ಮಂಗಳವಾರ, ಏಪ್ರಿಲ್ 20, 2021
32 °C

ಗಡಿಯಲ್ಲಿ ಕಾಟಾಚಾರದ ತಪಾಸಣೆ! ಹಲವು ಮಾರ್ಗ, ವಾಹನಗಳಲ್ಲಿ ರಾಜ್ಯ ಪ್ರವೇಶ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್–19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದರೂ, ಆ ರಾಜ್ಯದಿಂದ ಬರುವವರನ್ನು ತಪಾಸಣೆಗೆ ಒಳಪಡಿಸುವ ಕಾರ್ಯ ಗಡಿಯಲ್ಲಿ ಕಾಟಾಚಾರಕ್ಕೆ ಎನ್ನುವಂತೆ ನಡೆಯುತ್ತಿದೆ.

ರಾಜ್ಯವನ್ನು ಸಂಪರ್ಕಿಸುವ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಥರ್ಮಲ್‌ ಸ್ಕೀನಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ, ಆ ರಾಜ್ಯದ ನೋಂದಣಿಯ ಕಾರುಗಳಲ್ಲಿ ಬರುವವರಿಂದ ಮಾತ್ರ 72 ಗಂಟೆಗಳ ಒಳಗಾಗಿ ಪಡೆದ ‘ನೆಗೆಟಿವ್‌ ಆರ್‌ಟಿಪಿಸಿಆರ್ ಕೋವಿಡ್ ತಪಾಸಣಾ ಪ್ರಮಾಣಪತ್ರ’ ಹೊಂದಿರುವುದನ್ನು ಪರಿಶೀಲಿಸಲಾಗುತ್ತಿದೆ. ದ್ವಿಚಕ್ರವಾಹನಗಳು, ಲಾರಿಗಳು, ಬಸ್‌ಗಳು ಮೊದಲಾದ ವಾಹನಗಳಲ್ಲಿ ಬರುವವರಿಂದ ‘ಆ’ ಪ್ರಮಾಣಪತ್ರವನ್ನೂ ಕೇಳುತ್ತಿಲ್ಲ ಮತ್ತು ಪ್ರವೇಶಕ್ಕೆ ನಿರ್ಬಂಧವನ್ನೂ ವಿಧಿಸಲಾಗುತ್ತಿಲ್ಲ.

ನಿಪ್ಪಾಣಿ ತಾಲ್ಲೂಕಿನ ಕೊಗನೋಳಿ ಮೂಲಕ ನಿತ್ಯವೂ ಸಾವಿರಾರು ಮಂದಿ ಮಹಾರಾಷ್ಟ್ರದಿಂದ ಬರುತ್ತಾರೆ. ಎಲ್ಲ ವಾಹನಗಳಲ್ಲಿ  ಬರುವವರೆಲ್ಲರನ್ನೂ ತಪಾಸಣೆಗೆ ಒಳಪಡಿಸುವುದು ಸವಾಲಾಗಿ ಪರಿಗಣಮಿಸಿದೆ. ಅಲ್ಲಿಂದ ಇಲ್ಲಿಗೆ ಬರಲು ಹಾಗೂ ಇಲ್ಲಿಂದ ಅಲ್ಲಿಗೆ ಹೋಗಲು ನಿರ್ಬಂಧವನ್ನೇನೂ ವಿಧಿಸಿಲ್ಲದಿರುವುದು ಕಂಡುಬರುತ್ತಿದೆ.

ಮಹಾರಾಷ್ಟ್ರದ ಕೆಲವು ಭಾಗದಲ್ಲಿ ಮತ್ತೆ ಲಾಕ್‌ಡೌನ್‌ ಘೋಷಣೆ ಆದಾಗ ಅಂದರೆ ಫೆ.21ರಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಗನೋಳಿ, ಕಾಗವಾಡ, ಅಥಣಿ ಹಾಗೂ ಸದಲಗಾ ಮೊದಲಾದ ಕಡೆಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಲಾಯಿತು. ಮರು ದಿನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿದ್ದರು. ಮಾರ್ಗಸೂಚಿ ಪ್ರಕಾರ ಕ್ರಮಕ್ಕೆ ಸೂಚಿಸಿದ್ದರು. ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇಲ್ಲದವರನ್ನು ವಾಪಸ್ ಕಳುಹಿಸಲಾಗುತ್ತಿತ್ತು. ಬಳಿಕ, ತೀವ್ರ ತಪಾಸಣೆ ಕಾರ್ಯ ನಡೆಯುತ್ತಿಲ್ಲ. ಇದು, ಆತಂಕಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸಲು ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಮಾರ್ಗಗಳಿವೆ. ಬಹುತೇಕ ಕಡೆಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿಲ್ಲ. ರೈಲು, ಬಸ್‌ಗಳಲ್ಲಿ ಬರುವವರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿಲ್ಲ. ‘ತಪಾಸಣೆ ಕಾರ್ಯ ಕಟ್ಟಿನಿಟ್ಟಾಗಿ ನಡೆಯುತ್ತಿಲ್ಲ. ಅಲ್ಲಿಂದ ಕಣ್ತಪ್ಪಿಸಿ ಬರುವವರ ಸಂಖ್ಯೆಯೂ ಕಡಿಮೆ ಏನಿಲ್ಲ’ ಎನ್ನುತ್ತಾರೆ ಗಡಿಯಲ್ಲಿರುವ ಸ್ಥಳೀಯರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಮುಂಬೈ, ಪುಣೆ, ಅಮರಾವತಿ ಮೊದಲಾದ ಕಡೆಗಳವರು ಇಲ್ಲಿಗೆ ಬರಲು ಬಸ್‌, ರೈಲು ಅಥವಾ ವಿಮಾನದಲ್ಲಿ ಟಿಕೆಟ್ ಕಾಯ್ದಿರಿಸಿದ್ದರೆ ಅವರ ಮಾಹಿತಿ ಲಭ್ಯವಾಗುತ್ತದೆ. ಕೋವಿಡ್ ನೆಗೆಟಿವ್ ವರದಿ ಕಡ್ಡಾಯದ ಬಗ್ಗೆ ಅವರಿಗೆ ಎಸ್‌ಎಂಎಸ್ ಕಳುಹಿಸಲಾಗುತ್ತಿದೆ. ಆದಾಗ್ಯೂ ಬಂದವರಿಗೆ (ಟಿಕೆಟ್ ಕಾಯ್ದಿರಿಸದೆ) ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ. ಫಾಲೋಅಪ್‌ ಮಾಡುವುದು ಪೊಲೀಸರ ಕೆಲಸವಾಗಿದೆ. ಗಡಿಯಲ್ಲಿ ಚೆಕ್‌‍ಪೋಸ್ಟ್‌ಗಳು ಚಾಲ್ತಿಯಲ್ಲಿವೆ. ಯಾರನ್ನೂ ವಾಪಸ್ ಕಳುಹಿಸುತ್ತಿಲ್ಲ. ‍ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿ, ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ನಿತ್ಯ ಸರಾಸರಿ 2ಸಾವಿರ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು