ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಧಿವೇಶನ ಬಂದ್ರ ತಲಿಬ್ಯಾನಿ ಬರ್ತೈತ್ರಿ’

Published 23 ನವೆಂಬರ್ 2023, 3:32 IST
Last Updated 23 ನವೆಂಬರ್ 2023, 3:32 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮೂರಾಗ ಕಟ್ಟಿರೋ ಸೌಧದಾಗ ಅಧಿವೇಶನ ನಡಿತೈತಿ ಅನ್ನೋದೇನೋ ಖುಷಿ ವಿಚಾರ. ಆದರೆ, ಮೋರ್ಚಾಕ (ಪ್ರತಿಭಟನೆಗೆ) ಬಂದವರು ಹೊಲದ ತುಂಬೆಲ್ಲ ಓಡಾಡಿ ಬೆಳಿಹಾನಿ ಮಾಡ್ತಾರು. ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡ್ತಾರು. ಪ್ಲಾಸ್ಟಿಕ್‌ ಬಾಟಲಿ ಒಗಿತಾರು. ಒಟ್ಟಿನಲ್ಲಿ ಅಧಿವೇಶನ ಬಂದ್ರ ನಮಗ ತಲಿಬ್ಯಾನಿ ಬರ್ತೈತ್ರಿ...’

ತಾಲ್ಲೂಕಿನ ಹಲಗಾದ ರೈತ ಬಾಬು ಗುಂಡಪ್ಪ ದೇಸಾಯಿ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡಿದ್ದು ಹೀಗೆ.

ಹಲಗಾದಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಡಿ.4ರಿಂದ 15ರವರೆಗೆ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದೆ. ಪ್ರತಿಬಾರಿಯ ಅಧಿವೇಶನ ‘ಪ್ರತಿಭಟನೆಗಳ ಸುಗ್ಗಿ’ಗೆ ಸಾಕ್ಷಿಯಾಗುತ್ತಿದೆ. ಈ ಬಾರಿ ಕೂಡ ಹಲಗಾದ ಸುವರ್ಣ ಗಾರ್ಡನ್‌ ಬಳಿಯ ಜಮೀನು ಮತ್ತು ಕೊಂಡಸಕೊಪ್ಪ ಗುಡ್ಡದ ಮೇಲೆ ಪ್ರತಿಭಟನಾ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರತಿಭಟನಾಕಾರರಿಗೆ ನೀಡಲು ಉದ್ದೇಶಿಸಿರುವ ಜಮೀನಿನಲ್ಲಿ ಕೆಲವರು ಹೂ ಮತ್ತು ಜೋಳ ಬೆಳೆದಿದ್ದಾರೆ. ಇನ್ನೂ ಕೆಲವರು ಭತ್ತ ಕಟಾವುಗೊಳಿಸಿ, ಹಿಂಗಾರು ಬಿತ್ತನೆಗೆ ತಯಾರಿ ನಡೆಸಿದ್ದಾರೆ. ಗುಂಟೆ ಜಮೀನಿಗೆ ₹3,000 ಬಾಡಿಗೆ ನೀಡಬೇಕೆಂಬ ರೈತರ ಬೇಡಿಕೆಗೆ ಅಧಿಕಾರಿಗಳು ಒಪ್ಪಿದ್ದಾರೆ.

‘ಪ್ರತಿಭಟನಾ ವೇದಿಕೆಗೆ ಭೂಮಿ ಕೊಟ್ಟವರಿಗೇನೋ ಬಾಡಿಗೆ ರೂಪದಲ್ಲಿ ಪರಿಹಾರ ಸಿಗುತ್ತದೆ. ಆದರೆ, ಇದೇ ವೇದಿಕೆ ಪಕ್ಕದಲ್ಲಿರುವ ಜಮೀನಿನವರಿಗೆ ಯಾವ ಪರಿಹಾರವೂ ಸಿಗುವುದಿಲ್ಲ. ಬರದ ಸ್ಥಿತಿಯಿಂದಾಗಿ ಈ ಸಲ ಮೊದಲೇ ಬೆಳೆ ಬಂದಿಲ್ಲ. ಹೀಗಿರುವಾಗ, ಪ್ರತಿಭಟನೆಗೆ ಬಂದವರು ನಮ್ಮ ಹೊಲದಲ್ಲಿ ಗಲೀಜು ಮಾಡಿದರೆ ಗೋಳು ಕೇಳುವವರ್‍ಯಾರು?’ ಎಂಬುದು ಉಳಿದ ರೈತರ ಆತಂಕ.

ಎರಡು ಎಕರೆಯಲ್ಲಿ ಬೆಳೆದ ಭತ್ತ ಕಟಾವುಗೊಳಿಸಿದ್ದೇನೆ. ಮತ್ತೆ ಚನ್ನಂಗಿ ಬಿತ್ತನೆ ಮಾಡಲಿದ್ದೇನೆ. ಅಧಿವೇಶನದಲ್ಲಿ ಬೆಳೆಹಾನಿಯಾದರೆ ನಮಗೂ ಪರಿಹಾರ ಕೊಡಬೇಕು.
ಬಾಬು ದೇಸಾಯಿ, ರೈತ ಹಲಗಾ

ಸ್ವಚ್ಛಗೊಳಿಸಲು ವಾರ ಬೇಕಾಯಿತು

‘ಕಳೆದ ವರ್ಷ ಪ್ರತಿಭಟನಾಕಾರರಿಗಾಗಿ ಕೊಂಡಸಕೊಪ್ಪದ ಬಳಿ ಬೇರೆ ಜಮೀನು ಗುರುತಿಸಲಾಗಿತ್ತು. 10 ದಿನ ಸರಣಿ ರೂಪದಲ್ಲಿ ಪ್ರತಿಭಟನೆಯಾದವು. ಅಲ್ಲಿಗೆ ಬಂದಿದ್ದ ವಿವಿಧ ಸಂಘಟನೆಯವರು, ಪಕ್ಕದಲ್ಲೇ ಇದ್ದ ನಮ್ಮ ಹೊಲಕ್ಕೆ ನುಗ್ಗಿದರು. ಶೌಚಗೃಹವಾಗಿ ಇದನ್ನು ಬಳಸಿಕೊಂಡರು. ಎಲ್ಲೆಂದರಲ್ಲಿ ಮದ್ಯದ ಬಾಟಲಿ ಎಸೆದು ಹೋದರು. ಆದರೆ, ಅಧಿವೇಶನ ಮುಗಿದ ಮಾರನೇ ದಿನ ಒಬ್ಬ ಸಿಬ್ಬಂದಿಯೂ ಇತ್ತ ಸುಳಿಯಲಿಲ್ಲ. ನಮ್ಮ ಹೊಲ ಸ್ವಚ್ಛಗೊಳಿಸುವುದಕ್ಕೆ ಒಂದು ವಾರ ಬೇಕಾಯಿತು’ ಎಂದು ನಿಂಗಪ್ಪ ಮತ್ತು ಮಂಗಲಾ ಕಡೇಮನಿ ದಂಪತಿ ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಪ್ರತಿಭಟನೆಗೆ ಭೂಮಿ ಕೊಟ್ಟಾಗ ಬೆಳೆಹಾನಿ ಪರಿಹಾರಕ್ಕೆ 8 ತಿಂಗಳು ಕಾಯ್ದೆವು. ಕಚೇರಿಗಳಿಗೆ ಅಲೆದಾಡಿ ಸಾಕಾಯಿತು. ಈ ಬಾರಿ ತ್ವರಿತ ಪರಿಹಾರ ಕೊಡಬೇಕು.
ಮಹಾವೀರ ಪಾಟೀಲ, ರೈತ ಹಲಗಾ

‘ಪ್ರತಿಬಾರಿ ಅಧಿವೇಶನದಲ್ಲಿ ಆಗುವ ಬೆಳೆಹಾನಿಗೆ ಪರಿಹಾರ ಕೊಡಬೇಕೆಂದು ಒಂದೆರಡು ದಿನಗಳಲ್ಲಿ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲು ಯೋಜಿಸಿದ್ದೇವೆ’ ಎಂದರು ರೈತ ಮಲ್ಲಪ್ಪ ಚೌಗುಲೆ.

ಪರಿಶೀಲಿಸಿ ಕ್ರಮ

ಡಿ.ಸಿ ‘ಅಧಿವೇಶನದಲ್ಲಿ ಪ್ರತಿಭಟನೆಗಳ ಪ್ರಮಾಣವನ್ನೇ ತಗ್ಗಿಸಲು ಪ್ರಯತ್ನ ನಡೆಸಿದ್ದೇವೆ. ಆದರೆ ಪ್ರತಿಭಟನೆಗೆ ಬಂದವರಿಗೆ ಅನನುಕೂಲ ಆಗದಿರಲೆಂದು ಸುವರ್ಣ ಗಾರ್ಡನ್‌ ಮತ್ತು ಕೊಂಡಸಕೊಪ್ಪ ಗುಡ್ಡದಲ್ಲಿ ಎರಡು ಸ್ಥಳ ಗುರುತಿಸಿದ್ದೇವೆ. ಬೆಳೆಯಿರುವ ಪ್ರತಿ ಗುಂಟೆ ಭೂಮಿಗೆ ₹3000 ಕೊಡುವುದಾಗಿ ತಿಳಿಸಿದ್ದೇವೆ. ಒಂದು ವೇಳೆ ಜನರ ಓಡಾಟದಿಂದ ಪ್ರತಿಭಟನಾ ವೇದಿಕೆ ಪಕ್ಕದ ಜಮೀನುಗಳಲ್ಲೂ ಬೆಳೆಹಾನಿಯಾದರೆ ಪರಿಹಾರ ಕೊಡಲು ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT