ಮಂಗಳವಾರ, ಜೂನ್ 15, 2021
27 °C
ವಾಹನ ಬಳಸಲು ಅವಕಾಶವಿಲ್ಲದ್ದಕ್ಕೆ ಗ್ರಾಮೀಣರಿಗೆ ತೊಂದರೆ

ಬೆಳಗಾವಿ: ಅಗತ್ಯ ವಸ್ತುಗಳಿಗೆ ಪರದಾಟ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ಜಾರಿಗೊಳಿಸಿರುವ ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶವಿದೆ. ಆದರೆ, ವಾಹನಗಳಲ್ಲಿ ಬರುವಂತಿಲ್ಲ; ನಡೆದುಕೊಂಡೇ ತೆರಳಬೇಕು’ ಎಂಬ ಸರ್ಕಾರದ ಆದೇಶವು ಗ್ರಾಮೀಣ ಜನರಿಗೆ ತೊಡಕಾಗಿ ಪರಿಣಮಿಸಿದೆ.

ಬಹುತೇಕ ಹಳ್ಳಿಗಳಲ್ಲಿ ದಿನಸಿ, ತರಕಾರಿ ಮೊದಲಾದವುಗಳು ಸಿಗುವ ಅಂಗಡಿಗಳಿರುವುದಿಲ್ಲ. ಪಕ್ಕದಲ್ಲಿರುವ ದೊಡ್ಡ ದೊಡ್ಡ ಗ್ರಾಮಗಳು, ಪಟ್ಟಣ, ಹೋಬಳಿ, ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಿನ ಅಂಗಡಿಗಳನ್ನು ಅಥವಾ ಮಾರುಕಟ್ಟೆಯನ್ನು ಅವಲಂಬಿಸಿರುತ್ತಾರೆ. ಹೀಗೆ ಹೋಗಿ ಬರುವುದಕ್ಕೆ ಅವರು ಕಿ.ಮೀ.ಗಟ್ಟಲೆ ನಡೆದುಕೊಂಡೇ ಕ್ರಮಿಸಬೇಕು ಎನ್ನುವ ನಿಯಮ ಅವರನ್ನು ಹೈರಾಣಾಗಿದೆ. ಎಲ್ಲ ಸಾಮಗ್ರಿಗಳನ್ನು ಹೊತ್ತುಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ತೋಟಗಳಲ್ಲಿರುತ್ತಾರೆ:

ಜಿಲ್ಲೆಯಲ್ಲಿ ಹಲವು ತಾಲ್ಲೂಕುಗಳಲ್ಲಿ ಜನರು ದೂರದ ತೋಟಪಟ್ಟಿಗಳಲ್ಲಿ ವಾಸಿಸುತ್ತಾರೆ. ಅವರು ದ್ವಿಚಕ್ರವಾಹನಗಳಲ್ಲಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದರು. ಆದರೆ, ಅದಕ್ಕೆ ಅವಕಾಶ ಇಲ್ಲದಿರುವುದು ಅವರ ತಲೆನೋವಿಗೆ ಕಾರಣವಾಗಿದೆ. ಈಗಾಗಲೇ ಪರದಾಟ ಆರಂಭವಾಗಿದೆ. ಮೇ 24ರವರೆಗೂ ಲಾಕ್‌ಡೌನ್‌ ಇರುವುದರಿಂದ ಪರದಾಟ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ. ಕೆಲವೆಡೆ, ವೃದ್ಧರಷ್ಟೆ ಇದ್ದು ಅವರು ಬಹಳ ದೂರದವರೆಗೆ ನಡೆದುಕೊಂಡು ಬಂದು ಸಾಮಗ್ರಿಗಳನ್ನು ಒಯ್ಯುವಷ್ಟು ಶಕ್ತಿ ಇರುವುದಿಲ್ಲ. ನಗರದ ಹೊರವಲಯದ ಪ್ರದೇಶಗಳು ಹಾಗೂ ನಗರವನ್ನೇ ನಂಬಿದ್ದ ಹಳ್ಳಿಗಳ ಜನರ ಸ್ಥಿತಿಯೂ ಇದೇ ಆಗಿದೆ.

ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಇದೆಯಾದಾದರೂ, ಎಲ್ಲ ಹಳ್ಳಿಗಳಿಗೂ ಅವರು ಬರುವುದಿಲ್ಲ. ಇನ್ನು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ, ಪಡಿತರ ಆಹಾರ ಧಾನ್ಯವನ್ನು ದ್ವಿಚಕ್ರವಾಹನದಲ್ಲಿ ತರುವುದಕ್ಕೂ ಅನುಮತಿ ಕೊಡದಿರುವುದರಿಂದ ಅವರಿಗೆ ತೊಂದರೆ ಆಗುತ್ತಿದೆ. ಪೊಲೀಸರು ದ್ವಿಚಕ್ರವಾಹನಗಳನ್ನು ಜಪ್ತಿ ಮಾಡುತ್ತಿರುವುದು ಅವರನ್ನು ಆತಂಕಕ್ಕೆ ದೂಡಿದೆ.

ದ್ವಿಚಕ್ರವಾಹನಕ್ಕೆ ಅವಕಾಶ ಕೊಡಿ:

ಗ್ರಾಮಗಳಲ್ಲೇ ಮನೆಗಳಿದ್ದರೆ ನಡೆದು ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಿ ತರಬಹುದು. ತೋಟದ ವಸತಿಗಳಲ್ಲಿರುವವರು ಸರಾಸರಿ ಐದಾರು ಕಿ.ಮೀ.  ಕ್ರಮಿಸಲು ನಡೆದುಕೊಂಡು ಹೋಗುವುದು ಕಷ್ಟವಾಗುತ್ತದೆ. ಅಲ್ಲದೇ, ನಿಗದಿತ ಸಮಯದಲ್ಲೇ ಬರಬೇಕು ಎನ್ನುವ ನಿಯಮವೂ ಇದೆ. ಜೊತೆಗೆ ಹೊತ್ತು ತರುವುದಕ್ಕೆ ಕಷ್ಟವಾಗುತ್ತದೆ. ದಿನಸಿ ಮೊದಲಾದ ಅವಶ್ಯ ಸಾಮಗ್ರಿಗಳನ್ನು ಖರೀದಿಸಲು ದ್ವಿಚಕ್ರವಾಹನಗಳಲ್ಲಿ ಸಂಚರಿಸಲು ಅವಕಾಶ ಕೊಡಬೇಕು’ ಎಂಬ ಮನವಿ ಅವರದು.

‘ಹಳ್ಳಿಗಳಲ್ಲಿ ಜನರು ಒಂದೊಂದೆ ದ್ವಿಚಕ್ರವಾಹನ ಇಟ್ಟಿರುತ್ತಾರೆ. ಅದನ್ನೂ ಜಪ್ತಿ ಮಾಡಿದರೆ ಆಸ್ಪತ್ರೆ ಸೇರಿದಂತೆ ತುರ್ತು ಕೆಲಸಕ್ಕೆ ಹೋಗಬೇಕಾದ ಪ್ರಸಂಗ ಎದುರಾದರೆ ಏನು ಮಾಡಬೇಕು. ಅನಗತ್ಯವಾಗಿ ಓಡಾಡುವವರ ಮೇಲೆ ಕ್ರಮ ಕೈಗೊಳ್ಳಲಿ. ಆದರೆ, ತೋಟಪಟ್ಟಿಗಳಿಂದ ಅವಶ್ಯ ಸಾಮಗ್ರಿಗಳಿಗಾಗಿ ಬರುವವರ ಮೇಲೆ ಕ್ರಮ ಜರುಗಿಸಬಾರದು’ ಎಂಬ ಒತ್ತಾಯ ಕೇಳಿಬಂದಿದೆ.

‘ತಡೆಯಬೇಕು’

ಇನ್ನೊಂದೆಡೆ, ಕಿರಾಣಿ ಅಂಗಡಿಗಳವರು ಪಟ್ಟಣ, ತಾಲ್ಲೂಕು ಕೇಂದ್ರ ಅಥವಾ ಜಿಲ್ಲಾ ಕೇಂದ್ರ‌ಕ್ಕೆ ಬಂದು ಸಾಮಗ್ರಿಗಳನ್ನು ಖರೀದಿಸಿ ಹೋಗುವುದಕ್ಕೂ ತೊಂದರೆ ಆಗುತ್ತಿದೆ. ಹೀಗಾಗಿ, ಕೆಲವರು ಇರುವ ಸಾಮಗ್ರಿಗಳನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ ಮತ್ತು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಇದಕ್ಕೆ ತಡೆ ಹಾಕಬೇಕು ಎನ್ನುವ ಆಗ್ರಹ ಜನರದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು