ಶನಿವಾರ, ಆಗಸ್ಟ್ 17, 2019
24 °C
ಬೆಳಗಾವಿಯಲ್ಲಿ ₹ 74 ಲಕ್ಷ ವೆಚ್ಚದಲ್ಲಿ ನಿರ್ಮಾಣ

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಬಿಡಾಡಿ ದನಗಳಿಗೂ ‘ಸೂರು’

Published:
Updated:
Prajavani

ಬೆಳಗಾವಿ: ಕೇಂದ್ರದ ‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ನಾಗರಿಕರಿಗೆ ವಿವಿಧ ಮೂಲಸೌಲಭ್ಯ ಕಲ್ಪಿಸುವುದಕ್ಕೆ ಆದ್ಯತೆ ನೀಡುವ ಜೊತೆಗೆ, ಬಿಡಾಡಿ ದನ–ಕರುಗಳ ಪುನರ್ವಸತಿಗೂ ಇಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಇಲ್ಲಿನ ಶ್ರೀನಗರದಿಂದ ಚನ್ನಮ್ಮ ಕಾಲೊನಿಗೆ ಹೋಗುವ ದಾರಿಯಲ್ಲಿ ನಗರಪಾಲಿಕೆಗೆ ಸೇರಿದ ಒಂದು ಎಕರೆ ಪ್ರದೇಶದಲ್ಲಿ ಬರೋಬ್ಬರಿ ₹ 74 ಲಕ್ಷ ವೆಚ್ಚದಲ್ಲಿ ಹೊಸದಾಗಿ ದೊಡ್ಡ ಪ್ರಮಾಣದಲ್ಲಿ ಕೊಟ್ಟಿಗೆಯನ್ನು ನಿರ್ಮಿಸಲಾಗಿದೆ. ಅಲ್ಲಿ ಸರಾಸರಿ 50 ದನ–ಕರುಗಳಿಗೆ ಆಶ್ರಯ ಕಲ್ಪಿಸಲು ಯೋಜಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಟ್ಟಲಾದ ಈ ಗೋದಾಮು ಮಾದರಿಯ ಕೊಟ್ಟಿಗೆಯನ್ನು ನಗರಪಾಲಿಕೆಗೆ ಹಸ್ತಾಂತರಿಸಲಾಗುವುದು. ಬಿಡಾಡಿ ದನಗಳ ಸಾಕಣೆ, ನಿರ್ವಹಣೆಯ ಹೊಣೆಯನ್ನು ಈ ಸ್ಥಳೀಯ ಸಂಸ್ಥೆಯೇ ನೋಡಿಕೊಳ್ಳಲಿದೆ.

ನಗರವನ್ನು ‘ಸ್ಮಾರ್ಟ್‌’ ಆಗಿಸುವ ಪರಿಕಲ್ಪನೆಯಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು ಕೂಡ ಸೇರಿದೆ. ಬಿಡಾಡಿ ದನಗಳು ಎಲ್ಲೆಂದರಲ್ಲಿ, ಅದರಲ್ಲೂ ಮುಖ್ಯರಸ್ತೆಗಳು ಹಾಗೂ ವೃತ್ತಗಳಲ್ಲಿ ಓಡಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ; ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ, ಅವುಗಳಿಗೆ ಪುನರ್ವಸತಿ ಕಲ್ಪಿಸುವ ಜವಾಬ್ದಾರಿಯೂ ಪಾಲಿಕೆಗೆ ಸೇರಿದ್ದೇ ಆಗಿದೆ. ಆದರೆ, ಪ್ರಸ್ತುತ ಬಿಡಾಡಿ ದನಗಳನ್ನು ಹಿಡಿದು ಸಾಗಿಸಿದ ಮೇಲೆ ಪುವರ್ವಸತಿ ಒದಗಿಸುವುದೇ ತೊಂದರೆಯಾಗಿ ಪರಿಣಮಿಸಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅನುದಾನ ಬಳಕೆ ಮಾಡಲಾಗಿದೆ.

‘ಈ ಪುನರ್ವಸತಿ ಕೇಂದ್ರದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ. ಶೀಘ್ರವೇ ಅದನ್ನು ಪಾಲಿಕೆಗೆ ಹಸ್ತಾಂತರಿಸಲಾಗುವುದು. ಅಲ್ಲಿ ಕುಡಿಯುವ ನೀರು, ಮೇವಿನ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ದನಗಳಿಗೆ ಮೇವು ಹಾಕಲು ಹಾಗೂ ನೀರು ಪೂರೈಸುವುದಕ್ಕೆ ಬೇಕಾದ ವ್ಯವಸ್ಥೆ ಅಲ್ಲಿದೆ. ಕೊಟ್ಟಿಗೆ ನೋಡಿಕೊಳ್ಳುವುದಕ್ಕಾಗಿ ನೇಮಿಸಿಕೊಳ್ಳುವ ಕಾವಲುಗಾರ ವಾಸವಿರಲು ಕೊಠಡಿ ನಿರ್ಮಿಸಲಾಗಿದೆ. ಸ್ಟೋರ್‌ ರೂಂ ಕೂಡ ಇದೆ. ಜೈವಿಕ ಅನಿಲ ಘಟಕ (ನಿತ್ಯ 250 ಕೆ.ಜಿ. ಸಾಮರ್ಥ್ಯ) ಸ್ಥಾಪಿಸಲಾಗಿದ್ದು, ಅಲ್ಲಿ ತಯಾರಾಗುವ ಅನಿಲವನ್ನು ಕಾವಲುಗಾರನ ಕೊಠಡಿಯಲ್ಲಿ ಬಳಸಬಹುದಾಗಿದೆ’ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಎಇ ರಾಮನಗೌಡ ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪಾಲಿಕೆಯವರು ಬಿಡಾಡಿ ದನಗಳನ್ನು ಹಿಡಿದು ಮಾಲೀಕರಿಗೆ ದಂಡ ಹಾಕುತ್ತಾರೆ. ಮಾಲೀಕರಿಲ್ಲದಿದ್ದ ಪಕ್ಷದಲ್ಲಿ ಅವುಗಳಿಗೆ ಪುನರ್ವಸತಿಯನ್ನು ಈ ಕೊಟ್ಟಿಗೆಯಲ್ಲಿ ಕಲ್ಪಿಸಬಹುದಾಗಿದೆ. ಇದರಿಂದ, ಅವುಗಳು ನಗರದಲ್ಲಿ ಓಡಾಡುವುದು, ಜನರು ಮತ್ತು ವಾಹನಗಳಿಗೆ ತೊಂದರೆ ಕೊಡುವುದು ತಪ್ಪುತ್ತದೆ’ ಎನ್ನುತ್ತಾರೆ ಅವರು.

Post Comments (+)