ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಸಂತ್ರಸ್ತರ ಪರದಾಟ: ‘ಬಾಡಿಗಿ ಮನ್ಯಾಗ ಮಗಳ ಬಾಣಂತನ ಮಾಡಬೇಕಾಗೇತ್ರಿ’

ಇನ್ನೂ ಸಿಗದ ಪೂರ್ಣ ಪರಿಹಾರ
Published 17 ಜೂನ್ 2023, 8:30 IST
Last Updated 17 ಜೂನ್ 2023, 8:30 IST
ಅಕ್ಷರ ಗಾತ್ರ

ಹಂಪಿಹೋಳಿ (ಬೆಳಗಾವಿ ಜಿಲ್ಲೆ): ‘ಮನಿ ಬಿದ್ದ ನಾಲ್ಕ ವರ್ಷಗಳಾದ್ರೂ ಪೂರ್ತಿ ಪರಿಹಾರ ಸಿಕ್ಕಿಲ್ಲ. ಕೆಲಸಕ್ಕ ಜನಾನು ಸಿಗ್ತಾಯಿಲ್ಲ. ಹಂಗಾಗಿ 6 ಮಂದಿ ಬಾಡಿಗಿ ಮನ್ಯಾಗ ಉಳಿದೇವ್ರಿ. ಐದು ದಿನದ ಹಿಂದ ಮಗಳ ಹಡದಾಳ್ರಿ. ಸ್ವಂತ ಮನಿ ಇಲ್ದಕ್ಕ ಬಾಡಿಗಿ ಮನ್ಯಾಗ ಅವಳ ಬಾಣಂತನ ಮಾಡಬೇಕಾಗೇತ್ರಿ...’

ರಾಮದುರ್ಗ ತಾಲ್ಲೂಕಿನ ಹಂಪಿಹೊಳಿಯಲ್ಲಿ ಅಪೂರ್ಣಗೊಂಡಿರುವ ತಮ್ಮ ಮನೆ ಎದುರು ನಿಂತಿದ್ದ ಸಿರಾಜಸಾಬ್ ಇಮಾಮ್‍ಭಾಯಿ ‘ಪ್ರಜಾವಾಣಿ’ ಮುಂದೆ ಹೀಗೆ ಅಳಲು ತೋಡಿಕೊಂಡರು.

‘ಊರಲ್ಲಿನ ಮನೆ ಬಿದ್ದಿದ್ದಕ್ಕೆ ಶಿವಪೇಟೆಯ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ತಾತ್ಕಾಲಿಕ ತಗಡಿನ ಶೆಡ್‍ಗಳಿಗೆ ನಮನ್ನು ಸ್ಥಳಾಂತರಿಸಿದ್ದಾರೆ. ಇಲ್ಲಿ ಶೌಚಗೃಹವಿಲ್ಲ, ಸ್ನಾನಗೃಹಗಳಿಲ್ಲ. ಐದು ದಿನಗಳಿಂದ ವಿದ್ಯುತ್ ಸೌಕರ್ಯವಿಲ್ಲ. ವಿಷಜಂತುಗಳ ಹಾವಳಿಯಂತೂ ಮಿತಿಮೀರಿದ್ದು, ನರಕಮಯ ಸ್ಥಿತಿಯಲ್ಲೇ ಬದುಕು ಸಾಗಿಸುತ್ತಿದ್ದೇವೆ. ಆದರೆ, ಸರ್ಕಾರ ಪರಿಹಾರ ಕೊಡದೆ ಸತಾಯಿಸುತ್ತಿದೆ’ ಎಂದು ಸಂತ್ರಸ್ತರಾದ ಶಾರದಾ ನಡುವಿನಮನಿ, ದೊಡ್ಡಕ್ಕ ಮಾದರ ಅವಲತ್ತುಕೊಂಡರು.

ಇದು ಇವರ ಕತೆಯಷ್ಟೇ ಅಲ್ಲ; ಪ್ರವಾಹ, ಅತಿವೃಷ್ಟಿಯಿಂದ ಮನೆ ಕಳೆದುಕೊಂಡು ಅತಂತ್ರರಾಗಿರುವ ಎಷ್ಟೋ ಕುಟುಂಬಗಳು ಇಂದಿಗೂ ಪರಿಹಾರಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿವೆ.

2019ರಲ್ಲಿ ಮಲಪ್ರಭಾ ನದಿ ಪ್ರವಾಹದ ಅಬ್ಬರಕ್ಕೆ ರಾಮದುರ್ಗ ತಾಲ್ಲೂಕಿನ ಸುರೇಬಾನ, ಹಂಪಿಹೊಳಿ, ಚಿಕ್ಕ ಹಂಪಿಹೊಳಿ, ಅವರಾದಿ ಮತ್ತಿತರ ಗ್ರಾಮಗಳು ನಲುಗಿ ಹೋಗಿದ್ದವು. ಈ ಊರುಗಳಲ್ಲೊಂದು ಸುತ್ತುಹಾಕಿದಾಗ, ಸಂತ್ರಸ್ತರ ಕಣ್ಣೀರ ಕತೆಗಳು ಒಂದೊಂದಾಗಿ ಹೊರಬರುತ್ತಿವೆ. ಆದರೆ, ಅವರ ಗೋಳು ಆಡಳಿತ ಯಂತ್ರದ ಕಣ್ಣಿಗೆ ಬೀಳುತ್ತಿಲ್ಲ.

ಪರಿಹಾರವೇ ಸಿಕ್ಕಿಲ್ಲ: ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ವೇದಗಂಗಾ, ದೂಧಗಂಗಾ, ಮಾರ್ಕಂಡೇಯ ನದಿಗಳ ಪ್ರವಾಹದಿಂದಾಗಿ ಮನೆ ಕಳೆದುಕೊಂಡ ಜಿಲ್ಲೆಯ 46,333 ಜನರಿಗೆ 2019-20ರಲ್ಲಿ ₹875 ಕೋಟಿ ಪರಿಹಾರ ಕೊಟ್ಟಿದ್ದೇವೆ. 2020-21ರಲ್ಲಿ 5,108 ಜನರಿಗೆ ₹268.32 ಕೋಟಿ, 2021-22ರಲ್ಲಿ 14,426 ಜನರಿಗೆ ₹442.83 ಕೋಟಿ ಹಾಗೂ 2022-23ರಲ್ಲಿ 4,177 ಜನರಿಗೆ ₹39 ಕೋಟಿ ಪರಿಹಾರ ಕೊಟ್ಟಿದ್ದೇವೆ. ಪೂರ್ತಿ ಹಾನಿಗೀಡಾದ ಮನೆ ನಿರ್ಮಿಸಿಕೊಳ್ಳುವವರಿಗೆ(ಎ ಮತ್ತು ಬಿ2 ವರ್ಗ) ₹5 ಲಕ್ಷ, ದುರಸ್ತಿ ಮಾಡಿಕೊಳ್ಳುವವರಿಗೆ(ಬಿ1 ವರ್ಗ) ₹3 ಲಕ್ಷ ಮತ್ತು ಅಲ್ಪ ಪ್ರಮಾಣದ ಹಾನಿಯಾದವರಿಗೆ(ಸಿ ವರ್ಗ) ₹50 ಸಾವಿರ ನೀಡಿದ್ದೇವೆ ಎಂದು ಜಿಲ್ಲಾಡಳಿತದ ಮೂಲಗಳು ಹೇಳುತ್ತಿವೆ.

ಆದರೆ, ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ ಮತ್ತಿತರ ತಾಲ್ಲೂಕುಗಳಲ್ಲಿ ಹಲವರಿಗೆ ಇಂದಿಗೂ ಪೂರ್ಣಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ. ವಾಸ್ತವವಾಗಿ ತಮ್ಮ ಮನೆ ಬಿದ್ದಿದ್ದರೂ ಪರಿಹಾರಕ್ಕೆ ಪರಿಗಣಿಸಿಲ್ಲ. ಸಂತ್ರಸ್ತರ ಪಟ್ಟಿ ಪಾರದರ್ಶಕವಾಗಿಲ್ಲ ಎಂಬ ತಕಾರರುಗಳೂ ಕೆಲವರಿಂದ ಕೇಳಿಬರುತ್ತಿವೆ. ಈಗ ಮತ್ತೆ ಮಳೆಗಾಲ ಆರಂಭಗೊಂಡಿದ್ದು, ಸಂತ್ರಸ್ತರ ಎದೆಯಲ್ಲಿ ಢವಢವ ಶುರುವಾಗಿದೆ. ಮತ್ತೆ ಪ್ರವಾಹ ಬಂದರೆ ತಮ್ಮ ಕತೆ ಏನು ಎಂಬ ಆತಂಕ ಅವರನ್ನು ಕಾಡುತ್ತಿದೆ.

ಕುಬ್ಬ ಸಹೋದರಿಯರ ಪರದಾಟ: ‘ನಾನು 3 ಅಡಿ, 3 ಇಂಚು ಮತ್ತು ಸಹೋದರಿ ಬೇಗಂ 3 ಅಡಿ 5 ಇಂಚು ಎತ್ತರವಿದ್ದೇವೆ. ತಂದೆ-ತಾಯಿ ಇಲ್ಲ. ಪ್ರವಾಹದಿಂದಾಗಿ ಸ್ವಂತ ಸೂರು ಬಿದ್ದಿದೆ. ಆದರೆ, ಈವರೆಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ಹಾಗಾಗಿ ನಮ್ಮ ಚಿಕ್ಕಪ್ಪನ ಮನೆಯಲ್ಲೇ ವಾಸಿಸುತ್ತಿದ್ದೇವೆ. ತಿಂಗಳಿಗೆ ತಲಾ ₹1,400 ಅಂಗವಿಕಲರ ಮಾಸಾಶನ ಬಿಟ್ಟರೆ, ಸರ್ಕಾರದಿಂದ ನಮಗೇನೂ ನೆರವು ಸಿಕ್ಕಿಲ್ಲ’ ಎಂದು ಹಂಪಿಹೊಳಿಯ ರೋಷನಬಿ ಇಮಾಮಭಾಯಿ ಕಣ್ಣೀರು ಸುರಿಸಿದರು.

₹10 ಸಾವಿರ ಚಿಕಿತ್ಸೆಗೆ ಖರ್ಚಾಯಿತು: ‘ನಾಲ್ಕು ವರ್ಷಗಳ ಹಿಂದೆ ನೆರೆಯಿಂದ ಹೆಂಚಿನ ಮನೆ ಬಿದ್ದಿತು. ಸರ್ಕಾರ ₹10 ಸಾವಿರ ತಾತ್ಕಾಲಿಕ ಪರಿಹಾರ ಕೊಟ್ಟು ಕೈತೊಳೆದುಕೊಂಡಿತು. ಕೊರೊನಾ ಸಂಕಷ್ಟ ಸಮಯದಲ್ಲಿ ಪತ್ನಿ ಅನಾರೋಗ್ಯಕ್ಕೀಡಾಗಿದ್ದರಿಂದ ಆ ಹಣವೂ ಚಿಕಿತ್ಸೆಗೆ ಖರ್ಚಾಯಿತು. ನಂತರ ಪರಿಹಾರ ಬಾರದ್ದರಿಂದ ತಗಡಿನ ಶೆಡ್‍ನಲ್ಲೇ ವಾಸಿಸುತ್ತಿದ್ದೇವೆ’ ಎಂದು ಹಟೇಲ್‍ಸಾಬ್ ನಾಲಬಂದ ಬೇಸರದಿಂದ ಹೇಳಿದರು.

ಆಶೀರ್ವದಿಸಿದರು, ಪರಿಹಾರ ಸಿಗಲಿಲ್ಲ: ‘ನಾಲ್ವರು ಕುಟುಂಬ ಸದಸ್ಯರು ಶಿವಪೇಟೆಯ ತಗಡಿನ ಶೆಡ್‌ನಲ್ಲಿ ವಾಸವಿದ್ದೇವೆ. ನಾಲ್ಕು ತಿಂಗಳ ಹಿಂದೆ ಇಬ್ಬರು ಮಕ್ಕಳ ವಿವಾಹವಾದರು. ರಾಜಕಾರಣಿಗಳು, ಅಧಿಕಾರಿಗಳು ಬಂದು ಅವರಿಗೆ ಆಶೀರ್ವದಿಸಿದರು. ಆದರೆ, ಅವರ್‍ಯಾರು ಸರ್ಕಾರದ ಗಮನಸೆಳೆದು ನಮಗೆ ₹5 ಲಕ್ಷ ಪರಿಹಾರ ಪೂರ್ತಿ ಕೊಡಿಸಲಿಲ್ಲ. ಅವರಾದಿಯಲ್ಲಿರುವ ನಮ್ಮ ಮನೆ ಕಾಮಗಾರಿಯೂ ಮುಗಿಯುತ್ತಿಲ್ಲ’ ಎನ್ನುತ್ತಾರೆ ಫಾತಿಮಾ ಮಕ್ತುಂಸಾಬ್ ಮುಲ್ಲಾ.

‘ಈವರೆಗೆ 4 ಕಂತಿನ ಹಣ ಬಿಡುಗಡೆಯಾಗಿದೆ. ಇನ್ನೊಂದು ಕಂತಿನ ಹಣ ಬರಬೇಕಿದೆ‘ ಎಂದು ತಮ್ಮ ಅಪೂರ್ಣ ಮನೆ ಕಾಮಗಾರಿ ತೋರಿಸಿದರು ಇಮಾಮ್‍ಬಿ ನಾಯ್ಕರ.

ರಾಮದುರ್ಗ ತಾಲ್ಲೂಕಿನ ಹಂಪಿಹೊಳಿಯಲ್ಲಿ ಪ್ರವಾಹದಿಂದಾಗಿ ಬಿದ್ದಿರುವ ಮನೆ ತೋರಿಸುತ್ತಿರುವ ರೋಷನಬಿ ಮತ್ತು ಬೇಗಂ ಇಮಾಮ್‌ಭಾಯಿ ಸಹೋದರಿಯರು/ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ
ರಾಮದುರ್ಗ ತಾಲ್ಲೂಕಿನ ಹಂಪಿಹೊಳಿಯಲ್ಲಿ ಪ್ರವಾಹದಿಂದಾಗಿ ಬಿದ್ದಿರುವ ಮನೆ ತೋರಿಸುತ್ತಿರುವ ರೋಷನಬಿ ಮತ್ತು ಬೇಗಂ ಇಮಾಮ್‌ಭಾಯಿ ಸಹೋದರಿಯರು/ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ
ರಾಮದುರ್ಗ ತಾಲ್ಲೂಕಿನ ಶಿವಪೇಟೆಯಲ್ಲಿ ನಿರ್ಮಿಸಿದ ತಾತ್ಕಾಲಿಕ ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರು/ಪ್ರಜಾವಾಣಿ ಚಿತ್ರ:ಇಮಾಮ್‌ಹುಸೇನ್‌ ಗೂಡುನವರ
ರಾಮದುರ್ಗ ತಾಲ್ಲೂಕಿನ ಶಿವಪೇಟೆಯಲ್ಲಿ ನಿರ್ಮಿಸಿದ ತಾತ್ಕಾಲಿಕ ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರು/ಪ್ರಜಾವಾಣಿ ಚಿತ್ರ:ಇಮಾಮ್‌ಹುಸೇನ್‌ ಗೂಡುನವರ
ರಾಮದುರ್ಗ ತಾಲ್ಲೂಕಿನ ಶಿವಪೇಟೆಯ ತಾತ್ಕಾಲಿಕ ತಗಡಿನ ಶೆಡ್‌ನಲ್ಲಿ ವಾಸಿಸುತ್ತಿರುವ ಫಾತಿಮಾ ಮುಲ್ಲಾ/ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ
ರಾಮದುರ್ಗ ತಾಲ್ಲೂಕಿನ ಶಿವಪೇಟೆಯ ತಾತ್ಕಾಲಿಕ ತಗಡಿನ ಶೆಡ್‌ನಲ್ಲಿ ವಾಸಿಸುತ್ತಿರುವ ಫಾತಿಮಾ ಮುಲ್ಲಾ/ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ
ರಾಮದುರ್ಗ ತಾಲ್ಲೂಕಿನ ಹಂಪಿಹೊಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಿರಾಜಸಾಬ್ ಇಮಾಮ್‍ಭಾಯಿ ಕುಟುಂಬಸ್ಥರು/ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ
ರಾಮದುರ್ಗ ತಾಲ್ಲೂಕಿನ ಹಂಪಿಹೊಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಿರಾಜಸಾಬ್ ಇಮಾಮ್‍ಭಾಯಿ ಕುಟುಂಬಸ್ಥರು/ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ
ರಾಮದುರ್ಗ ತಾಲ್ಲೂಕಿನ ಹಂಪಿಹೊಳಿಯಲ್ಲಿ ಬಿದ್ದಿರುವ ಮನೆ ತೋರಿಸುತ್ತಿರುವ ಬೀಬಿಜಾನ್‌ ನದಾಫ್‌/ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ
ರಾಮದುರ್ಗ ತಾಲ್ಲೂಕಿನ ಹಂಪಿಹೊಳಿಯಲ್ಲಿ ಬಿದ್ದಿರುವ ಮನೆ ತೋರಿಸುತ್ತಿರುವ ಬೀಬಿಜಾನ್‌ ನದಾಫ್‌/ಪ್ರಜಾವಾಣಿ ಚಿತ್ರ:ಚನ್ನಪ್ಪ ಮಾದರ
2020ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮದ ಜಮೀನು ಜಲಾವೃತಗೊಂಡಿರುವುದು (ಸಂಗ್ರಹ ಚಿತ್ರ)
2020ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರು ಗ್ರಾಮದ ಜಮೀನು ಜಲಾವೃತಗೊಂಡಿರುವುದು (ಸಂಗ್ರಹ ಚಿತ್ರ)
₹59 ಕೋಟಿ ಪರಿಹಾರ ಬರಬೇಕಿದೆ: ಡಿ.ಸಿ
‘ಪೂರ್ಣಪ್ರಮಾಣದಲ್ಲಿ ಮನೆ ಬಿದ್ದವರಿಗೆ ಐದು ಹಂತಗಳಲ್ಲಿ ₹5 ಲಕ್ಷ ಪರಿಹಾರ ಕೊಡಲಾಗುತ್ತಿದೆ. ಪ್ರತಿ ಹಂತದ ಕಾಮಗಾರಿ ಮುಗಿದ ತಕ್ಷಣ ಒಂದು ಕಂತಿನ ಹಣ ಬಿಡುಗಡೆಯಾಗುತ್ತದೆ. ಈಗ ಜಿಪಿಎಸ್ ಮಾಡಿರುವ ವಿವಿಧ ಹಂತಗಳ ಮನೆಗಳಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ₹59 ಕೋಟಿ ಪರಿಹಾರ ಬರಬೇಕಿದೆ. ಅದು ಶೀಘ್ರ ಬಿಡುಗಡೆಯಾಗಲಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಶಿವಪೇಟೆಯ ತಗಡಿನ ಶೆಡ್‍ಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದವರಿಗೆ ಮೂಲಸೌಕರ್ಯ ಒದಗಿಸಲಾಗುವುದು’ ಎಂದರು.
ಶಾಶ್ವತ ಪರಿಹಾರಕ್ಕೆ ಆಗ್ರಹ
ಮಳೆಗಾಲ ಆರಂಭವಾದರೆ ನರಗುಂದ ಹಾಗೂ ರೋಣ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ವಾಸಿರುವ ಜನರ ಎದೆಯಲ್ಲಿ ನಡುಕ ಶುರುವಾಗುತ್ತದೆ. ಬೆಳಗಾವಿ ಭಾಗದಲ್ಲಿ ಹೆಚ್ಚು ಮಳೆ ಸುರಿದರೆ ನರಗುಂದ ತಾಲ್ಲೂಕಿನ ಲಖಮಾಪುರ ವಾಸನ ಕೊಣ್ಣೂರ ಸೇರಿದಂತೆ ಸುತ್ತಮುತ್ತಲಿನ ಕೆಲವು ಹಳ್ಳಿಗಳ ಮನೆಗಳಿಗೆ ಮಲಪ್ರಭೆ ನೀರು ನುಗ್ಗುತ್ತದೆ. ಜಮೀನುಗಳು ಜಲಾವೃತಗೊಳ್ಳುತ್ತವೆ. ಅತಿಯಾದ ಮಳೆಯಾದರಂತೂ ಲಖಮಾಪುರ ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತದೆ. ಪ್ರವಾಹ ಸಂದರ್ಭದಲ್ಲಿ ಈ ಊರಿನ ಜನಗಳಿಗೆ ಜಿಲ್ಲಾಡಳಿತ ತಾತ್ಕಾಲಿಕವಾಗಿ ಕಾಳಜಿ ಕೇಂದ್ರಗಳನ್ನು ತೆರೆಯುತ್ತದೆ. ಊಟ ಔಷಧೋಪಚಾರ ನೀಡುತ್ತದೆ. ಜನ ಜಾನುವಾರುಗಳೊಂದಿಗೆ ಕಾಳಜಿ ಕೇಂದ್ರ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುವ ಜನರು ನೆರೆ ಇಳಿದ ನಂತರ ಮತ್ತೇ ಊರಿಗೆ ಮರಳುತ್ತಾರೆ. ಆದರೆ ಆ ವೇಳೆಗಾಗಲೇ ಬದುಕು ಮೂರಾಬಟ್ಟೆಯಾಗಿರುತ್ತದೆ. ಕೈ ಸೇರಬೇಕಿದ್ದ ಬೆಳೆಗಳನ್ನೆಲ್ಲಾ ನೀರು ಆಪೋಶನ ಪಡೆದಿರುವುದರಿಂದ ರೈತರು ದಿಕ್ಕತೋಚದ ಸ್ಥಿತಿ ತಲುಪಿರುತ್ತಾರೆ. ಸರ್ಕಾರ ಪುಡಿಗಾಸು ಪರಿಹಾರ ನೀಡಿ ಕಣ್ಣೀರು ಒರೆಸುತ್ತದೆ. ಪ್ರತಿವರ್ಷ ಪ್ರವಾಹ ಬಂದಾಗಲೂ ಇದೇ ಚಿತ್ರಣ ಇಲ್ಲಿ ಪುನರಾವರ್ತನೆಯಾಗುತ್ತದೆಯೇ ಹೊರತು ಈವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಲಖಮಾಪುರ ಗ್ರಾಮಸ್ಥರು ಇಡೀ ಗ್ರಾಮವನ್ನೇ ಸ್ಥಳಾಂತರಿಸುವ ಮೂಲಕ ನಮಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು 2020 ಪ್ರವಾಹ ಸಂದರ್ಭದಲ್ಲಿ ಪಟ್ಟು ಹಿಡಿದಿದ್ದರು. ಅದಕ್ಕೆ ಒಪ್ಪಿದ್ದ ಅಂದಿನ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಅವರು ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಲಖಮಾಪುರ ಗ್ರಾಮಸ್ಥರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಜಮೀನು ತೋರಿಸಿದ್ದರು. ಒಂದು ಜಿಲ್ಲೆಯ ಊರನ್ನು ಮತ್ತೊಂದು ಜಿಲ್ಲೆಗೆ ಸೇರಿಸುವುದು ಆಡಳಿತಾತ್ಮಕವಾಗಿ ಕಠಿಣ ಪ್ರಕ್ರಿಯೆಯಾದ್ದರಿಂದ ಸಮಸ್ಯೆ ಇನ್ನೂ ಜೀವಂತವಾಗಿದೆ. ಹಾಗಾಗಿ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ಲಖಮಾಪುರ ಗ್ರಾಮ ಸಂಪರ್ಕಿಸಲು ನೆರವಾಗುವಂತೆ ಸೇತುವೆ ನಿರ್ಮಾಣಗೊಂಡಿರುವುದು ಅಲ್ಲಿನ ಜನರಲ್ಲಿ ತುಸು ಸಮಾಧಾನ ತರಿಸಿದೆ. ಕೊಣ್ಣೂರಿನ ಹೊಸ ಎಪಿಎಂಸಿ ಅವರಣದಲ್ಲಿ ಪ್ರವಾಹ ‌ಮುಂಜಾಗ್ರತೆಯೋ ಅಥವಾ ಪದೇ ಪದೇ ಹಾಕಲು ಅಸಾಧ್ಯವೋ ಎಂಬ ಕಾರಣಕ್ಕೆ ತಾತ್ಕಾಲಿಕ ಶೆಡ್‌ಗಳು ಇಂದಿಗೂ ಹಾಗೆ ಇವೆ. ಅಲ್ಲಿನ ಕೆಲವೊಂದು ಶೆಡ್‌ಗಳಲ್ಲಿ ಸಂತ್ರಸ್ತರು ನಿರಾಶ್ರಿತರ ‌ಅಪೂರ್ಣ ಮನೆಯಾದವರು ವಾಸಿಸುತ್ತಿದ್ದಾರೆ. ಅದೇರೀತಿ ಕುರ್ಲಗೇರಿ ಸುರಕೋಡ ಯಾವಗಲ್ ಯಾ‌ಸ ಹಡಗಲಿ ಸೇರಿದಂತೆ ರೋಣ ತಾಲ್ಲೂಕಿನ ಕೆಲವು ಹಳ್ಳಿಗಳು ಬೆಣ್ಣೆಹಳ್ಳದ ಪ್ರವಾಹದದಿಂದ ಪ್ರತಿ ವರ್ಷ ಪ್ರವಾಹದ ಸಂಕಷ್ಟ ಎದುರಿಸುತ್ತಿವೆ.
ಪೂರಕ ಮಾಹಿತಿ: ಚನ್ನಪ್ಪ ಮಾದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT