ಬುಧವಾರ, ಏಪ್ರಿಲ್ 14, 2021
24 °C
ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ವಿಜ್ಞಾನಕ್ಕೆ ಭಾರತೀಯರ ಕೊಡುಗೆ ಅಪಾರ: ಸೌರಭ ಕುಲಕರ್ಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಭಾರತೀಯ ಸಂಸ್ಕೃತಿಯು ವಿಜ್ಞಾನದ ತಳಹದಿಯ ಮೇಲೆ ನಿಂತಿದೆ’ ಎಂದು ಕೆ.ಎಲ್.ಇ. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸೌರಭ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸರ್ ಸಿ.ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

‘ಆಧುನಿಕ ವಿಜ್ಞಾನದ ಅನೇಕ ಸಂಶೋಧನೆಗಳ ಮೂಲವು ಭಾರತದ ಪ್ರಾಚೀನ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆ ರಚಿಸಿದ ಅನೇಕ ಗ್ರಂಥಗಳಲ್ಲಿ ಅಡಕವಾಗಿದೆ. ಕಣಾದ, ಸುಶೃತ, ಪರಾಷರ, ಭಾರದ್ವಾಜ ಮುನಿ ಮುಂತಾದ ಭಾರತೀಯರು ವಿಜ್ಞಾನದ ಅನೇಕ ಆಯಾಮಗಳನ್ನು ತಮ್ಮ ಗ್ರಂಥಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಈಗಿನ ವಿದ್ಯಾರ್ಥಿಗಳು ಅವುಗಳ ಅಧ್ಯಯನ ಮಾಡುವ ಮೂಲಕ ವಿಶ್ವಕ್ಕೆ ಭಾರತೀಯರ ಕೊಡುಗೆ ಅಪಾರವಾಗಿ ಇರುವುದನ್ನು ಅರಿಯಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯೆ ಮೀನಾಕ್ಷಿ ಕುಡಸೋಮಣ್ಣವರ ಮಾತನಾಡಿ, ‘ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಆಗುವ ನೂತನ ಆವಿಷ್ಕಾರಗಳು, ವಿಜ್ಞಾನಿಗಳ ಜೀವನ ಮತ್ತು ಅವರ ಸಾಧನೆಗಳ ಕುರಿತು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಿಕ್ಷಕರಾದ ವಿಜಯಕುಮಾರ ಹಣ್ಣಿಕೇರಿ, ಮುರುಳೀಧರ ಬೆಳಗಾಂವ ಹಾಗೂ ಶಿವಲೀಲಾ ಪೂಜಾರ ಕ್ವಿಜ್‌ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು.

ಅಮಟೂರಿನ ಸರ್ಕಾರಿ ಪ್ರೌಢಶಾಲೆಯ ಶ್ವೇತಾ ಭಾಂವಿ ಹಾಗೂ ಮಲ್ಲಿಕಾರ್ಜುನ ಲಕ್ಷ್ಮೇಶ್ವರ ಅವರ ತಂಡ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು. ಡಿ.ಪಿ. ಕಾನ್ವೆಂಟ್ ಶಾಲೆಯ ನೀತಿ ಮೀಶಿ ಹಾಗೂ ಶ್ರೇಯಾ ಸೊಬರದ ಅವರ ತಂಡ ದ್ವಿತೀಯ ಬಹುಮಾನ ಗಳಿಸಿತು.

ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಸ್ವಾಗತಿಸಿದರು. ಸ್ಪರ್ಧೆಯ ಜಿಲ್ಲಾ ಸಂಯೋಜಕ ಎಂ.ಬಿ. ಅಂಗಡಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು