ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ಇಬ್ಬರು ಕಂದಮ್ಮ ಸೇರಿ ಮೂವರ ಸಾವು, ನಿಲ್ಲದ ಅವಘಡ

ಕಲ್ಯಾಣ ಕರ್ನಾಟಕದಲ್ಲೂ ಉತ್ತಮ ಮಳೆ
Published 25 ಜುಲೈ 2023, 20:37 IST
Last Updated 25 ಜುಲೈ 2023, 20:37 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಧಾರಾಕಾರ ಮಳೆ ಮಂಗಳವಾರವೂ ಮುಂದುವರಿದಿದೆ. ಮಳೆ ಸಂಬಂಧಿ ಅವಘಡಗಳೂ ದಿನೇ ದಿನೇ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಇಬ್ಬರು ಕಂದಮ್ಮಗಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದಾರೆ.

ಹಲವೆಡೆ ಸೇತುವೆಗಳು ಮುಳುಗಡೆ, ರಸ್ತೆಗಳು ಜಲಾವೃತವಾಗಿವೆ. ಗುಡ್ಡ ಕುಸಿತವೂ ಮುಂದುವರಿದಿದೆ. ನದಿ ಪಾತ್ರದ ಹಲವು ಗ್ರಾಮಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲ ಗ್ರಾಮಗಳು ಮುಳುಗಡೆಯಾಗಿವೆ.

ಮಳೆಗೆ ಮನೆಗೋಡೆ ಕುಸಿದ ಪರಿಣಾಮ ವಿಜಯಪುರ ತಾಲ್ಲೂಕಿನ ಕನ್ನೂರು ಗ್ರಾಮದ ವೃದ್ಧೆ ಶಿವಮ್ಮ ನೂರುಂದಪ್ಪ ಸಾವಳಗಿ (85), ಹಾವೇರಿ ಜಿಲ್ಲೆಯ ಗುತ್ತಲದ ಮಾಳಾಪುರದ ಬಾಲಕಿ ಭಾಗ್ಯ ಮಲ್ಲಪ್ಪ ಚಳ್ಳಮರದ (3), ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನಲ್ಲಿ ಮಗು ಸ್ಫೂರ್ತಿ (1) ಮೃತಪಟ್ಟಿದ್ದಾರೆ. ಸ್ಫೂರ್ತಿಯ ಪೋಷಕರಾದ ಕೆಂಚಪ್ಪ, ಲಕ್ಷ್ಮಿದೇವಿ ಅವರಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡಮೇಟಿ ಕುರ್ಕೆ ಗ್ರಾಮದ ಕಾಲೊನಿಯಲ್ಲಿ ಮಳೆಯಿಂದಾಗಿ ಮನೆ ಕುಸಿದು ಗೌರಮ್ಮ (62) ಮೃತಪಟ್ಟಿದ್ದಾರೆ. ಕಾಲಿಗೆ ಗಾಯವಾಗಿರುವ ಪತಿ ನಟರಾಜ್‌ ಅವನ್ನು ಅರಸೀಕೆರೆಯ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಮೊಮ್ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಧನ್ನೂರ (ಆರ್‌) ಗ್ರಾಮದಲ್ಲಿ ಮಲ್ಲಪ್ಪ ಶರಣಪ್ಪ ಕತೆಪನೋರ್‌ (25) ಎಂಬ ಯುವಕ ಸೋಮವಾರ ರಾತ್ರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಳ್ಳದ ಬಳಿ ನಡೆದುಕೊಂಡು ಹೋಗುವಾಗ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.

ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕು ಜಡ್ಕಲ್ ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ (28) ಮನೆಯಿಂದ ನಾಪತ್ತೆಯಾಗಿದ್ದಾರೆ. ಜುಲೈ 22 ರಂದು ಮನೆಯಲ್ಲಿ ಮಲಗಿದ್ದರು. ಮರುದಿನ ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಸುರೇಶ ಇರಲಿಲ್ಲ. ಮನೆ ಪಕ್ಕದ ನದಿನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದು, ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ತಾಲ್ಲೂಕು ಅಲೆವೂರು ಗ್ರಾಮ ಪಂಚಾಯಿತಿ ಬಳಿ ಮರಬಿದ್ದು ಅನಿಲ್ ಕುಮಾರ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಶಿನಗುಂಡಿ ಜಲ ಪಾತದಲ್ಲಿ ಕೊಚ್ಚಿಹೋಗಿರುವ ಭದ್ರಾವತಿ ತಾಲ್ಲೂಕಿನ ಸುಣ್ಣದ ಹಳ್ಳಿ ಕೆ.ಎಚ್. ನಗರದ ಶರತ್ ಕುಮಾರ್ ಅವರ ಪತ್ತೆ ಕಾರ್ಯ ಮುಂದುವರಿದಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡದಿಂದ ಕಾರ್ಯಾಚರಣೆ ನಡೆಸಲಾಯಿತು. ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಜ್ ನೇತೃತ್ವದಲ್ಲಿ ಪತ್ತೆ ಕಾರ್ಯಾ ಚರಣೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೃಷ್ಣೆಯಲ್ಲಿ ಏರುತ್ತಿರುವ ನೀರಿನ ಮಟ್ಟ: ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿ ಎಲ್ಲ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲ್ಲೂಕಿನ ನದಿತೀರದ ಗ್ರಾಮಗಳ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಗಾಳಿ, ಮಳೆಗೆ ಒಟ್ಟು 129 ಮನೆಗಳಿಗೆ ಹಾನಿಯಾಗಿವೆ. 

ತಗ್ಗಿದ ಮಳೆ– ನಿಲ್ಲದ ಭೂಕುಸಿತ: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಿದೆ. ಆದರೆ, ಭೂಕುಸಿತ ಘಟನೆಗಳು ಮುಂದುವರಿದಿವೆ. ನಾಲ್ಕು ಮನೆಗಳಿಗೆ ಪೂರ್ಣ ಹಾಗೂ ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಸಕಲೇಶಪುರ ತಾಲ್ಲೂಕಿನ ಗುಳಗಳಲೆ ಗ್ರಾಮದ ಬಳಿ ಕುಸಿದಿರುವ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯಿಂದ ಮಣ್ಣು ಕುಸಿಯಲು ಆರಂಭಿಸಿದೆ.  ಚಳ್ಳ ಹಾಡ್ಯ ಬಳಿ ರಸ್ತೆಗೆ ಮಣ್ಣು ಕುಸಿದಿದ್ದರಿಂದ ಹಳ್ಳಿಬೈಲು, ಹಳ್ಳಿಬೈಲು ಕಾಲೊನಿ, ದಿನೇಕೆರೆ– ಹೆತ್ತೂರು ಮಾರ್ಗದ ರಸ್ತೆ ಸಂಪರ್ಕ ಕಡಿತವಾಗಿತ್ತು.

ಸಾಗರ ತಾಲ್ಲೂಕಿನ ಸೈದೂರು– ಸಾಗರ ನಡುವೆ ವರದಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆ ಜಲಾವೃತವಾಗಿದೆ. ಇದರಿಂದ ಸೈದೂರು ಸೇರಿದಂತೆ ಸುತ್ತಲಿನ ಹಳ್ಳಿಗಳು ತಾಲ್ಲೂಕು ಕೇಂದ್ರದೊಂದಿಗಿನ ಸಂಪರ್ಕ ಕಳೆದುಕೊಂಡಿವೆ. ಗಾಜನೂರಿನ ತುಂಗಾ ಜಲಾಶಯದಿಂದ 60,455 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಶಿಕಾರಿಪುರದ ಅಂಜನಾಪುರ ಜಲಾ ಶಯ ಭರ್ತಿ ಆಗಿದ್ದು, ಕೋಡಿ ಬಿದ್ದಿದೆ.

ಕಲಬುರಗಿ ಜಿಲ್ಲೆಯ ವಿವಿಧೆಡೆ ಹಾಗೂ ನೆರೆಯ ತೆಲಂಗಾಣ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸುರಿದ ಮಳೆಗೆ ಕಾಗಿಣಾ ಮತ್ತು ಇದರ ಉಪನದಿ ಮುಲ್ಲಾಮಾರಿ ಸೋಮವಾರ ಉಕ್ಕಿ ಹರಿದವು. 12 ಸೇತುವೆಗಳು ಮುಳುಗಿ, ಸಂಚಾರ ಸ್ಥಗಿತಗೊಂಡಿದೆ.

ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ

ಕೊಡಗು ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಕಾವೇರಿ ನದಿಯಿಂದ, ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಬೇಂಗೂರು, ನಾಪೋಕ್ಲುವಿನ ಚರಿಯಪರಂಬು, ಕುಶಾಲನಗರದ ಸಾಯಿಬಡಾವಣೆ, ನೆಲ್ಲಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆ, ಪೊನ್ನಂಪೇಟೆ ಕಾನೂರು ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.

58 ವಿದ್ಯುತ್ ಕಂಬಗಳು ನೆಲಕ್ಕುರುಳಿ, 10 ಮನೆಗಳಿಗೆ ಹಾನಿಯಾಗಿದೆ. ನಾಪೋಕ್ಲುವಿನ ಬೇತು ಗ್ರಾಮದ ಬಳಿ ರಸ್ತೆಗೆ ಮಣ್ಣು ಕುಸಿದಿದೆ.

ಭಾಗಮಂಡಲ ಹೋಬಳಿಯ ಬೇಂಗೂರಿನ ದೋಣಿಕಡು ಎಂಬಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ನಿವಾಸಿಗಳ ಸಂಚಾರಕ್ಕೆ ಅಗ್ನಿಶಾಮಕ ಪಡೆಯವರು ಫೈಬರ್ ದೋಣಿಯ ವ್ಯವಸ್ಥೆ ಕಲ್ಪಿಸಿದ್ದಾರೆ. ನಾಪೋಕ್ಲು ಸಮೀಪದ ಚೆರಿಯಪರಂಬು ಗ್ರಾಮವೂ ಜಲಾವೃತವಾಗಿದೆ. 

ಮಡಿಕೇರಿ-ಮಂಗಳೂರು‌ ಹೆದ್ದಾರಿಯಲ್ಲಿ ಮದೆನಾಡು ಸಮೀಪದ ಕತ್ರೋಜಿಯಲ್ಲಿ ನಿರಂತರವಾಗಿ ಮಣ್ಣು ಗುಡ್ಡದಿಂದ ಕೆಳಗಿಳಿಯುತ್ತಿದೆ. ಕೆಳಗೆ ಜರಿದ ಮಣ್ಣನ್ನು ತೆರವುಗೊಳಿಸಲಾಗುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿಲ್ಲ. ಮಡಿಕೇರಿಯ ಐಕೊಳ ಗ್ರಾಮದಲ್ಲಿ ಅಪಾಯದಲ್ಲಿ ಸಿಲುಕಿದ್ದ ಗರ್ಭಿಣಿ ಸೇರಿದಂತೆ 7 ಮಂದಿಯನ್ನು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿ ರಕ್ಷಿಸಿದ್ದಾರೆ.

ಚಾರಣಕ್ಕೆ ನಿರ್ಬಂಧ

ಚಿಕ್ಕಮಗಳೂರು: ಜಿಲ್ಲೆಯ ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಜಿಲ್ಲೆಗೆ ಬರಲು ಉದ್ದೇಶಿಸಿರುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಅತಿಯಾದ ಮಳೆಗೆ ಧರೆ ಕುಸಿತವಾಗುವ ಸಂಭವ ಇರುವುದರಿಂದ ಹೋಮ್‌ಸ್ಟೆ, ರೆಸಾರ್ಟ್‌, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಚಾರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

9 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

ರಾಜ್ಯದ ಹಲವೆಡೆ ಬುಧವಾರವೂ ಮಳೆಯಬ್ಬರ ಮುಂದುವರಿಯುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು 9 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ 6 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. 

ಬೀದರ್, ಕಲಬುರಗಿ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. 

ಕರಾವಳಿಯಲ್ಲಿ ಬಿರುಗಾಳಿಯ ವೇಗವು ಗಂಟೆಗೆ 40–45 ಕಿ.ಮೀ.ನಿಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಸೂಚಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಗುಡುಗು ಸಹಿತ ಭಾರಿ ಮಳೆ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT