ಬುಧವಾರ, ಅಕ್ಟೋಬರ್ 28, 2020
18 °C
ಸೋದರ ಮಾವ ಹೇಳಿಕೆ

ಸುರೇಶ ಅಂಗಡಿ ಅವರನ್ನು ಮುಖ್ಯಮಂತ್ರಿ ಮಾಡಲು ಚರ್ಚೆ ನಡೆದಿತ್ತು: ಲಿಂಗರಾಜ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Suresh Angadi

ಬೆಳಗಾವಿ: ‘ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಬೇಕು ಎಂಬ ಮಹತ್ವದ ಚರ್ಚೆ ನವದೆಹಲಿಯಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿತ್ತು’ ಎಂದು ಅಂಗಡಿ ಅವರ ಸೋದರ ಮಾವ, ರೈತ ಮುಖಂಡ ಲಿಂಗರಾಜ ಪಾಟೀಲ ಇಲ್ಲಿ ಹೇಳಿದರು.

ಇಲ್ಲಿನ ಅಂಗಡಿ ಅವರ ಗೃಹ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಸುರೇಶ ಅವರ ಹೆಸರು ಮುಂಚೂಣಿಯಲ್ಲಿತ್ತು. ಈ ವಿಷಯವನ್ನು ಅನೇಕ ಸಂಸದರು ಪ್ರಸ್ತಾಪಿಸಿದ್ದರು; ಬೆಂಬಲಿಸಿದ್ದರು. ದೆಹಲಿಯ ಮನೆಯಲ್ಲಿ ಹಲವು ಸಭೆಗಳು ನಡೆದಿದ್ದವು. ನಾನೂ ಭಾಗಿಯಾಗಿದ್ದೆ. ಒಳ್ಳೆಯ ವ್ಯಕ್ತಿ, ಅಜಾತಶತ್ರು, ಹೆಸರು ಕೆಡಿಸಿಕೊಂಡಿಲ್ಲ. ಸಮಾಜದ ನಾಯಕ ಹಾಗೂ ಎಲ್ಲರಿಗೂ ಬೇಕಾದವರಾಗಿದ್ದಾರೆ. ಈ ಕಾರಣದಿಂದ ಪರಿಗಣಿಸಬೇಕು ಎಂಬ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದರೆ, ದೈವ ಈ ರೀತಿ ಮಾಡಿತು’ ಎಂದು ತಿಳಿಸಿದರು.

‘ಮುಂಬರುವ ಉಪ ಚುನಾವಣೆಯಲ್ಲಿ ಅಂಗಡಿ ಕುಟುಂಬದವರಿಗೆ ಟಿಕೆಟ್‌ ನೀಡಬೇಕು ಎಂಬ ವಿಷಯದಲ್ಲಿ ಜಿಲ್ಲೆಯ ಎಲ್ಲ ಮುಖಂಡರ ಬೆಂಬಲವಿದೆ ಹಾಗೂ ಅನುಕಂಪವೂ ಇದೆ. ಸಮಾಜದವರು ಸೇರಿದಂತೆ ಹಲವು ವರ್ಗದವರು ನನ್ನ ಮೇಲೆ ಒತ್ತಡ ತರುತ್ತಿದ್ದಾರೆ. ಈ ವಿಷಯವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಟಿಕೆಟ್ ಕೊಟ್ಟರೆ ದಾಖಲೆಯ ಅಂತರದಿಂದ ಗೆದ್ದು ಬರುತ್ತಾರೆ. ಪತ್ನಿ, ಪುತ್ರಿಯರಲ್ಲಿ ಯಾರನ್ನಾದರೂ ಪರಿಗಣಿಸಬೇಕು ಎಂದು ಕೋರಿದ್ದೇನೆ’ ಎಂದು ಹೇಳಿದರು.

‘ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಪಕ್ಷದ ಎಲ್ಲ ಮುಖಂಡರೊಂದಿಗೂ ಚರ್ಚಿಸುತ್ತೇನೆ’ ಎಂದರು.

ಅಂಗಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಹೊರ ಬಂದ ಕಟೀಲ್ ಅವರನ್ನು ಎದುರಾದ ಮುಖಂಡ ಬಸನಗೌಡ ಚಿಕ್ಕನಗೌಡರ, ‘ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸುರೇಶ ಅಂಗಡಿ ಅಪಾರ ಕೊಡುಗೆ ನೀಡಿದ್ದಾರೆ. ಇದನ್ನು ಪರಿಗಣಿಸಿ, ಉಪ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕು. ಚುನಾವಣೆಯಲ್ಲಿ ಗೆಲ್ಲುವವರೆಗೂ ಪಕ್ಷ ಕುಟುಂಬದೊಂದಿಗೆ ನಿಲ್ಲಬೇಕು. ಪರಿಗಣಿಸದಿದ್ದರೆ ಪ್ರತಿಭಟನೆ ಅನಿವಾರ್ಯವಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು