ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ; 80 ಗ್ರಾಮಗಳಿಗೆ ಟ್ಯಾಂಕರ್ ನೀರಿನಾಸರೆ!

Last Updated 10 ಮೇ 2019, 10:34 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ಟ್ಯಾಂಕರ್‌ಗಳಿಂದ ನೀರು ಪೂರೈಸುವ ಹಳ್ಳಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ.

ಜಿಲ್ಲೆಯಲ್ಲಿ ಬೇಸಿಗೆಯಲ್ಲಿ 150 ಹಳ್ಳಿಗಳಿಗೆ ಕುಡಿಯುವ ನೀರಿನ ಅಭಾವ ಕಂಡುಬರಬಹುದು ಎಂದು ಜಿಲ್ಲಾಡಳಿತದಿಂದ ಅಂದಾಜಿಸಲಾಗಿತ್ತು. ಕೆಲವು ದಿನಗಳ ಹಿಂದೆ 30ಕ್ಕೂ ಹೆಚ್ಚಿನ ಗ್ರಾಮಗಳಿಗೆ ಟ್ಯಾಂಕರ್‌ಗಳಲ್ಲಿ ತೆಗೆದುಕೊಂಡು ಹೋಗಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಗುರುವಾರದ ವೇಳೆಗೆ ಇವುಗಳ ಸಂಖ್ಯೆ ಬಹುತೇಕ ಮೂರು ಪಟ್ಟು ಹೆಚ್ಚಾಗಿದೆ. ಪ್ರಸ್ತುತ 80 ಗ್ರಾಮಗಳಿಗೆ ಟ್ಯಾಂಕರ್‌ ನೀರೇ ಆಸರೆಯಾಗಿದೆ. ಮುಂದಿನ ದಿನಗಳಲ್ಲಿ ‌‘ಟ್ಯಾಂಕರ್ ನೀರು ಅವಲಂಬಿತ ಗ್ರಾಮಗಳ ಸಂಖ್ಯೆ’ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕುಸಿದ ಅಂತರ್ಜಲ: ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಮಾರ್ಕಂಡೇಯ, ಘಟಪ್ರಭಾ, ಮಲಪ್ರಭಾ, ವೇದಗಂಗಾ, ಪಂಚಗಂಗಾ ಮೊದಲಾದ ನದಿಗಳೆಲ್ಲವೂ ಸಂಪೂರ್ಣ ಬತ್ತಿ ಹೋಗಿವೆ. ಹಿಡಕಲ್ ಹಾಗೂ ನವಿಲುತೀರ್ಥ ಜಲಾಶಯದಲ್ಲಿರುವ ನೀರು ಸಂಗ್ರಹದ ಸ್ಥಿತಿ ಕೂಡ ಸಮಾಧಾನಕರವಾಗಿಲ್ಲ. ಕೆರೆ ಕಟ್ಟೆಗಳ ಒಡಲು ಕೂಡ ಬರಿದಾಗಿದೆ. ಇದೆಲ್ಲದರಿಂದಾಗಿ, ಅಂತರ್ಜಲ ಮಟ್ಟವೂ ಕೂಡ ಪಾತಾಳಕ್ಕೆ ಹೋಗಿದೆ. ನದಿಗಳಿಂದ ನೀರು ಅವಲಂಬಿಸಿ ಅನುಷ್ಠಾನಗೊಳಿಸಲಾಗಿರುವ ಬಹುಗ್ರಾಮ ಕುಡಿಯುವ ನೀರಾವರಿ ಯೋಜನೆಗಳಿಂದಲೂ ನೀರು ದೊರೆಯುತ್ತಿಲ್ಲ. ಇದರಿಂದಾಗಿ, ವಿಶೇಷವಾಗಿ ತೋಟದ ವಸತಿಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಜಾನುವಾರುಗೂ ಮೇವು–ನೀರಿನ ಕೊರತೆ ಉಂಟಾಗಿರುವುದು ಕಂಡುಬಂದಿದೆ.

ಅಥಣಿ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ರಾಮದುರ್ಗ, ಸವದತ್ತಿ ತಾಲ್ಲೂಕುಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಟ್ಯಾಂಕರ್‌ ನೀರು ಪೂರೈಸುತ್ತಿರುವ ಪ್ರದೇಶಗಳಲ್ಲಿ ತೋಟದ ವಸತಿಗಳೇ ಜಾಸ್ತಿ ಇವೆ.

ಬತ್ತಿದ್ದರಿಂದ ತೊಂದರೆ: ಜಿಲ್ಲೆಯಲ್ಲಿ 1,234 ಕಂದಾಯ ಗ್ರಾಮಗಳಿವೆ. ಈ ಪೈಕಿ ಬೆಳಗಾವಿ ವಿಭಾಗದ 19 ಹಾಗೂ ಚಿಕ್ಕೋಡಿ ವಿಭಾಗದ 131 ಹಳ್ಳಿಗಳಲ್ಲಿ ಪ್ರತಿ ಬೇಸಿಗೆ ಸಂದರ್ಭದಲ್ಲೂ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿವೆ. ಇದಕ್ಕೆ ಪರಿಹಾರವೆಂಬಂತೆ ಅಲ್ಲಲ್ಲಿ 67 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇವುಗಳಿಂದ 596 ಹಳ್ಳಿಗಳಿಗೆ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವುಗಳಿಗೆ ನೀರಿನ ಮೂಲವಾದ ನದಿಗಳು ಕೂಡ ಬತ್ತಿರುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಬಹುತೇಕ ಕಡೆಗಳಲ್ಲಿ ನೀರು ಶುದ್ಧೀಕರಣ ಘಟಕಗಳಿಗೂ ನೀರಿನ ಕೊರತೆ ಎದುರಾಗಿದೆ. ಹೀಗಾಗಿ, ಘಟಕಗಳಿದ್ದರೂ ಅನುಕೂಲಕ್ಕೆ ಬಾರದಂತಾಗಿವೆ. ಪರಿಣಾಮ, ಅಲ್ಲಿನ ಜನರಿಗೆ ಪರದಾಟ ತಪ್ಪಿಲ್ಲ.

ಕ್ರಮ ಕೈಗೊಳ್ಳಲಾಗಿದೆ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ, ‘ನೀರು ಪೂರೈಕೆಗೆ ಸಂಬಂಧಿಸಿದಂತೆ ಕೈಗೊಳ್ಳಲಿರುವ ತುರ್ತು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಅಲ್ಲಲ್ಲಿ ಕೊಳವೆಬಾವಿಗಳನ್ನು ಕೊರೆಯುವುದಕ್ಕೂ ಅನುಮತಿ ಕೊಡಲಾಗಿದೆ. ಗ್ರಾಮೀಣ ನೀರು ಪೂರೈಕೆ ಇಲಾಖೆಯಲ್ಲಿ ಎಂಜಿನಿಯರ್‌ಗಳ ಕೊರತೆ ಇರುವುದರಿಂದ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್ ವಿಭಾಗದ ಜೆಇ, ಎಇಗಳನ್ನೇ ಅಲ್ಲಿಗೆ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ. ಇದರಿಂದಾಗಿ, ತಾಲ್ಲೂಕಿಗೆ 8ರಿಂದ 9 ಮಂದಿ ಎಂಜಿನಿಯರ್‌ಗಳು ದೊರೆತಂತಾಗುತ್ತದೆ. ಅವರು ಸಮಸ್ಯೆ ಪರಿಹಾರಕ್ಕೆ ಕೂಡಲೇ ಸ್ಪಂದಿಸುತ್ತಾರೆ; ನಿರ್ವಹಿಸುತ್ತಾರೆ. ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನೂ ಕೂಡ ನೇಮಿಸಲಾಗಿದೆ. ನಾನೂ ಜಿಲ್ಲಾ ಪ್ರವಾಸದಲ್ಲಿದ್ದೇನೆ’ ಎಂದು ಮಾಹಿತಿ ನೀಡಿದರು.

‘216 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲು ಪಟ್ಟಿ ಸಿದ್ಧಪಡಿಸಲಾಗಿದೆ. ಈವರೆಗೆ 14 ಬೋರ್‌ವೆಲ್‌ಗಳನ್ನು ತಿಂಗಳಿಗೆ ₹15ಸಾವಿರ ಬಾಡಿಗೆಯಂತೆ 3 ತಿಂಗಳವರೆಗೆ ಬಾಡಿಗೆಗೆ ಪಡೆಯಲಾಗಿದೆ. ಅಲ್ಲಿಂದ ಜನರಿಗೆ ನೀರು ಒದಗಿಸಲಾಗುವುದು. ಹೊಸದಾಗಿ ಕೊಳವೆಬಾವಿ ಕೊರೆಯುವುದಕ್ಕಿಂತ, ಖಾಸಗಿಯವರ ಕೊಳವೆಬಾವಿಗಳನ್ನು ಒಪ್ಪಂದದ ಮೇರೆಗೆ ಬಾಡಿಗೆಗೆ ಪಡೆದುಕೊಳ್ಳಲು ಆದ್ಯತೆ ಕೊಡುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಹಣ ಬಳಸಿಕೊಳ್ಳಲು ಸೂಚನೆ: ‘14ನೇ ಹಣಕಾಸು ಯೋಜನೆಯಡಿ ಲಭ್ಯವಿರುವ ಹಣವನ್ನು ‘ಕಾಮಗಾರಿ ಬದಲಾವಣೆ’ ಮಾಡಿಕೊಂಡು ಕುಡಿಯುವ ನೀರು ಪೂರೈಕೆ ಕೆಲಸಕ್ಕೆ ಬಳಸಿಕೊಳ್ಳುವಂತೆಯೂ ಗ್ರಾಮ ಪಂಚಾಯ್ತಿಗಳಿಗೆ ಸೂಚಿಸಲಾಗಿದೆ. ಪ್ರತಿ ಪಂಚಾಯ್ತಿಗಳಲ್ಲೂ ಕನಿಷ್ಠ ₹ 8ರಿಂದ ₹ 10 ಲಕ್ಷ ಲಭ್ಯವಿರುತ್ತದೆ. ಇದನ್ನು ಬಳಸಿಕೊಳ್ಳಬಹುದು. ಹೀಗಾಗಿ, ಸದ್ಯ ಅನುದಾನದ ಕೊರತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಟ್ಯಾಂಕರ್‌ ನೀರು ಪೂರೈಕೆ ಅಂಕಿ–ಅಂಶ

ತಾಲ್ಲೂಕು; ಗ್ರಾಮಗಳ ಸಂಖ್ಯೆ; ಜನಸಂಖ್ಯೆ; ಟ್ಯಾಂಕರ್‌; ಟ್ರಿಪ್; ಬಾಡಿಗೆ ಬೋರ್‌ವೆಲ್‌

ಚಿಕ್ಕೋಡಿ; 17; 28424; 15; 50; 0

ರಾಯಬಾಗ; 11; 40598; 16; 62; 0

ಅಥಣಿ; 37; 64764; 51; 189; 0

ರಾಮದುರ್ಗ; 8; 11036; 3; 8; 5

ಸವದತ್ತಿ; 1; 1721; 0; 0; 1

ಕಿತ್ತೂರ; 1; 635; 1; 2; 0

ಬೈಲಹೊಂಗಲ; 3; 6063; 0; 0; 8

ಒಟ್ಟು; 80; 153241; 85; 311; 14

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT