ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಜಯಂತಿ: ಸರ್ಕಾರಿ ಕಾರ್ಯಕ್ರಮ ಬಹಿಷ್ಕಾರ– ಸತೀಶ ಜಾರಕಿಹೊಳಿ

Last Updated 26 ಸೆಪ್ಟೆಂಬರ್ 2022, 9:23 IST
ಅಕ್ಷರ ಗಾತ್ರ

ಬೆಳಗಾವಿ: ‘ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸದ ರಾಜ್ಯ ಸರ್ಕಾರಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ನೈತಿಕ ಹಕ್ಕಿಲ್ಲ. ಹಾಗಾಗಿ, ಈ ಬಾರಿ ರಾಜ್ಯದಾದ್ಯಂತ ಸರ್ಕಾರದಿಂದ ನಡೆಯುವ ಜಯಂತಿ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

‘ಅಕ್ಟೋಬರ್‌ 9ರಂದು ರಾಜ್ಯ ಸರ್ಕಾರದಿಂದ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ. ಆದರೆ, ವಾಲ್ಮೀಕಿ ಸಮುದಾಯ ಇದನ್ನು ಒಪ್ಪುವುದಿಲ್ಲ. ಅವರ ಕಾರ್ಯಕ್ರಮಗಳಿಂದ ದೂರ ಉಳಿದು, ಸಮಾಜ– ಸಂಘಟನೆಗಳಿಂದ ಪ್ರತ್ಯೇಕ ಕಾರ್ಯಕ್ರಮ ಮಾಡಲಾಗುವುದು’ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘ಸದ್ಯ ನಮ್ಮ ಸಮಾಜಕ್ಕೆ ಇರುವ ಶೇ 3ರಷ್ಟು ಮೀಸಲಾತಿಯನ್ನು ಶೇ 7.5ಕ್ಕೆ ಏರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಇದು ನ್ಯಾಯಸಮ್ಮತ ಬೇಡಿಕೆ. ಇದಕ್ಕಾಗಿ ನಿರಂತರ ಹೋರಾಟ ನಡೆದಿದೆ. ಸಮಾಜದ ಪ್ರತಿಬಿಂಬವಾದ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಎರಡು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ತಾವು ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗೆ ಮೀಸಲಾತಿ ಬೇಡಿಕೆ ಈಡೇರಿಸುವುದಾಗಿ ಸಚಿವ ಬಿ.ಶ್ರೀರಾಮುಲು ಅವರು ಭರವಸೆ ನೀಡಿದ್ದರು. ಇದೂವರೆಗೂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ’ ಎಂದು ಕಿಡಿ ಕಾರಿದರು.

‘ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ನಮ್ಮ ತಿರಸ್ಕಾರವಿದೆ. ಉಳಿದಂತೆ ಯಾರು ಬೇಕಾದರೂ, ಯಾವ ಸಂಘಟನೆಯಾದರೂ ಆಚರಿಸಬಹುದು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅ.9ರಂದು ಪುರುಷೋತ್ತಮಾನಂದ ಪುರಿ ಶ್ರೀಗಳು ಧರಣಿ ನಡೆಸಲಿದ್ದು, ಅಲ್ಲಿಯೇ ಮಹರ್ಷಿ ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಗುವುದು’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT