ಗೋಕಾಕ (ಬೆಳಗಾವಿ ಜಿಲ್ಲೆ): 'ಯಡಿಯೂರಪ್ಪ ನನ್ನ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಮಾತ್ರವಲ್ಲ; ಕತ್ತೆಯೇ ಸತ್ತು ಬಿದ್ದಿದೆ. ಅಂಥವರಿಗೆ ನನ್ನ ರಾಜೀನಾಮೆ ಕೇಳುವ ಹಕ್ಕು ಇದೆಯೇ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಬಿಜೆಪಿ ಪಾದಯಾತ್ರೆ ಮುಗಿಯುವುದರೊಳಗೆ ನಾನು ರಾಜೀನಾಮೆ ನೀಡಬೇಕು ಎಂದು ಯಡಿಯೂರಪ್ಪ ಕೇಳಿದ್ಧಾರೆ. ಸ್ವತಃ ಅವರೇ ಪೋಕ್ಸೊ ಪ್ರಕರಣದಲ್ಲಿ ಸೊಕ್ಕಿಕೊಂಡಿದ್ದಾರೆ. ಯಾವ ನೈತಿಕತೆ ಇದೆ ಅವರಿಗೆ' ಎಂದರು.
'ಅವರ ವಿರುದ್ಧ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ನ್ಯಾಯಾಲಯ ಜಾಮೀನು ನೀಡಿದೆ ಎಂಬ ಕಾರಣಕ್ಕೆ ಯಡಿಯೂರಪ್ಪ ಹೊರಗೆ ಇದ್ದಾರೆ. ಇಲ್ಲದಿದ್ದರೆ ಜೈಲಿನಲ್ಲಿ ಇರಬೇಕಾಗಿತ್ತು. ಅವರ ಮೇಲೆ ಎಷ್ಟು ಕೇಸ್ ಇವೆ, ಯಾವಯಾವ ಕೇಸ್ ಇವೆ ಎಂದು ಅವರಿಗೆ ಗೊತ್ತಾದರೂ ಇದೆಯೇ' ಎಂದರು.
'ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರು 21 ಪ್ರಕರಣ ಎದುರಿಸುತ್ತಿದ್ದಾರೆ. ಈಗಾಗಲೇ ಕೆಲವನ್ನು ಸಿಐಡಿ ತನಿಖೆಗೆ ಕೊಟ್ಟಿದ್ದೇನೆ. ಉಳಿದ ಎಲ್ಲ ಪ್ರಕರಣಗಳನ್ನೂ ತನಿಖೆಗೆ ನೀಡಲಾಗುವುದು' ಎಂದು ಉತ್ತರಿಸಿದರು.