ಬೆಂಗಳೂರು: ಮುಂದಿನ ವರ್ಷ ಜನವರಿ 18 ರಿಂದ 26ರ ವರೆಗೆ ಬೆಂಗಳೂರಿನಲ್ಲಿ ಚೊಚ್ಚಲ ಗ್ರ್ಯಾಂಡ್‌ಮಾಸ್ಟರ್ಸ್ (ಜಿಎಂ) ಓಪನ್ ಚೆಸ್ ಟೂರ್ನಿ ಆಯೋಜಿಸಲಾಗಿದೆ.
‘ಬೆಂಗಳೂರು ನಗರ ಜಿಲ್ಲಾ ಚೆಸ್ ಸಂಸ್ಥೆಯು (ಬಿಯುಡಿಸಿಎ), ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸುವ ಟೂರ್ನಿಯಲ್ಲಿ ಭಾರತ ಮತ್ತು ಇತರ 18 ದೇಶಗಳ ಸುಮಾರು 1,500 ಸ್ಪರ್ಧಿಗಳು ಪಾಲ್ಗೊಳ್ಳಲಿದ್ಧಾರೆ. 50 ಗ್ರ್ಯಾಂಡ್‌ಮಾಸ್ಟರ್‌ಗಳೂ ಕಣಕ್ಕಿಳಿಯಲಿದ್ದಾರೆ’ ಎಂದು ಬಿಯುಡಿಸಿಎ ಅಧ್ಯಕ್ಷೆ ಎಂ.ಯು. ಸೌಮ್ಯಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಟೂರ್ನಿಯು ಒಟ್ಟು ₹ 50 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ ಎಂದರು.
‘ಇದೊಂದು ಐತಿಹಾಸಿಕ ಟೂರ್ನಿಯಾಗಿದ್ದು, ಆತಿಥ್ಯಕ್ಕೆ ಅವಕಾಶ ನೀಡಿರುವ ಅಖಿಲ ಭಾರತ ಚೆಸ್ ಸಂಸ್ಥೆ ಮತ್ತು ರಾಜ್ಯ ಚೆಸ್ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇವೆ. ಈ ಕೂಟವು ಚೆಸ್ ಪ್ರೇಮಿಗಳನ್ನು ಸೆಳೆಯುವ ವಿಶ್ವಾಸವಿದೆ’ ಎಂದು ನುಡಿದರು.
‘ಚೆನ್ನೈನಲ್ಲಿ ಈಚೆಗೆ ನಡೆದಿದ್ದ ಚೆಸ್ ಒಲಿಂಪಿಯಾಡ್ ಯಶಸ್ಸು ಗಳಿಸಿತ್ತು. ಭಾರತದ ಯುವ ಆಟಗಾರರು ವಿಶ್ವಮಟ್ಟದಲ್ಲಿ ಮಿಂಚುತ್ತಿದ್ದಾರೆ. ದೇಶದಲ್ಲಿ ಚೆಸ್ ಕ್ರೀಡೆಯ ಜನಪ್ರಿಯತೆ ಹೆಚ್ಚುತ್ತಿದೆ’ ಎಂದು ರಾಜ್ಯ ಚೆಸ್ ಸಂಸ್ಥೆಯ ಅಧ್ಯಕ್ಷ ಡಿ.ಪಿ.ಅನಂತ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.