ಶನಿವಾರ, ಜುಲೈ 31, 2021
28 °C
ಮಳೆಯಿಂದ ಮನೆ ರಕ್ಷಣೆ ಪಡೆಯಲು ಈ ವ್ಯವಸ್ಥೆ

ಬೆಚ್ಚಗಿನ ವಾತಾವರಣಕ್ಕೆ ಕಾನನವಾಸಿಗಳ ಉಪಾಯ

ಪ್ರಸನ್ನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ: ತಾಲ್ಲೂಕಿನಲ್ಲಿ ಪಶ್ಚಿಮ ಘಟ್ಟದ ಅರಣ್ಯದಿಂದ ಸುತ್ತುವರಿದಿರುವ ನೂರಕ್ಕೂ ಹೆಚ್ಚು ಗ್ರಾಮಗಳ ಜನರು ಮನೆಗಳಲ್ಲಿ ಬೆಚ್ಚಗಿನ ವಾತಾವರಣ ಇರುವಂತೆ ನೋಡಿಕೊಳ್ಳಲು ಮತ್ತು ಗೋಡೆಗಳಿಗೆ ರಕ್ಷಣೆ ಒದಗಿಸಲು ಹುಲ್ಲಿನಿಂದ ಸಿದ್ಧಪಡಿಸಿದ ಹೊದಿಕೆಗಳನ್ನು ಹಾಕುವ ಮೂಲಕ ಉಪಾಯ ಕಂಡುಕೊಂಡಿದ್ದಾರೆ.

ಕಣಕುಂಬಿ, ಜಾಂಬೋಟಿ, ಭೀಮಗಡ, ನಾಗರಗಾಳಿ, ಲೋಂಡಾ, ಗುಂಜಿ, ನಾಗರಗಾಳಿ, ಹೆಮ್ಮಡಗಾ, ನೇರಸಾ ಅರಣ್ಯ ಪ್ರದೇಶಗಳಲ್ಲಿರುವ ಗ್ರಾಮಗಳಲ್ಲಿ ಮೂರ್ನಾಲ್ಕು ತಿಂಗಳ ಕಾಲ ಧಾರಾಕಾರ ಮಳೆಯಾಗುತ್ತದೆ. ಇದರಿಂದ ಜನ–ಜಾನುವಾರುಗಳು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಳೆಯೊಂದಿಗೆ ಬೀಸುವ ಶೀತಗಾಳಿಯಿಂದ ತಪ್ಪಿಸಿಕೊಳ್ಳಲು ಹುಲ್ಲು–ಬಳ್ಳಿಗಳ ಹೊದಿಕೆಯ ಮೊರೆ ಹೋಗುತ್ತಾರೆ.

ಮಾಡುವುದು ಹೇಗೆ?: ಮಳೆಯಿಂದ ಮನೆ, ಕೊಟ್ಟಿಗೆ, ಗೋದಾಮು ಹಾಗೂ ಶಾಲೆಗಳ ಕಟ್ಟಡ ತಂಪಾಗುವುದನ್ನು ನಿಯಂತ್ರಿಸಲು ಕಾನನವಾಸಿಗಳು ನೈಸರ್ಗಿಕ ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಮಳೆ ನೀರು ಮಾಳಿಗೆಗೆ, ಗೋಡೆಗಳಿಗೆ ತಗುಲದಂತೆ ಸ್ಥಳೀಯ  ಸಂಪನ್ಮೂಲಗಳನ್ನು ಬಳಸಿ ರಕ್ಷಣಾ ಕವಚಗಳನ್ನು (ಹುಲ್ಲಿನ ಹೊದಿಕೆ) ನಿರ್ಮಿಸಿಕೊಂಡಿದ್ದಾರೆ. ತಾಲ್ಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಬೇಸಿಗೆ ಮುಗಿದು ಮಳೆಗಾಲದ ಮುನ್ಸೂಚನೆ ಶುರುವಾಗುತ್ತಲೇ ಹೊದಿಕೆ ಮಾಡಿಕೊಳ್ಳುವ ಕಾರ್ಯ ಶುರುವಾಗುತ್ತದೆ.

ಚಿಕ್ಕ ಕಟ್ಟಿಗೆಗಳು ಮತ್ತು ಬಿದಿರುಗಳನ್ನು ಬಳಸಿ ಗೋಡೆಗಳ ಅಳತೆಗೆ ತಕ್ಕಂತೆ ಅಡ್ಡ ಮತ್ತು ಉದ್ದುದ್ದವಾಗಿ ಹಂದರದ ಮಾದರಿಯಲ್ಲಿ ಕಟ್ಟಿಗೆಗಳನ್ನು ಕಟ್ಟಿ ಗೋಡೆಗಳಿಗೆ ಒರಗಿಸಿ ಇಡಲಾಗುತ್ತದೆ. ಈ ಹಂದರಕ್ಕೆ ಅರಣ್ಯದಲ್ಲಿ ಸಿಗುವ ಎತ್ತರವಾಗಿ ಬೆಳೆಯುವ ವಿಶಿಷ್ಟವಾದ ಹುಲ್ಲನ್ನು (ಸ್ಥಳೀಯವಾಗಿ ಖಡ್ಡಾ ಎನ್ನುತ್ತಾರೆ) ತಂದು ಅದನ್ನು ಕಂತೆ ಮಾಡಿ ಸಮಾನಾಂತರವಾಗಿ ಕಟ್ಟುತ್ತಾರೆ. ಅರಣ್ಯದಲ್ಲಿ ಸಿಗು ಬಳ್ಳಿಗಳನ್ನು ಬಳಸುತ್ತಾರೆ (ಸ್ಥಳೀಯವಾಗಿ ಇದಕ್ಕೆ ವೇಲ್ ಎನ್ನುತ್ತಾರೆ). ಈ ಬಳ್ಳಿ ಮಳೆಗಾಲ ಮುಗಿಯುವವರೆಗೂ ಕಟ್ಟಿಗೆಯೊಂದಿಗೆ ಹುಲ್ಲನ್ನು ಬಿಗಿಯಾಗಿ ಹಿಡಿಯಲು ಸಹಾಯ ಮಾಡುತ್ತದೆ’ ಎನ್ನುತ್ತಾರೆ ಅವರು.

ತೊಂದರೆ ಆಗುವುದಿಲ್ಲ: ಬಾಗಿಲಲ್ಲೂ ಮಳೆ ನೀರು ಹಾಗೂ ಗಾಳಿ ಒಳ ಬಾರದಂತೆ ಹೊದಿಕೆಗಳನ್ನು ಹಾಕುತ್ತರೆ. ಇದರಿಂದ ನೀರು ಹುಲ್ಲಿಗೆ ಬಡಿದು ನೆಲಕ್ಕೆ ಬೀಳುವ ಕಾರಣ ಗೋಡೆಗಳಿಗೆ ತೊಂದರೆ ಆಗುವುದಿಲ್ಲ ಮತ್ತು ಮನೆಯೊಳಗೆ ಬೆಚ್ಚಗಿನ ವಾತಾವರಣ ಇರುತ್ತದೆ ಎನ್ನುತ್ತಾರೆ ಈ ಜನರು. ಹೊದಿಕೆಗಳನ್ನು ಜೂನ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಹೊದಿಸಲಾಗಿರುತ್ತದೆ. ಮಳೆ ಕಡಿಮೆಯಾದ ಬಳಿಕ ತೆರವುಗೊಳಿಸುತ್ತಾರೆ.

‘ಮಳೆಗಾಲದಲ್ಲಿ ರಕ್ಷಣೆಗೆ ಪ್ರಾಕೃತಿಕವಾದ ಕವಚ ನಿರ್ಮಿಸಿಕೊಳ್ಳುವುದು ಹಿಂದಿನಿಂದಲೂ ಇದೆ. ಇದರಿಂದ, ಮಳೆಯಿಂದ ಗೋಡೆಗಳಿಗೆ ಹಾನಿ ಆಗುವುದಿಲ್ಲ. ಬೆಚ್ಚಗೆ ಇರಬಹುದು’ ಎಂದು ಕಾಲಮನಿಯ ಸುನೀಲ ಚಿಗುಳಕರ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆಯಿಂದಾಗಿ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಇರುತ್ತದೆ. ಆದರೆ, ತಾಲ್ಲೂಕಿನ ಕಾಡಂಚಿನ ಜನ ಮನೆಗಳು ಮತ್ತು ಕೊಟ್ಟಿಗೆಗಳಿಗೆ ಹೊದಿಕೆ ಹಾಕುತ್ತಾರೆ. ಈ ಮೂಲಕ ಆರೋಗ್ಯದ ಕಾಳಜಿ ವಹಿಸುತ್ತಾರೆ. ಇದರಿಂದ ಅಡ್ಡ ಪರಿಣಾಮವಿಲ್ಲ’ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು