ಭಾನುವಾರ, ಆಗಸ್ಟ್ 14, 2022
26 °C
ಪ್ರಮಾಣ ಹೆಚ್ಚಿಸಲು ಎಲ್.ಕೆ. ಅತೀಕ್ ಸೂಚನೆ

ಬೆಳಗಾವಿ: ಮತದಾರರ ಪಟ್ಟಿ ನೋಂದಣಿ ಶೇ 65 ಮಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜಿಲ್ಲೆಯಲ್ಲಿ ಯುವ ಮತದಾರರ ನೋಂದಣಿ ಹೆಚ್ಚಿಸುವ ಜೊತೆಗೆ ಲೋಪರಹಿತ ಪಟ್ಟಿ ಸಿದ್ಧಪಡಿಸಲು ಪರಿಷ್ಕರಣೆ ಕಾರ್ಯವನ್ನು ಮಾರ್ಗಸೂಚಿ ಪ್ರಕಾರ ಸಮರ್ಪಕವಾಗಿ ನಡೆಸಬೇಕು’ ಎಂದು ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕ ಎಲ್.ಕೆ. ಅತೀಕ್ ಸೂಚನೆ ನೀಡಿದರು.

ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸರಾಸರಿ ಶೇ.71ರಷ್ಟು ಜನರ ಹೆಸರು ಮತದಾರರ ಪಟ್ಟಿಯಲ್ಲಿದೆ. ಆದರೆ, ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸದ್ಯಕ್ಕೆ ಶೇ.65ರಷ್ಟು ಜನರ ಹೆಸರಷ್ಟೇ ನೋಂದಣಿಯಾಗಿದೆ. ಇದನ್ನು ಇನ್ನಷ್ಟು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಂತೆಯೇ ಲಿಂಗಾನುಪಾತದ ಪ್ರಕಾರ ‌ಮತದಾರರ ಸಂಖ್ಯೆ ಇರುವಂತೆ ನೋಡಿಕೊಳ್ಳಬೇಕು. ಮಹಿಳೆಯರು, ಯುವಜನರು ಮತ್ತು ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಆಕ್ಷೇಪಣೆಗಳ ವಿಲೇವಾರಿ:

‘ಪಟ್ಟಿಗೆ ಸಂಬಂಧಿಸಿದಂತೆ ಸ್ವೀಕರಿಸಲಾಗುವ ಆಕ್ಷೇಪಣೆಗಳನ್ನು ನಿಯಮಾವಳಿ ಪ್ರಕಾರ ವಿಲೇವಾರಿ ಮಾಡಬೇಕು. ಹೆಸರು ತೆಗೆದುಹಾಕುವ ಸಂದರ್ಭದಲ್ಲಿ ಮಾರ್ಗಸೂಚಿ ಪ್ರಕಾರ ಸೂಕ್ತ ಎಚ್ಚರಿಕೆ ವಹಿಸಬೇಕು. 01.01.2021ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದೆ. ಮತ ಪಟ್ಟಿಯ ಲೋಪದೋಷಗಳನ್ನು ಸರಿಪಡಿಸಲು ಅವಕಾಶಗಳನ್ನು ಒದಗಿಸಲಾಗಿದೆ. ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದುಹಾಕಲು ಅವಕಾಶವಿದೆ’ ಎಂದು ತಿಳಿಸಿದರು.

‘ಪಟ್ಟಿಗಳು ಲೋಪರಹಿತವಾಗಿರಬೇಕು. ಮತದಾರರ ಪಟ್ಟಿಯಿಂದ ಹೆಸರು ಸೇರ್ಪಡೆ ಅಥವಾ ಹೆಸರು ತೆಗೆದುಹಾಕುವ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಬೇಕು. ಅಂಗವಿಕಲರ ಹೆಸರುಗಳು ಯಾವುದೇ ಕಾರಣಕ್ಕೂ ಬಿಟ್ಟು ಹೋಗಬಾರದು’ ಎಂದರು.

‘ಜಿಲ್ಲೆಯಲ್ಲಿರುವ 4,434 ಮತಗಟ್ಟೆಗಳಿವೆ. ಬೂತ್ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಉಪಸ್ಥಿತರಿದ್ದು, ಪರಿಷ್ಕರಣೆ ಕೆಲಸ ಸರಿಯಾಗಿ ನಿರ್ವಹಿಸಬೇಕು. ಉನ್ನತ ಮಟ್ಟದ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ಸೂಚಿಸಿದರು.

ಪರಿಶೀಲನೆ:

‘ಪಟ್ಟಿಯ ನಿರಂತರ ಪರಿಷ್ಕರಣೆ ಮುಂದುವರಿಯಲಿದೆ. ಕೆಲವು ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆದಾಗ್ಯೂ ಎಲ್ಲಾದರೂ ಸಮಸ್ಯೆ ಕಂಡುಬಂದರೆ ಸರಿಪಡಿಸಲಾಗುವುದು. ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ., ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್,  ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಅತೀಕ್ ಹಾಗೂ ಅಧಿಕಾರಿಗಳು ರಾಮನಗರದ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆಯಲ್ಲಿ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಪರಿಶೀಲಿಸಿದರು.

‘ಯುವ ಮತದಾರರ ನೋಂದಣಿಗೆ ಆದ್ಯತೆ’

‘18 ವರ್ಷಗಳನ್ನು ಪೂರ್ಣಗೊಳಿಸಿದ ಯುವಜನರ ಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಆದ್ಯತೆ ನೀಡಬೇಕು. ಇದಕ್ಕೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಯುವ ಸಮುದಾಯ ಹೆಸರು ನೋಂದಣಿಗೆ ಮುಂದಾಗಬೇಕು. ಮತಗಟ್ಟೆ ಏಜೆಂಟ್ ನೇಮಕದ ಪಟ್ಟಿಯನ್ನು ರಾಜಕೀಯ ಪಕ್ಷದವರು ಸಕಾಲದಲ್ಲಿ ಸಲ್ಲಿಸಬೇಕು’ ಎಂದು ಅತೀಕ್ ತಿಳಿಸಿದರು.

‘ಬಿ.ಎಲ್.ಒ.ಗಳು ಕಡ್ಡಾಯವಾಗಿ ಮನೆ ಮನೆಗೆ ಭೇಟಿ ನೀಡಬೇಕು. ಇದರ ಬಗ್ಗೆ ಸಂಬಂಧಿಸಿದವರು ಮೇಲ್ವಿಚಾರಣೆ ನಡೆಸಬೇಕು. ಸ್ವೀಕೃತವಾದ ದೂರುಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ನಿಯಂತ್ರಣ ಕೊಠಡಿಯು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು