ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹವ್ಯಾಸಿ– ವೃತ್ತಿ ರಂಗಭೂಮಿ ನಡುವಿನ ಕಂದಕ ನಿರ್ಮೂಲನೆಗೊಳಿಸಿ’

ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ ಶಿಗ್ಗಾಂವ ಅನಿಸಿಕೆ;
Last Updated 27 ಜೂನ್ 2018, 16:16 IST
ಅಕ್ಷರ ಗಾತ್ರ

ಬೆಳಗಾವಿ: ‘ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ನಡುವಿನ ಕಂದಕವನ್ನು ನಿರ್ಮೂಲನೆ ಮಾಡಿ, ನವ ವೃತ್ತಿರಂಗಭೂಮಿ ನಿರ್ಮಿಸಬೇಕಾಗಿದೆ’ ಎಂದು ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ ಶಿಗ್ಗಾಂವ ಹೇಳಿದರು.

ನಗರದಲ್ಲಿ ಬುಧವಾರ ಕರ್ನಾಟಕ ಬೀದಿನಾಟಕ ಅಕಾಡೆಮಿ ನೀಡುವ ಸಿಜಿಕೆ ರಂಗ ಪುರಸ್ಕಾರವನ್ನು ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಪ್ರಕಾಶ ದೇಶಪಾಂಡೆ ಅವರಿಗೆ ವಿತರಿಸಿದ ನಂತರ ಮಾತನಾಡಿದರು.

‘ರಾಜ್ಯದಲ್ಲಿ ಇಂದು ರಂಗಭೂಮಿ ಅಳಿವು– ಉಳಿವಿನ ಪರಿಸ್ಥಿತಿ ಎದುರಿಸುತ್ತಿದೆ. ಪ್ರೇಕ್ಷಕರನ್ನು ಕರೆತರುವಲ್ಲಿ ಆಧುನಿಕ ರಂಗಭೂಮಿ ವಿಫಲವಾಗಿದೆ. ಪ್ರೇಕ್ಷಕರಿಗೆ ಬೇಕಾಗಿದ್ದನ್ನು ನೀಡದಿರುವುದೇ ಇದಕ್ಕೆ ಕಾರಣವಾಗಿದೆ. ಪ್ರೇಕ್ಷಕರು ಹಾಗೂ ರಂಗಭೂಮಿಯ ನಡುವಿನ ಅಂತರವನ್ನು ತೆಗೆದುಹಾಕಬೇಕಾಗಿದೆ. 70ರ ದಶಕದಲ್ಲಿದ್ದ ಗಾಂಭೀರ್ಯತೆ ಜೊತೆ ರಂಜನೀಯ ಅಂಶಗಳನ್ನು ಸೇರಿಸಿ ಪ್ರೇಕ್ಷಕರಿಗೆ ನೀಡಬೇಕಾಗಿದೆ’ ಎಂದು ಹೇಳಿದರು.

‘ವೃತ್ತಿ ರಂಗಭೂಮಿಯ ಕಲಾವಿದರು ಪ್ರೇಕ್ಷಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಿದ್ದರು. ಹೀಗಾಗಿ ಪ್ರೇಕ್ಷಕರಿಗೆ ಏನು ಬೇಕು ಎನ್ನುವುದನ್ನು ಅರಿತಿದ್ದರು. ಅದನ್ನು ನಾಟಕದಲ್ಲಿ ನೀಡುತ್ತಿದ್ದರು. ಆದರೆ, ಇಂದು ರಂಗ ಶಾಲೆಗಳು ಹಾಗೂ ರಂಗತಂಡಗಳು ಪ್ರೇಕ್ಷಕರ ಜೊತೆ ಅಂತರ ಕಾಯ್ದುಕೊಂಡಿವೆ. ಪ್ರದರ್ಶನದ ವೇಳೆ ಯಾರಾದರೂ ‘ಒನ್ಸ್‌ ಮೋರ್‌’ ಎಂದು ಹೇಳಿದರೆ ನಾವು ಕಿರಿಕಿರಿ ಅನುಭವಿಸುತ್ತೇವೆ. ಈ ಅಂತರ ಹೋಗಬೇಕಾಗಿದೆ. ಅಂದಾಗ ಮಾತ್ರ ರಂಗಭೂಮಿಗೆ ಭವಿಷ್ಯವಿದೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಈಗ ಅಂದಾಜು 22 ನಾಟಕ ಕಂಪನಿಗಳು ಮಾತ್ರ ಉಳಿದುಕೊಂಡಿವೆ. ಇವುಗಳ ಮಾಲೀಕರು ಈಗ 70–80 ವಯಸ್ಸಿನ ಆಜುಬಾಜು ಇದ್ದಾರೆ. ಇವರ ನಂತರ ಈ ಕಂಪನಿಗಳು ಕೂಡ ಮುಚ್ಚಿಹೋಗುವ ಆತಂಕವಿದೆ. ಇವುಗಳನ್ನು ರಂಗ ತಂಡಗಳಾಗಿ ಮಾಡಿಕೊಂಡು, ಉಳಿಸಿಕೊಳ್ಳಬೇಕಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಿಜಿಕೆ ರಂಗ ಪುರಸ್ಕಾರವನ್ನು ಕೇವಲ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನಾಗಿಸದೇ, ನಾಟಕ ಆಡುವ ಮೂಲಕ ಮಾಡಬಹುದಿತ್ತು. ಸಿಜಿಕೆ ಅವರು ‘ರಂಗ ನಿರಂತರ’ ತಂಡವನ್ನು ಕಟ್ಟಿದ್ದಾರೆ. ಈ ತಂಡದ ಮೂಲಕ ವರ್ಷಕ್ಕೊಮ್ಮೆಯಾದರೂ ನಾಟಕ ಉತ್ಸವಗಳನ್ನು ಮಾಡಿಸಬೇಕು’ ಎಂದು ಸಲಹೆ ನೀಡಿದರು.

ಅಭಿನಂದನೆ ಮಾತುಗಳನ್ನಾಡಿದ ಸಾಹಿತಿ ಸರಜೂ ಕಾಟ್ಕರ, ‘ವೈವಿಧ್ಯಮಯ ಜೀವನವನ್ನು ಬದುಕಿದ ಪ್ರಕಾಶ ದೇಶಪಾಂಡೆ, ಪತ್ರಕರ್ತರಾಗಿ, ಸಾಹಿತಿ ಹಾಗೂ ಸೇವಾದಳ ಸಂಘಟಕರಾಗಿ ದುಡಿದಿದ್ದಾರೆ. ಸಿಜಿಕೆ ರಂಗ ಪುರಸ್ಕಾರ ಸೂಕ್ತ ವ್ಯಕ್ತಿಗೆ ಸಂದಿದೆ’ ಎಂದು ಹೇಳಿದರು.

‘ದೇವನೂರು ಮಹಾದೇವ ಅವರ ‘ಒಡಲಾಳ’ ಕೃತಿಯನ್ನು ಹತ್ತಾರು ಓದಿದರೂ ಅರ್ಥವಾಗಲಿಲ್ಲ. ಆದರೆ, ಇದೇ ಕೃತಿಯನ್ನು ಸಿಜಿಕೆ ನಾಟಕಕ್ಕೆ ತಂದಾಗ ಅದನ್ನು ನೋಡಿ ಅರ್ಥ ಮಾಡಿಕೊಂಡೆ. ಸಿಜಿಕೆ ಅವರು ರಂಗಭೂಮಿಯಲ್ಲಿ ಶಿಸ್ತು ತಂದಿದ್ದರು. ಅವರ ನಾಟಕಗಳಲ್ಲಿ ಸಮಾಜದ ಬಗೆಗಿನ ಕಳಕಳಿ ಎದ್ದುಕಾಣುತ್ತಿತ್ತು’ ಎಂದು ನುಡಿದರು.

ಪುರಸ್ಕಾರ ಸ್ವೀಕರಿಸಿದ ಪ್ರಕಾಶ ದೇಶಪಾಂಡೆ ಮಾತನಾಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ನಾಟಕಕಾರ ಡಿ.ಎಸ್‌. ಚೌಗುಲೆ ವಹಿಸಿದ್ದರು. ಬೈರೋಬಾ ಕಾಂಬಳೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT