ಸೋಮವಾರ, ಮಾರ್ಚ್ 8, 2021
31 °C
ವೆಂಕಯ್ಯನಾಯ್ಡು ಹೇಳಿಕೆ: ಸುವಿರಾನಂದ ಸ್ವಾಮೀಜಿ ಪ್ರಕಟ

‘ವಿವೇಕಾನಂದರ ಸ್ಮರಣೆಯಲ್ಲಿ ವಿಶೇಷ ಅಧಿವೇಶನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಅಂಗವಾಗಿ ವಿಶೇಷ ಅಧಿವೇಶನ ನಡೆಸುವಂತೆ ಕೋರಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಪತ್ರ ಬರೆದಿರುವುದಾಗಿ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ವಾರದ ಹಿಂದೆ ತಮಗೆ ಪತ್ರ ಬರೆದು ತಿಳಿಸಿದ್ದಾರೆ’ ಎಂದು ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಠ ಹಾಗೂ ಮಿಷನ್‌ ಪ್ರಧಾನ ಕಾರ್ಯದರ್ಶಿ ಸುವಿರಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ರಿಸಾಲ್ದಾರ್‌ ಗಲ್ಲಿಯಲ್ಲಿ 1892ರಲ್ಲಿ ಸ್ವಾಮಿ ವಿವೇಕಾನಂದರು ತಂಗಿದ್ದ ಮನೆಯನ್ನು ಶ್ರೀರಾಮಕೃಷ್ಣ ಆಶ್ರಮದಿಂದ ಜೀರ್ಣೋದ್ಧಾರ ಮಾಡಿ ರೂಪಿಸಿರುವ ‘ಸ್ವಾಮಿ ವಿವೇಕಾನಂದ ಸ್ಮಾರಕ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿವೇಕಾನಂದರು ಷಿಕಾಗೋದಲ್ಲಿ ಮಾಡಿದ ಭಾಷಣದ 125ನೇ ವರ್ಷಾಚರಣೆ ಸವಿನೆನಪಿನಲ್ಲಿ ಬ್ರಿಟನ್‌ನಲ್ಲೂ ವಿಶೇಷ ಅಧಿವೇಶನ ಮಾಡಿ ಅಲ್ಲಿನವರು ಗೌರವ ಸಲ್ಲಿಸಿದ್ದರು. ಹೀಗಾಗಿ, ಅವರು ವಿಶ್ವಮಾನ್ಯರಾಗಿಯೇ ಮುಂದುವರಿದಿದ್ದಾರೆ. ಅವರ ವಿಚಾರಗಳಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮವನ್ನು ಅಪೀಮು ಎಂದು ಹೇಳುವ ಕಮ್ಯುನಿಸ್ಟರು ಕೂಡ ಅವರ ಭಾವಚಿತ್ರಕ್ಕೆ ನಮಿಸಲು ಆರಂಭಿಸಿದ್ದಾರೆ’ ಎಂದು ತಿಳಿಸಿದರು.

ಜಾತ್ಯತೀತ ನಾಯಕ:
‘ಅವರು ಜಾತ್ಯತೀತ ನಾಯಕರಾಗಿದ್ದರು. ಯಾವುದೇ ಧರ್ಮದ ಬಗ್ಗೆ ಪೂರ್ವಗ್ರಹಪೀಡಿತರಾಗಿರಲಿಲ್ಲ ಹಾಗೂ ಎಲ್ಲವನ್ನೂ ಸಮಾನವಾಗಿ ಗೌರವಿಸುತ್ತಿದ್ದರು. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಎನ್ನುವ ತಾರತಮ್ಯ ಮಾಡಿದವರಲ್ಲ’ ಎಂದು ಹೇಳಿದರು.

‘ಷಿಕಾಗೋ ಸಮ್ಮೇಳನದಲ್ಲಿ ಭಾಷಣಕ್ಕೆ ಮುಂಚೆ ಅವರು ಬಹಳ ಮಂದಿಗೆ ಗೊತ್ತಿರಲಿಲ್ಲ. ಅದಕ್ಕಿಂತ ಪೂರ್ವದಲ್ಲಿ ಮೂರು ದಿನಗಳಿಂದ ಹಸಿವಿನಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ಪಂಡಿತರು ಅವರನ್ನು ಕೇವಲ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ, ಮುಸ್ಲಿಂ ವ್ಯಕ್ತಿಯೊಬ್ಬರು ಆಹಾರ ನೀಡಿ ಜೀವ ಉಳಿಸಿದರು. ವಿವೇಕಾನಂದರು ಆ ಆಹಾರವನ್ನು ಪ್ರೀತಿಯಿಂದ ತಿಂದಿದ್ದರು’ ಎಂದು ತಿಳಿಸಿದರು.

ಮಹಿಳಾ ಸ್ಥಾನಮಾನ:
‘ರೆಕ್ಕೆ ಸರಿ ಇಲ್ಲದಿದ್ದರೆ ಪಕ್ಷಿ ಹಾರಲಾರದು. ಹಾಗೆಯೇ ಸಮಾಜ ಉತ್ತಮ ಮಾರ್ಗದಲ್ಲಿ ಸಾಗಲು ಮಹಿಳೆಯರಿಗೆ ಸಮಾನವಾದ ಸ್ಥಾನಮಾನ ದೊರೆಯಬೇಕು ಎಂದು ಪ್ರತಿಪಾದಿಸಿದ್ದರು. ಮಹಿಳೆಯನ್ನು ಕಡೆಗಣಿಸಿ ಪುರುಷ ಪ್ರಗತಿ ಸಾಧಿಸಲಾರ. ಅವರೂ ಸ್ವಾತಂತ್ರ್ಯ ಅನುಭವಿಸಬೇಕು ಎಂದು ಸಾರಿ ಹೇಳಿದರು. ಐತಿಹಾಸಿಕ ನಿರ್ಲಕ್ಷ್ಯ ಸಲ್ಲದು ಎಂದಿದ್ದರು. ಇದೆಲ್ಲದರ ಪರಿಣಾಮ, ಶ್ರೀರಾಮಕೃಷ್ಣ ಹಾಗೂ‌ ವಿವೇಕಾನಂದರು ಬಯಸಿದ ಸಮಾಜ ಈಗ ಉದಯಿಸುತ್ತಿದೆ’ ಎಂದರು.

‌ವಾಸ್ತುಶಿಲ್ಪಿ ರವಿ ಗುಂಡೂರಾವ್ ಮಾತನಾಡಿ, ‘ಅಂದಿನ ಬಾಟೆವಾಡಿ ಈಗ ವಿವೇಕಾನಂದ ಸ್ಮಾರಕವಾಗಿದೆ. ಇದನ್ನು ನವೀಕರಣ ಮಾಡಿದ್ದೇವೆ ಎನ್ನುವುದಕ್ಕಿಂತ ಪ್ರಾಣಪ್ರತಿಷ್ಠಾಪನೆ, ಜೀರ್ಣೋದ್ಧಾರ ಮಾಡಿದ್ದೀವಿ ಎಂದೇ ಹೇಳಬಹುದು. ಗೌರವಯುತವಾಗಿ ದುರಸ್ತಿ ಮಾಡಿ ಸಂರಕ್ಷಿಸಲಾಗಿದೆ’ ಎಂದು ತಿಳಿಸಿದರು.

ವಸ್ತುಪ್ರದರ್ಶನವನ್ನು ಶಾಸಕ ಅಭಯ ಪಾಟೀಲ ಹಾಗೂ ಆಡಿಯೊ ವಿಷ್ಯುಯಲ್ ಕೊಠಡಿಯನ್ನು ಶಾಸಕ ಅನಿಲ ಬೆನಕೆ ಉದ್ಘಾಟಿಸಿದರು. ಬೆಳಗಾವಿ ಶ್ರೀರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಆತ್ಮಪ್ರಾಣಾನಂದ ಸ್ವಾಮೀಜಿ, ಊಟಿ ರಾಮಕೃಷ್ಣ ಮಠದ ಅಧ್ಯಕ್ಷ ರಾಘವೇಶಾನಂದ ಸ್ವಾಮೀಜಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು