ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲೆಯ ಭಕ್ತರೊಂದಿಗೆ ಸಿದ್ಧೇಶ್ವರ ಸ್ವಾಮೀಜಿ ದಶಕಗಳ ಆಪ್ತತೆ

Last Updated 3 ಜನವರಿ 2023, 7:32 IST
ಅಕ್ಷರ ಗಾತ್ರ

ಬೆಳಗಾವಿ: ವಿಶ್ವಸಂತ, ನಡೆದಾಡುವ ದೇವರು ಎಂದೇ ಹೆಸರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರಿಗೂ ಬೆಳಗಾವಿ ಜಿಲ್ಲೆಗೂ ಎರಡು ದಶಕಗಳ ನಂಟಿದೆ. ಅವರ ಅತಿ ಹೆಚ್ಚು ಪ್ರವಚನಗಳು ಬೆಳಗಾವಿ ಜಿಲ್ಲೆಯಲ್ಲೇ ನಡೆದಿವೆ.

ಇಂದೋ ನಿನ್ನೆಯೋ ಶ್ರೀಗಳು ಕಣ್ಣ ಮುಂದೆ ತಮ್ಮ ಜ್ಞಾನ ಬಿತ್ತಿದ್ದಾರೆ ಎನ್ನುವಷ್ಟು ಆಪ್ತತೆ ಜಿಲ್ಲೆಯ ಜನರಲ್ಲಿದೆ. ಶ್ರೀಗಳು ಇನ್ನಿಲ್ಲ ಎನ್ನುವ ಸುದ್ದಿ ತಿಳಿದು ಜಿಲ್ಲೆಯ ಭಕ್ತರೂ ದಿಗಿಲುಗೊಂಡಿದ್ದಾರೆ. ಕಳೆದೊಂದು ವಾರದಿಂದ ಅಪಾರ ಸಂಖ್ಯೆಯ ಜನ ಶ್ರೀಗಳನ್ನು ನೋಡಲು ವಿಜಯಪುರಕ್ಕೆ ಹೋಗಿ, ಠಿಕಾಣೆ ಹೂಡಿದ್ದಾರೆ. ರುದ್ರಾಕ್ಷಿ ಮಠದೊಂದಿಗೆ ನಂಟು: ಇಲ್ಲಿನ ನಾಗನೂರು ರುದ್ರಾಕ್ಷಿಮಠದೊಂದಿಗೆ ಸಿದ್ಧೇಶ್ವರ ಸ್ವಾಮೀಜಿ ಅವಿನಾಭಾವ ನಂಟು ಹೊಂದಿದ್ದರು. ಸಿದ್ಧೇಶ್ವರ ಶ್ರೀಗಳ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿ ರುದ್ರಾಕ್ಷಿಮಠದ ಪೀಠಾಧಿಪತಿ ಯಾಗಿದ್ದ ಲಿಂ. ಶಿವಬಸವ ಸ್ವಾಮೀಜಿ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಎಲ್ಲೇ ಪ್ರವಚನಕ್ಕೆ ಹೋದರೂ, ಶಿವಬಸವ ಸ್ವಾಮೀಜಿ ಆಹ್ವಾನಿಸುತ್ತಿದ್ದರು. ಅವರು ಲಿಂಗೈಕ್ಯರಾದ ನಂತರ ಸಿದ್ಧೇಶ್ವರ ಸ್ವಾಮೀಜಿ ಈ ಪರಂಪರೆ ಮುಂದುವರಿಸಿಕೊಂಡು ಬಂದಿದ್ದರು.

ಈ ಭಾಗದಲ್ಲಿ ಯಾವ ಕಾರ್ಯಕ್ರಮಕ್ಕೆ ಬಂದರೂ, ಮಠಕ್ಕೆ ಭೇಟಿ ಕೊಟ್ಟು ಶಿವಬಸವ ಶ್ರೀಗಳ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದರು. ನಂತರ ರುದ್ರಾಕ್ಷಿ ಮಠದ ಪೀಠಾಧಿಪತಿಯಾಗಿದ್ದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅವರ ಹಲವು ಕೃತಿಗಳಿಗೆ ಮುನ್ನುಡಿ ಬರೆದು, ಸಾಹಿತ್ಯ ರಚನೆಗೆ ಪ್ರೋತ್ಸಾಹಿಸಿದ್ದರು.

‘2016ರ ಮಾರ್ಚ್‌ನಲ್ಲಿ ರುದ್ರಾಕ್ಷಿಮಠದ ಆವರಣದಲ್ಲೇ ತಿಂಗಳ ಕಾಲ ಪ್ರವಚನ ಆಯೋಜಿಸಲಾಗಿತ್ತು. ಸಿದ್ಧೇಶ್ವರ ಶ್ರೀಗಳ ಹಿತನುಡಿಗಳನ್ನು ಆಲಿಸಲು ನಿತ್ಯ ಸಾವಿರಾರು ಜನರು ಸೇರಿದ್ದರು. ಸರ್ವಧರ್ಮೀಯರು ಪ್ರವಚನ ಆಲಿಸಿದ್ದು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ಅಮೆರಿಕಕ್ಕೆ ಪ್ರವಾಸಕ್ಕೆ ಹೋಗುವ ಮುನ್ನ, ಎರಡು ದಿನ ನಮ್ಮ ಮಠದಲ್ಲೇ ತಂಗಿದ್ದರು. 2019ರಲ್ಲಿ ಬೈಲಹೊಂಗಲ ತಾಲ್ಲೂಕಿನ ನಾಗನೂರಿನಲ್ಲಿ ಶಿವಬಸವ ಶ್ರೀಗಳ ಪುತ್ಥಳಿ ಅನಾವರಣಗೊಳಿಸಿದ್ದರು’ ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸ್ಮರಿಸಿದರು. ಸತತ 22 ವರ್ಷ ಪ್ರವಚನ: ‘1975ರಿಂದ ಸಿದ್ಧೇಶ್ವರ ಶ್ರೀಗಳು ಬೆಳಗಾವಿಗೆ ಬರತೊಡಗಿದರು. ಆರಂಭದಲ್ಲಿ ಗುರುದೇವ ರಾನಡೆ ಮಂದಿರದಲ್ಲಿ ತಿಂಗಳ ಕಾಲ ಪ್ರವಚನ ನೀಡುತ್ತಿದ್ದರು. ಸತತ 22 ವರ್ಷ ಇದನ್ನು ಮುಂದುವರಿಸಿದರು. ತಮಗೆ ಬಿಡುವಿದ್ದಾಗ, ಕೋರಿ ಗಲ್ಲಿಯ ಅಕ್ಕನ ಬಳಗದ ವೇದಿಕೆಗೆ ತೆರಳಿ ಪ್ರವಚನ ಕೊಡುತ್ತಿದ್ದರು’ ಎಂದು ಭಕ್ತ ಮಲ್ಲಿಕಾರ್ಜುನ ಜಗಜಂಪಿ ಹೇಳಿದರು.

‘ಸಮಾನ ಮನಸ್ಕರೆಲ್ಲ ಸೇರಿ ನಗರದ ಗಾಂಧಿ ಭವನದಲ್ಲಿ 2002ರಲ್ಲಿ ಶ್ರಾವಣ ಮಾಸದ ಅಂಗವಾಗಿ 40 ದಿನಗಳ ಕಾಲ ಪ್ರವಚನ ಆಯೋಜಿಸಿದ್ದೆವು. ನಿತ್ಯ ಸಾವಿರಾರು ಜನ ಸೇರುತ್ತಿದ್ದರು. ನಂತರ ಪ್ರತಿವರ್ಷವೂ ಕಾರ್ಯಕ್ರಮ ಮುಂದುವರಿದವು. ಮೊದಲಿಗೆ ಹನುಮಾನ ನಗರದ ನಮ್ಮ ಸಣ್ಣ ಮನೆಯಲ್ಲೇ ಶ್ರೀಗಳು ವಾಸವಿರುತ್ತಿದ್ದರು. ವಸತಿಗಾಗಿ ಇಲ್ಲೊಂದು ಆಶ್ರಮ ಕಟ್ಟಿಸಬೇಕೆಂಬ ಇಂಗಿತ ವ್ಯಕ್ತಪಡಿಸಿದರು. ಗುರುವಿನ ಆದೇಶ ಪಾಲಿಸುವುದಕ್ಕಾಗಿ ನಾನು ತಾಲ್ಲೂಕಿನ ಬೆಳಗುಂದಿಯಲ್ಲಿ ವಿಶ್ರಾಂತ ಆಶ್ರಮ ಕಟ್ಟಿಸಿದ್ದೇನೆ. ಬೆಳಗಾವಿಗೆ ಬಂದಾಗ ಅಲ್ಲಿಯೇ ತಂಗುತ್ತಿದ್ದರು’ ಎಂದು ನೆನೆದರು.

ಸಿದ್ಧೇಶ್ವರ ಶ್ರೀಗಳು ಈ ಭಾಗದಲ್ಲಿ ಸಾವಿರಾರು ಭಕ್ತರನ್ನು ಹೊಂದಿದ್ದರು. ನಾಲ್ಕು ದಶಕದ ಹಿಂದೆ‌ ಕುಂದಾನಗರಿಗೆ ಬಂದವೇಳೆ ಪ್ರವಚನ ಆಲಿಸಲು ಸೇರುತ್ತಿದ್ದವರು ಕೆಲವೇ ಮಂದಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾರ್ಯಕ್ರಮ ಆಯೋಜಿಸಿದ ಮೈದಾನವೆಲ್ಲ ಭಕ್ತರಿಂದ ಕಿಕ್ಕಿರಿದು ತುಂಬುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT