ಶನಿವಾರ, ಜನವರಿ 16, 2021
27 °C
ಹಿಂದಿ, ಇಂಗ್ಲಿಷ್‌ಗೆ ಮಣೆ: ಅಸಮಾಧಾನ

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕನ್ನಡ ಕಡೆಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಹಾಕಲಾಗಿರುವ ಸೂಚನಾ ಫಲಕಗಳು, ಕೋವಿಡ್–19 ಮುಂಜಾಗ್ರತಾ ಕ್ರಮಗಳ ಪ್ರಚಾರ ಸಾಮಗ್ರಿಗಳು ಬ್ಯಾರಿಕೇಡ್‌ಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಮಣೆ ಹಾಕುವ ಮೂಲಕ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ. ಇದು ಇಲ್ಲಿನ ಕನ್ನಡ ಮನಸ್ಸುಗಳ ಆಕ್ಷೇಪ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.

ಗಡಿ ನಾಡಿನಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಅಲ್ಲಿನ ಅಧಿಕಾರಿಗಳ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್‌ಗಳನ್ನು ಹಾಕಲಾಗಿದೆ.

‘ವಿಮಾನನಿಲ್ದಾಣದ ಅಧಿಕಾರಿಗಳು ಇಂಗ್ಲಿಷ್ ಹಾಗೂ ಹಿಂದಿಗೆ ಮಣೆ ಹಾಕಿದ್ದಾರೆ. ಕನ್ನಡವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಅಧಿಕಾರಿಗಳು, ಕೂಡಲೇ ಕನ್ನಡ ಬಳಸದಿದ್ದರೆ ಇದರ ವಿರುದ್ಧ ನಾವು ಗಟ್ಟಿ ಧ್ವನಿ ಎತ್ತಬೇಕಾಗುತ್ತದೆ’ ಎಂಬ ಹೇಳಿಕೆಗಳುಳ್ಳ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ  ಸಂಗತಿಯನ್ನು ‘ಬೆಳಗಾವಿ ಪುಟ’ದವರು ಟ್ವೀಟ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ ಮೂಲಕ ವಿಮಾನನಿಲ್ದಾಣದ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ.

‘ಕನ್ನಡ ನೆಲದಲ್ಲಿ ಕನ್ನಡಕ್ಕೆ ಆದ್ಯತೆ ಕೊಡದಿರುವುದು ದುರಂತ. ಹಿಂದಿ ಅಥವಾ ಇಂಗ್ಲಿಷ್ ಹೇರಿಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು’ ಎಂದು ತಿಳಿಸಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡಿರುವ ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ, ‘ವಿಮಾನನಿಲ್ದಾಣದಲ್ಲಿ ಹಿಂದಿ ಬಳಕೆ ಬಗ್ಗೆ ಕೆಲವರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನಿಸಿದ್ದೇನೆ. ನಾವು ಪ್ರತಿಯೊಬ್ಬರ ಭಾವನೆಗಳನ್ನೂ ಗೌರವಿಸುತ್ತೇವೆ. ಹಳೆಯ ಬ್ಯಾನರ್‌ಗಳನ್ನು ತೆರವುಗೊಳಿಸಲಾಗವುದು. ಕನ್ನಡಕ್ಕೆ ಆದ್ಯತೆ ನೀಡಿದ ಪ್ರಚಾರ ಸಾಮಗ್ರಿಗಳು ಮತ್ತು ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಸ್ವಲ್ಪ ಸಮಯಾವಕಾಶ ಕೊಡಿ’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು