ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಹಳ್ಳಿಯ ‘ತ್ರಿವಿಧ ದಾಸೋಹಿ’ ಮೌನ ಕ್ರಾಂತಿ

ಅನಾಥ, ಬಡ ಮಕ್ಕಳಿಗೆ ಆಸರೆ
Last Updated 16 ಏಪ್ರಿಲ್ 2021, 5:52 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಮಠಕ್ಕೆ ಗೇಣುದ್ದ ಜಮೀನಿಲ್ಲ. ಶ್ರೀಮಂತ ಭಕ್ತರೂ ಇಲ್ಲ. ಧರ್ಮ ಬೋಧನೆ ಜೊತೆಗೆ ಸಮಾಜಸೇವೆಯೂ ಸ್ವಾಮೀಜಿಯ ಆದ್ಯ ಕರ್ತವ್ಯ ಎಂದು ನಂಬಿದವರು ಇವರು. ಅನಾಥ ಮತ್ತು ಬಡಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶ್ರೀಮಠಕ್ಕೆ ಕರೆದುಕೊಂಡು ಬಂದು ಅವರನ್ನು ಜೊತೆಯಲ್ಲಿಟ್ಟುಕೊಂಡು ಸಲುಹುತ್ತಿದ್ದಾರೆ.

ಕಿತ್ತೂರು ತಾಲ್ಲೂಕಿನ ದೇಗುಲಗಳ ಊರೆಂದು ಪ್ರಸಿದ್ಧಿ ಪಡೆದಿರುವ ದೇಗುಲಹಳ್ಳಿಯ ಶ್ರೀಗುರು ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಇಂತಹ ಮಹತ್ವಾಕಾಂಕ್ಷಿ ಯೋಜನೆ ಹಾಕಿಕೊಂಡು ಹಗಲಿರುಳು ಶ್ರಮಿಸುತ್ತಿರುವ ತ್ರಿವಿಧ ದಾಸೋಹಿ. ಅಜಾನುಬಾಹು ದೇಹ. ಅಷ್ಟೇ ನಿರ್ಮಲ ಮನಸ್ಸು. ಸಮಾಜದ ಆಗು-ಹೋಗುಗಳಿಗೆ ಮಠವೂ ಸಾಕ್ಷಿಯಾಗಿರಬೇಕು ಎಂದು ಬಯಸುವ ಅಪರೂಪದ ಸ್ವಾಮೀಜಿ ಇವರು ಎಂದು ಭಕ್ತರು ಅಭಿಪ್ರಾಯಪಡುತ್ತಾರೆ. ಜೋಳಿಗೆಯೇ ಈ ಸನ್ಯಾಸಿಯ ಶಕ್ತಿ. ಇದರ ಬಲದಿಂದಲೇ ಬಹಳಷ್ಟು ಕೆಲಸ–ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಭಕ್ತರು ಹುಬ್ಬೇರಿಸುವ ಹಾಗೆ ಚಿಕ್ಕ ಮಠಕ್ಕೊಂದು ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ.

‘ಜಂಗಮ’ಕ್ಕೆ ಅಳಿವಿಲ್ಲ:

ಶತಮಾನದ ಇತಿಹಾಸವನ್ನು ದೇಗುಲಹಳ್ಳಿ ಗ್ರಾಮದ ಮಡಿವಾಳೇಶ್ವರ ಮಠವು ಹೊಂದಿದೆ. ಕಿತ್ತೂರು ಸಂಸ್ಥಾನದ ರಾಜಮನೆತನ ಧಿಕ್ಕರಿಸಿ ಹೊರನಡೆದ 19ನೇ ಶತಮಾನದ ಪ್ರಖರ ಸನ್ಯಾಸಿ ಮಡಿವಾಳೇಶ್ವರ ಶಿವಯೋಗಿ ಪಾದಸ್ಪರ್ಶ ಮಾಡಿದ ಪುಣ್ಯಭೂಮಿ ಇದು. ಕಿತ್ತೂರು ತೊರೆದು ಸಂಚಾರ ಪ್ರಾರಂಭಿಸಿದ ಯೋಗಿಯು ಸಮೀಪದ ದೇಗುಲಹಳ್ಳಿ ಗ್ರಾಮಕ್ಕೆ ಬಂದಿದ್ದರು. ಆ ಸಂದರ್ಭದ ನೆನಪಿಗಾಗಿ ಅಲ್ಲೊಂದು ಮಠ ನಿರ್ಮಾಣ ಮಾಡಲಾಗಿದೆ ಎಂದು ಹಿರಿಯರು ಸ್ಮರಿಸುತ್ತಾರೆ.

ಕೆಂಪು ಹೆಂಚಿನ ಮಠವಾಗಿದ್ದ ಇಲ್ಲಿ ಶ್ರೀಗಳು ಆಗಮಿಸಿದ ನಂತರ ಸುಧಾರಣೆ ಪರ್ವ ಪ್ರಾರಂಭಿಸಿದ್ದಾರೆ. ಹಳೆಯ ಶ್ರೀಮಠಕ್ಕೆ ಹೊಸ ರೂಪ ಕೊಡಲು ನಿರ್ಧರಿಸಿ ಸುಧಾರಣೆ ಕ್ರಮಗಳನ್ನು ಜಾರಿಯಲ್ಲಿಟ್ಟಿದ್ದಾರೆ ಎಂದು ಭಕ್ತರು ತಿಳಿಸಿದರು.

₹ 1 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಿದ್ದಾರೆ. ಮಠದ ಜೀರ್ಣೋದ್ಧಾರ, ಕಲ್ಯಾಣ ಮಂಟಪ, ಮಕ್ಕಳಿಗೆ ಉಳಿದುಕೊಳ್ಳಲು ಕೊಠಡಿಗಳು, ಮಠಕ್ಕೆ ಆಗಮಿಸುವ ಭಕ್ತರ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಕೊಠಡಿಗಳ ನಿರ್ಮಾಣ ಹೀಗೆ... ಯೋಜನೆಯ ಕನಸುಗಳು ಇಲ್ಲಿ ಗರಿಗೆದರಿವೆ. ₹ 50 ಲಕ್ಷಕ್ಕೂ ಹೆಚ್ಚು ವೆಚ್ಚದ ಕಾಮಗಾರಿಯನ್ನು ಮಠದ ಆವರಣದಲ್ಲಿ ಮಾಡಿಸಿದ್ದಾರೆ. ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹ 10 ಲಕ್ಷ ಅನುದಾನ ನೀಡಿದ್ದಾರೆ.

ಕೋವಿಡ್– 19ರ ಸಂಕಷ್ಟ ಪರಿಸ್ಥಿತಿಯಲ್ಲಿ ವೇಗದಿಂದ ಕೆಲಸ ಸಾಗಿಲ್ಲ. ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗಳೆಲ್ಲ ಪೂರ್ಣಗೊಳ್ಳಲು ದಾನಿಗಳ ನೆರವು ಬೇಕಾಗಿದೆ. ಅಂಥವರ ನಿರೀಕ್ಷೆಯಲ್ಲಿ ಶ್ರೀಗಳು ಇದ್ದಾರೆ. ಕನಸು ಕಾಣುತ್ತಾರೆ, ಯೋಜನೆ ರೂಪಿಸುತ್ತಾರೆ, ಅದನ್ನು ಕಾರ್ಯರೂಪಕ್ಕೆ ತರಲು ಮುನ್ನುಗ್ಗುವ ಛಲವಂತರು ಶ್ರೀಗಳು. ಇಡೀ ದೇಗುಲಹಳ್ಳಿಯ ಈ ಮಠವನ್ನು ಮಾದರಿಯಾಗಿ ರೂಪಿಸುವ ಕನಸು ಅವರದಾಗಿದೆ. ಭಕ್ತ ಸಮೂಹವಿದೆ. ಆದರೆ, ಇನ್ನೂ ಆರ್ಥಿಕ ನೆರವಿನ ಅಗತ್ಯವಿದೆ ಎನ್ನುತ್ತಾರೆ ಸ್ವಾಮೀಜಿ. ಸಂಪರ್ಕಕ್ಕೆ ಮೊ: 98444-24762.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT