ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸುಗೂಸಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Last Updated 19 ಡಿಸೆಂಬರ್ 2020, 16:09 IST
ಅಕ್ಷರ ಗಾತ್ರ

ಬೆಳಗಾವಿ: ಎರಡು ಕೆ.ಜಿ. ಗಿಂತಲೂ ಕಡಿಮೆ ಇದ್ದ ಗೋವಾದ 10 ದಿನದ ಹಸುಗೂಸಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿ ಜೀವ ದಾನ ನೀಡುವಲ್ಲಿ ನಗರದ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಾ ವಿಭಾಗ ತಜ್ಞ ವೈದ್ಯ ಡಾ.ಪ್ರವೀಣ ತಂಬ್ರಳ್ಳಿಮಠ ಅವರ ತಂಡವು ಯಶಸ್ವಿಯಾಗಿದೆ.

ಗೋವಾದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ತೀವ್ರ ಉಸಿರಾಟದ ತೊಂದರೆ, ಎದೆಬಿಗಿತ ಸಮಸ್ಯೆ ಕಾಣಿಸಿಕೊಂಡಿತ್ತು. ನೀಲಿ ಬಣ್ಣಕ್ಕೆ ತಿರಗುತ್ತಿತ್ತು. ಅವಳಿ–ಜವಳಿಯಲ್ಲಿ ಒಂದಾದ ಈ ಮಗು ತೀವ್ರ ಉಸಿರಾಟದ ತೊಂದರೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪ್ರಭಾಕರ ಕೋರೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರು.

ಇಲ್ಲಿನ ವೈದ್ಯರು ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. 8 ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಹೃದಯದ ಮುಖ್ಯ ರಕ್ತನಾಳ ಹಾಗೂ ಪಲ್ಮನರಿ ರಕ್ತನಾಳವನ್ನು ಸರಿಯಾದ ಮಾರ್ಗಕ್ಕೆ ಜೋಡಿಸಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ. ಗೋವಾದ ಆರೋಗ್ಯ ಯೋಜನೆಯಾದ ದೀನದಯಾಳ ಸ್ವಾಸ್ಥ್ಯ ಸೇವಾ ಯೋಜನೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಮಗು ಗುಣಮುಖವಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಡಾ.ಪ್ರವೀಣ ಹಾಗೂ ಡಾ.ನಿಕುಂಜ ವ್ಯಾಸ ಅವರಿಗೆ ಅರವಳಿಕೆ ತಜ್ಞ ವೈದ್ಯರಾದ ಡಾ.ಆನಂದ ವಾಘರಾಳಿ, ಡಾ.ಶರಣಗೌಡ ಪಾಟೀಲ, ಡಾ.ನಿಧಿ ಗೋಯಲ್ ಸಹಕರಿಸಿದರು. ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಆಡಳಿತ ಮಂಡಳಿಯವರು ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT