ಮಂಗಳವಾರ, ಏಪ್ರಿಲ್ 13, 2021
30 °C
ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ವಿವಿಧ ಉದ್ಯಮ

ಬೆಳಗಾವಿಯಲ್ಲಿ ₹ 543 ಕೋಟಿ ಹೂಡಿಕೆ, 540 ಉದ್ಯೋಗ: ಕೈಗಾರಿಕಾ ಇಲಾಖೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ₹ 543.8 ಕೋಟಿ ಹೂಡಿಕೆಗೆ ಪ್ರಸ್ತಾವ ಬಂದಿದೆ. ಇದರಿಂದ ಅಂದಾಜು 540 ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ. ಸ್ಥಳೀಯರಿಗೆ ಹೆಚ್ಚಿನ   ಉದ್ಯೋಗಾವಕಾಶ ಲಭಿಸಲಿದೆ ಎಂದು ಆಶಿಸಲಾಗಿದೆ. ಇದರೊಂದಿಗೆ, ಕೋವಿಡ್–19ನಿಂದ ಕಂಗಾಲಾಗಿದ್ದ ಉದ್ಯಮ ವಲಯ ಮತ್ತೆ ಚೇತರಿಕೆಯ ಹಾದಿಗೆ ಬಂದಿರುವುದಕ್ಕೆ ನಿದರ್ಶನವಾಗಿದೆ ಎಂದು ಕೈಗಾರಿಕಾ ಇಲಾಖೆ ತಿಳಿಸಿದೆ.

ಅಥಣಿ ತಾಲ್ಲೂಕಿನ ಕೊಕಟನೂರ ಬಳಿ ಸಾವ್ಸನ್‌ ಡಿಸ್ಟಿಲ್‌ ಪ್ರೈ.ಲಿ.ನವರು ₹ 122.53 ಕೋಟಿ ಯೋಜನಾ ವೆಚ್ಚದಲ್ಲಿ ಘಟಕ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಇದರಿಂದ 100 ಉದ್ಯೋಗ ಸೃಷ್ಟಿಯಾಗಲಿದೆ. ಎಥೆನಾಲ್‌ ಹಾಗೂ ಕಾರ್ನ್‌ ಆಯಲ್‌ ತಯಾರಿಕಾ ಘಟಕವಿದು. ಇದು ಡಿಸೆಂಬರ್‌ ವೇಳೆಗೆ ಆರಂಭವಾಗುವ ನಿರೀಕ್ಷೆ ಇದೆ.

ಮ್ಯಾಗ್ನಮ್‌ ಟರ್ಫ್‌ ಇಂಡಿಯಾ ಪ್ರೈ. ಕಂಪನಿಯು ನಿಪ್ಪಾಣಿ ತಾಲ್ಲೂಕಿನ ನಾಯಿಂಗ್ಲಜದಲ್ಲಿ ₹ 55 ಕೋಟಿ ಯೋಜನಾ ವೆಚ್ಚದಲ್ಲಿ ಆರ್ಕಿಟೆಕ್ಚರ್‌ ಮತ್ತು ಆಟೋಮೊಟಿವ್ ಗ್ಲಾಸ್‌ ಪ್ರೊಸೆಸಿಂಗ್‌ ಘಟಕಕ್ಕೆ ಅನುಮತಿ ಪಡೆದಿತ್ತು. ಇದು ಈಗಾಗಲೇ ಆರಂಭಗೊಂಡಿದೆ. ಇದರಿಂದ ಒಟ್ಟು 50 ಮಂದಿಗೆ ಕೆಲಸ ಸಿಗಲಿದೆ. ಗಾಜು ಕಾರ್ಖಾನೆ ಇದಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ– ಚಿಕ್ಕೋಡಿ ಸಂಸದ ಅಣ್ಣಾಸಾಬೇಬ ಜೊಲ್ಲೆ ದಂಪತಿಯ ಪುತ್ರ ಬಸವಪ್ರಸಾದ ಜೊಲ್ಲೆ ಇದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದರೊಂದಿಗೆ ಆ ಭಾಗದಲ್ಲಿ ಅವರು ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ
ರಾಯಬಾಗ ತಾಲ್ಲೂಕಿನ ಅಳಗವಾಡಿಯಲ್ಲಿ ಆಸ್ಕಿನ್‌ ಬಯೊಫ್ಯುಯೆಲ್‌ ಪ್ರೈ.ಲಿ. ಕಂಪನಿಯು ₹ 85 ಕೋಟಿ ವೆಚ್ಚದಲ್ಲಿ ಎಥೆನಾಲ್‌ ಹಾಗೂ ಜೈವಿಕ ರಸಗೊಬ್ಬರ ಘಟಕ ಸ್ಥಾಪಿಸುತ್ತಿದೆ. ₹  85 ಕೋಟಿ ವೆಚ್ಚದ ಈ ಯೋಜನೆಯಲ್ಲಿ 80 ಉದ್ಯೋಗ ಸೃಷ್ಟಿಯ ಉದ್ದೇಶವಿದೆ. ಇದು ಮುಂದಿನ ಜನವರಿಗೆ ಆರಂಭಗೊಳ್ಳುವ ಸಾಧ್ಯತೆ ಇದೆ.

ರಾಮದುರ್ಗ ತಾಲ್ಲೂಕಿನ ಜಾಲಿಕಟ್ಟಿಯಲ್ಲಿ ಸಕ್ಕರೆ, ಮತ್ತು ಉಪ ಉತ್ಪನ್ನಗಳ ಘಟಕವನ್ನು ಸ್ಥಾಪಿಸಲು ಶ್ರೀದೇವಿ ಶುಗರ್ಸ್‌ ಪ್ರೈ.ಲಿ. ಮುಂದಾಗಿದೆ. ₹281.27 ಕೋಟಿ ಹೂಡಿಕೆ ಮಾಡುತ್ತಿದ್ದು, ಇದರಿಂದ 310 ಉದ್ಯೋಗ ಸೃಷ್ಟಿಯಾಗಲಿದೆ.

‘ಈ ಉದ್ಯಮಗಳಿಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಒಪ್ಪಂದವಾಗಿತ್ತು. ಈಗ ಅನುಷ್ಠಾನದ ಹಂತದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಆ ಭಾಗದವರಿಗೆ ಕೆಲಸಗಳು ದೊರೆಯಲಿವೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅನುಕೂಲ ಕಲ್ಪಿಸಲಾಗಿದೆ
‘ಬೆಂಗಳೂರು ನಗರದಂತೆಯೇ ರಾಜ್ಯದ 2ನೇ ಹಾಗೂ 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಹೂಡಿಕೆದಾರರಿಗೆ, ನೂತನ ಕೈಗಾರಿಕಾ ನೀತಿಯಲ್ಲಿ ಸಾಕಷ್ಟು ವಿಶೇಷ ಅನುಕೂಲಗಳನ್ನು ಮಾಡಲಾಗಿದೆ. ಹೂಡಿಕೆ ಮಾಡುವ ಕೈಗಾರಿಕೆಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಿದೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

‘ರಾಜ್ಯದ ಇತರ ಜಿಲ್ಲೆಗಳಲ್ಲೂ ಕೈಗಾರಿಕೆಗಳ ಸ್ಥಾಪನೆ ಹಾಗೂ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಉತ್ತಮ ಸಾರಿಗೆ ಸಂಪರ್ಕ, ಉತ್ತಮ ಮಾನವ ಸಂಪನ್ಮೂಲ ಸೇರಿ ಹಲವಾರು ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಇದರಿಂದಾಗಿ ರಾಜ್ಯ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಯನ್ನು ಕೈಗಾರಿಕೆಗಳ ಬೆಳವಣಿಗೆಯ ದೃಷ್ಟಿಯಿಂದ ತ್ರಿವಳಿ ನಗರಗಳನ್ನಾಗಿ ಬೆಳೆಸಲಾಗುವುದು. ಈ ನಿಟ್ಟಿನಲ್ಲಿ ಹೊಸದಾಗಿ ಹೂಡಿಕೆಗೆ ಕ್ರಮ ವಹಿಸಲಾಗುತ್ತಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು