧಾರ್ ಕಾರ್ಡ್ ಜೋಡಿಸಿ: ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ
Published : 31 ಜನವರಿ 2024, 15:44 IST
Last Updated : 31 ಜನವರಿ 2024, 15:44 IST
ಫಾಲೋ ಮಾಡಿ
Comments

ಬೆಳಗಾವಿ: ‘ಹಣ ದುರ್ಬಳಕೆ ಹಾಗೂ ಅಕ್ರಮ ಪ್ರಕರಣಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ(ಫ್ರೂಟ್ಸ್‌) ಮಾದರಿಯಲ್ಲೇ ಪಹಣಿಗೆ ಆಧಾರ್ ಕಾರ್ಡ್ ಜೋಡಿಸುವ ಕೆಲಸ ಆರಂಭವಾಗಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಕಂದಾಯ ಇಲಾಖೆಯ ಬೆಳಗಾವಿ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಹಲವು ಜಿಲ್ಲೆಗಳಲ್ಲಿ ಯಾರದ್ದೋ ಕೃಷಿಭೂಮಿಯ ಪರಿಹಾರವನ್ನು ಅದೇ ಹೆಸರಿನ ಮತ್ಯಾರಿಗೋ ನೀಡಿರುವ, ಒಂದು ಜಿಲ್ಲೆಯ ರೈತರ ಪರಿಹಾರ ಮತ್ತೊಂದು ಜಿಲ್ಲೆಯವರಿಗೆ ಕೊಟ್ಟಿರುವ ಮತ್ತು ವಿವಿಧ ರೀತಿಯಲ್ಲಿ ಹಣ ದುರುಪಯೋಗವಾದ ಪ್ರಕರಣ ಗಮನಕ್ಕೆ ಬಂದಿವೆ. ಪಹಣಿಗೆ ಆಧಾರ್ ಜೋಡಿಸುವ ಮೂಲಕ ಇಂತಹ ಅಕ್ರಮ ತಡೆಗಟ್ಟಬಹುದು. ಎಲ್ಲ ಅಧಿಕಾರಿಗಳು ಮುತುವರ್ಜಿ ವಹಿಸಿ ಈ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಕಂದಾಯ ಗ್ರಾಮಗಳ ರಚನೆಗಾಗಿ ಬೆಳಗಾವಿ ಜಿಲ್ಲೆಯಲ್ಲಿ 164 ಕಂದಾಯೇತರ ಜನವಸತಿ ಗುರುತಿಸಲಾಗಿದೆ. ಇನ್ನೊಮ್ಮೆ‌ ಪರಿಶೀಲಿಸುವ ಮೂಲಕ ಕೈಬಿಟ್ಟು ಹೋಗಿರುವ ಜನವಸತಿಗಳನ್ನು ಗುರುತಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಸೂಚಿಸಿದ ಸಚಿವರು, ‘ಈ ಬಾರಿ ಕಂದಾಯ ಗ್ರಾಮಗಳ ಜನರಿಗೆ ಡಿಜಿಟಲ್ ಹಕ್ಕುಪತ್ರ ನೀಡಿ, ನೋಂದಣಿ ಮಾಡಿಕೊಡಲು ಯೋಜನೆ ರೂಪಿಸಲಾಗುತ್ತಿದೆ. ನಕಲು ಮತ್ತು ತಿದ್ದುಪಡಿ ತಡೆಯುವುದು ಹಾಗೂ ಶಾಶ್ವತ ದಾಖಲೆಯಾಗಿ ಸಂರಕ್ಷಿಸಲು ಅನುಕೂಲ ಕಲ್ಪಿಸುವುದೇ ಇದರ ಉದ್ದೇಶವಾಗಿದೆ’ ಎಂದರು.

ಆ್ಯಪ್‌ ಬಿಡುಗಡೆ ಶೀಘ್ರ: ‘ಎಲ್ಲ ಜಿಲ್ಲೆಗಳಲ್ಲಿ ಆಗಿರುವ ಸರ್ಕಾರಿ ಆಸ್ತಿ ಒತ್ತುವರಿ ದೊಡ್ಡ ಸಮಸ್ಯೆಯಾಗಿದೆ. ಈ ವಿಚಾರವಾಗಿ ಮುಖ್ಯಂತ್ರಿಗಳಿಗೆ ಉತ್ತರ ನೀಡುವುದೇ ಕಷ್ಟವಾಗಿದೆ. ಮೊದಲು ನಮ್ಮ ದಾಖಲೆಯಲ್ಲಿನ ಸರ್ಕಾರಿ ಭೂಮಿ ಗುರುತಿಸಿ, ರಕ್ಷಿಸುವ ಕೆಲಸ ಆಗಬೇಕು. ಸರ್ಕಾರಿ ಭೂಮಿ ಗುರುತಿಸಲು ಅಭಿವೃದ್ಧಿಪಡಿಸಿದ ‘ಬೀಟ್’ ಆ್ಯಪ್ ಶೀಘ್ರ ಬಿಡುಗಡೆಗೊಳಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳು ಈ ಆ್ಯಪ್ ಬಳಸಿ ಸರ್ಕಾರಿ ಭೂಮಿ ಗುರುತಿಸಿ, ಒತ್ತುವರಿ ತೆರವಿಗೆ ತಹಶೀಲ್ದಾರರಿಗೆ ಪ್ರಸ್ತಾವ ಸಲ್ಲಿಸಬೇಕು. ಮೂರು ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಸರ್ಕಾರಿ ಭೂಮಿಗೆ ತೆರಳಿ ಪರಿಶೀಲಿಸಿ, ಆ್ಯಪ್‌ನಲ್ಲಿ ಮಾಹಿತಿ ದಾಖಲಿಸುತ್ತಿರಬೇಕು’ ಎಂದು ನಿರ್ದೇಶನ ನೀಡಿದರು.

ಇ-ಆಫೀಸ್ ಬಳಸದವರಿಗೆ ನೋಟಿಸು

‘ಕಡ್ಡಾಯವಾಗಿ ಇ-ಆಫೀಸ್ ಬಳಸುವಂತೆ ಸೂಚಿಸಿ ಆರು ತಿಂಗಳಾಗಿದೆ. ಬೆಳಗಾವಿಯ ಎಲ್ಲ ತಾಲ್ಲೂಕುಗಳಲ್ಲೂ ಇದನ್ನು ಬಳಸಲಾಗುತ್ತಿದೆ ಎಂದು ವರದಿ ನೀಡಿದ್ದೀರಿ. ಜನರಿಗೆ ಸರ್ಕಾರಿ ಸೇವೆ ಶೀಘ್ರ ನೀಡುವ ಉದ್ದೇಶದಿಂದ ಜಾರಿಗೊಳಿಸಿದ ಇ-ಆಫೀಸ್ ಮೂಲಕವೇ ಎಲ್ಲ ತಹಶೀಲ್ದಾರರು ಕಡತಗಳ ವಿಲೇವಾರಿ ಮಾಡಬೇಕು. ಶೇ 80ಕ್ಕೂ ಹೆಚ್ಚು ಕಡತಗಳನ್ನು ಇ-ಆಫೀಸ್ ಮೂಲಕ ವಿಲೇವಾರಿಗೊಳಿಸದ ಅಧಿಕಾರಿಗಳಿಗೆ ನೋಟಿಸು ನೀಡಲಾಗುವುದು’ ಎಂದು ಎಚ್ಚರಿಕೆ ಕೊಟ್ಟರು.

ಒಪ್ಪಂದ ಮಾಡಿಕೊಳ್ಳಿ: ‘ಬೆಳಗಾವಿ ಜಿಲ್ಲೆಯಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿಲ್ಲ‌. ಆದರೆ, ಬೇಸಿಗೆಯಲ್ಲಿ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ. ಕುಡಿಯುವ ನೀರಿನ ಕೊರತೆ ಕಂಡುಬಂದಾಗ ತಕ್ಷಣವೇ ನೀರು ಪೂರೈಸಲು ಅನುಕೂಲವಾಗುವಂತೆ ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಮುಂಚಿತವಾಗಿಯೇ ಒಪ್ಪಂದ ಮಾಡಿಕೊಳ್ಳಬೇಕು. ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಒಂದು ಸಮಿತಿ ರಚಿಸಿ, ಕುಡಿಯುವ ನೀರು ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಬರದ ಸಂದರ್ಭ ಟ್ಯಾಂಕರ್ ಹಾಗೂ ಕೊಳವೆಬಾವಿ ಬಾಡಿಗೆಯನ್ನು ಎಸ್‌ಡಿಆರ್‌ಎಫ್ ಅನುದಾನದಲ್ಲಿ ಪಾವತಿಸಬಹುದು’ ಎಂದು ಸಲಹೆ ನೀಡಿದರು.

ಕಂದಾಯ ನಿರೀಕ್ಷಕರಿಗೂ ಲ್ಯಾಪ್‌ಟಾಪ್ ಒದಗಿಸುವ ಮೂಲಕ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ಡಿಜಿಟಲೀಕರಣ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು
– ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT