ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನ: ವಿವಿಧ ಸಂಘಟನೆಗಳಿಂದ ಮುಂದುವರಿದ ಪ್ರತಿಭಟನೆ

Published 12 ಡಿಸೆಂಬರ್ 2023, 13:42 IST
Last Updated 12 ಡಿಸೆಂಬರ್ 2023, 13:42 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಮಂಡಲ ಚಳಿಗಾಲ ಅಧಿವೇಶನದ ಏಳನೇ ದಿನವಾದ ಮಂಗಳವಾರ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ಗಾರ್ಡನ್‌ ಬಳಿ ಇರುವ ವೇದಿಕೆ ಹಾಗೂ ಕೊಂಡಸಕೊಪ್ಪ ಗುಡ್ಡದಲ್ಲಿ ವಿವಿಧ ಸಂಘಟನೆಯವರು ಪ್ರತಿಭಟನೆ ನಡೆಸಿದರು. ‘ನಮ್ಮ ಬೇಡಿಕೆಗೆ ಸರ್ಕಾರ ಕಿವಿಗೊಡುತ್ತಿಲ್ಲ’ ಎಂದು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಸೇವೆ ಕಾಯಂಗೊಳಿಸಿ: ರಾಜ್ಯದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ದುಡಿಯುತ್ತಿರುವವರ ಸೇವೆ ಕಾಯಂಗೊಳಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಎಂಜಿನಿಯರಿಂಗ್‌ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದವರು ಪ್ರತಿಭಟಿಸಿದರು.

‘ಕಡಿಮೆ ಗೌರವಧನದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಹಿಂದೆ ಅಧಿಕಾರದಲ್ಲಿದ್ದ ಮತ್ತು ಈಗಿನ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ, ಸ್ಪಂದನೆ ಸಿಕ್ಕಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಬೇಡಿಕೆ ಈಡೇರಿಸಬೇಕು. ವರ್ಷದಲ್ಲಿ 8 ತಿಂಗಳ ಬದಲಿಗೆ, 12 ತಿಂಗಳೂ ಸೇವೆ ಸಲ್ಲಿಸಲು ನಮಗೆ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಮನುಕುಮಾರ, ಸಹಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ, ವೀರೇಶ ಕಡಾಡಿ ಇತರರಿದ್ದರು.

ಸೇವಾಭದ್ರತೆ ಒದಗಿಸಿ: ರಾಜ್ಯದ 89 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್‌ ಅರೆಕಾಲಿಕ ಉಪನ್ಯಾಸಕರ ಸಂಘದವರು ಧರಣಿ ನಡೆಸಿದರು. ‘ಎಐಸಿಟಿಇ ನಿಯಮಾನುಸಾರ ನಮಗೆ ವೇತನ ನಿಗದಿಗೊಳಿಸಬೇಕು. ಆಯಾ ತಿಂಗಳ ಮೊದಲ ವಾರದಲ್ಲೇ ವೇತನ ಜಮೆಗೊಳಿಸಬೇಕು. ಮಹಿಳಾ ಅರೆಕಾಲಿಕ ಉಪನ್ಯಾಸಕರಿಗೆ ವೇತನ ಸಹಿತವಾಗಿ ಕನಿಷ್ಠ 3–4 ತಿಂಗಳು ಹೆರಿಗೆ ರಜೆ ನೀಡಬೇಕು’ ಎಂದು ಆಗ್ರಹಿಸಿದರು.

ಸೈನಿಕರ ಭವನ ನಿರ್ಮಿಸಿ: ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸೈನಿಕರ ಭವನ ಹಾಗೂ ಜಿಲ್ಲಾ ಹಂತದಲ್ಲಿ ಯುದ್ಧದ ಸ್ಮಾರಕ ನಿರ್ಮಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದವರು ಧರಣಿ ನಡೆಸಿದರು.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಮಾಜಿ ಸೈನಿಕರಿಗೆ ಶೇ 10ರಷ್ಟು ಮೀಸಲಾತಿ ನೀಡಬೇಕೆಂಬ ಮಾನದಂಡವಿದೆ. ಆದರೆ, ವಿವಿಧ ಇಲಾಖೆಯವರು ಶೇ 2ರಷ್ಟು ಮೀಸಲಾತಿ ಕೊಡುತ್ತಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ. ಇತ್ತೀಚೆಗೆ ಅರಣ್ಯ ರಕ್ಷಕರ ಹುದ್ದೆಗೆ ನಡೆದ ನೇಮಕಾತಿಯಲ್ಲೂ ನಮಗೆ ಕಡಿಮೆ ಹುದ್ದೆ ಮೀಸಲಿಡಲಾಗಿದೆ. ಹಾಗಾಗಿ ಈ ನೇಮಕಾತಿ ತಡೆಹಿಡಿಯಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್‌ಗಳಲ್ಲಿ ಮಾಜಿ ಸೈನಿಕರ ವಾಹನಗಳಿಗೆ ಉಚಿತ ಪ್ರವೇಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅನುದಾನಕ್ಕೆ ಒಳಪಡಿಸಿ: 1995ರಿಂದ 2005ರವರೆಗೆ ಆರಂಭವಾದ ಕನ್ನಡ ಮಾಧ್ಯಮ ಅನುದಾನರಹಿತ ಶಾಲಾ–ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅನುದಾನರಹಿತ ಶಾಲಾ–ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದವರು ಪ್ರತಿಭಟಿಸಿದರು.

‘ಪ್ರತಿ ಮಗುವಿಗೆ ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿ. ಆದರೆ, ಸರ್ಕಾರದಿಂದಲೇ ಎಲ್ಲ ಕಡೆ ಶಾಲಾ–ಕಾಲೇಜು ತೆರೆದು ಶಿಕ್ಷಣ ನೀಡಲು ಸಾಧ್ಯವಾಗದು. ಹಾಗಾಗಿ ನಾವು ಖಾಸಗಿ ಶಾಲೆ–ಕಾಲೇಜು ತೆರೆದು ಮಕ್ಕಳಿಗೆ ಶಿಕ್ಷಣ ನೀಡಿ, ಸರ್ಕಾರದ ಜವಾಬ್ದಾರಿ ತಗ್ಗಿಸಿದ್ದೇವೆ. ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ, ನಮಗೆ ಅನುದಾನ ಕೊಡುವುದು ಸರ್ಕಾರದ ಕರ್ತವ್ಯ. ಆದರೆ, ಈ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ನಮಗೆ ಅನುದಾನ ಕೊಡಬೇಕು. ಸರ್ಕಾರಿ ಶಾಲೆ ಮಕ್ಕಳಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಖಾಸಗಿ ಶಾಲೆ ಮಕ್ಕಳಿಗೂ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು. ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಶಿವಪ್ಪ, ಜಾಲಮಂಗಲ ನಾಗರಾಜು ಮತ್ತಿತರರಿದ್ದರು.

ನಿಗಮ ಕಾರ್ಯಾರಂಭ ಮಾಡಲಿ: ‘ಕರ್ನಾಟಕ ಹಡಪದ ಅಭಿವೃದ್ಧಿ ನಿಗಮವನ್ನು ಘೋಷಿಸಿ, ರಾಜ್ಯ ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿತ್ತು. ಅದು ತ್ವರಿತವಾಗಿ ಕಾರ್ಯಾರಂಭ ಮಾಡಬೇಕು’ ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜಸೇವಾ ಸಂಘದವರು ಪ್ರತಿಭಟಿಸಿದರು.

ಈ ನಿಗಮಕ್ಕೆ ₹50 ಕೋಟಿ ಅನುದಾನ ನೀಡುವ ಜತೆಗೆ, ಅದಕ್ಕೆ ನಮ್ಮ ಸಮುದಾಯದವರನ್ನೇ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸಬೇಕು. ಉತ್ತರ ಕರ್ನಾಟಕದ ಯಾವುದಾದರೂ ವಿಶ್ವವಿದ್ಯಾಲಯದಿಂದ ಹಡಪದ ಸಮುದಾಯದ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ನ್ಯಾಯ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮಂಡಿಸಿದರು. ಅನ್ನದಾನ ಭಾರತೀ ಅಪ್ಪಣ್ಣ ಸ್ವಾಮೀಜಿ, ಸಿದ್ದಪ್ಪ ಹಡಪದ, ಸಂತೋಷ ಹಡಪದ, ಬಸವರಾಜ ಹಡಪದ ಮತ್ತಿತರರಿದ್ದರು.

ಪಾರಂಪರಿಕ ವೈದ್ಯ ಅಭಿವೃದ್ಧಿ ಮಂಡಳಿ ರಚಿಸಿ: ಪಾರಂಪರಿಕ ವೈದ್ಯ ಅಭಿವೃದ್ಧಿ ಮಂಡಳಿ ರಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾರಂಪರಿಕ ವೈದ್ಯ ಪರಿಷತ್–ಕರ್ನಾಟಕ ಸಂಘಟನೆಯವರು ಪ್ರತಿಭಟನೆ ನಡೆಸಿದರು.

ಪಾರಂಪರಿಕ ವೈದ್ಯರ ರಾಜ್ಯ ಸಮ್ಮೇಳನಗಳಿಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಬೇಕು. ನಮ್ಮ ಸಂಘಟನೆಗೆ ರಾಜ್ಯಮಟ್ಟದಲ್ಲಿ ಉಚಿತವಾಗಿ ನಿವೇಶನ ನೀಡಬೇಕು. ಪಾರಂಪರಿಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ₹5 ಸಾವಿರ ಮಾಶಾಸನ ನೀಡಬೇಕು ಎಂದು ಒತ್ತಾಯಿಸಿದರು. ಅನುಗನಾಳು ಕೃಷ್ಣಮೂರ್ತಿ, ಜಿ.ಮಹದೇವಯ್ಯ ನೇತೃತ್ವ ವಹಿಸಿದ್ದರು.

ಬೆಳಗಾವಿ ಜಿಲ್ಲೆ ವಿಭಜಿಸಿ: ಬೆಳಗಾವಿ ಜಿಲ್ಲೆ ವಿಭಜಿಸಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಚಿಕ್ಕೋಡಿ ಘಟಕದವರು ಧರಣಿ ನಡೆಸಿದರು.

‘ಬೆಳಗಾವಿ ಜಿಲ್ಲೆ 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಯಾವುದೇ ನೀರಾವರಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಈ ಭಾಗ ಅಭಿವೃದ್ಧಿಯಿಂದಲೂ ವಂಚಿತವಾಗಿದೆ. ಹಾಗಾಗಿ ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಕಾಗವಾಡ, ಅಥಣಿ ತಾಲ್ಲೂಕು ಒಳಗೊಂಡು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚಿಸಬೇಕು’ ಎಂದು ಒತ್ತಾಯಿಸಿದರು. ಮುಖಂಡ ಮಂಜುನಾಥ ಪರಗೌಡ ನೇತೃತ್ವ ವಹಿಸಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾವೇರಿ ಹಾಗೂ ಬೆಳಗಾವಿಯ ಅಖಿಲ ಕರ್ನಾಟಕ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಸಂಘದವರು ಪ್ರತಿಭಟಿಸಿದರು. ಪಂಜಾಬ್‌ ಮಾದರಿಯಲ್ಲಿ ಕರ್ನಾಟಕದಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಸೌಕರ್ಯ ಕಲ್ಪಿಸಬೇಕು. ಸ್ವಾತಂತ್ರ್ಯ ಹೋರಾಟಗಾರರು ಮೃತಪಟ್ಟಾಗ, ಅವರ ಅಂತ್ಯಸಂಸ್ಕಾರಕ್ಕೆ ರಾಜ್ಯ ಸರ್ಕಾರ ನೀಡುವ ಮೊತ್ತವನ್ನು ₹4 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ, ಭೀಮಪ್ಪ ಗಡಾದ, ಮುರುಗೆಪ್ಪ ಶೆಟ್ಟರ್‌, ಬಸವರಾಜ ಹಟ್ಟಿಗೌಡರ, ಶಿವಯೋಗಯ್ಯ ಲೋಕನಗೌಡ್ರ ಇತರರಿದ್ದರು.

ಗ್ರಾಮ ಸಹಾಯಕರಿಂದ ಪಾದಯಾತ್ರೆ

ಹಿರೇಬಾಗೇವಾಡಿ: ‘ಹಲವು ದಶಕದಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರನ್ನಾಗಿ ಪರಿಗಣಿಸಿ, ಸೇವಾಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿ, ಹಿರೇಬಾಗೇವಾಡಿಯಿಂದ ಕೊಂಡಸಕೊಪ್ಪ ಗುಡ್ಡದವರೆಗೆ ಗ್ರಾಮ ಸಹಾಯಕರು ಮಂಗಳವಾರ ಪಾದಯಾತ್ರೆ ನಡೆಸಿದರು. ಮಾರ್ಗಮಧ್ಯೆ ಸುವರ್ಣ ವಿಧಾನಸೌಧ ಬಳಿ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.

ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದ ಗ್ರಾಮ ಸಹಾಯಕರು, ‘ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ’ ಎಂದು ಎಚ್ಚರಿಕೆ ಕೊಟ್ಟರು.

ಅರಳಿಕಟ್ಟಿಯ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ, ಮಹಾದೇವಪ್ಪ ಇಂಗಳಗಿ, ಎಚ್.ಎನ್.ದೇವರಾಜ, ಮಡಿವಾಳಪ್ಪ ವಣ್ಣೂರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT