ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವತ್ತಿನ ಪಾಠ ಅವತ್ತೇ ಓದ್ಕೊಳ್ತಿದ್ದೆ: ಸಾಯಿಶ್‌

ದ್ವಿತೀಯ ಪಿಯು ವಿಜ್ಞಾನ ವಿಷಯದಲ್ಲಿ 4ನೇ ಟಾಪರ್‌ ಸಾಯಿಶ್‌
Last Updated 15 ಏಪ್ರಿಲ್ 2019, 12:54 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ತಿಲಕವಾಡಿಯ ಗೋವಿಂದರಾಮ್ ಸೆಕ್ಸಾರಿಯಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಸಾಯಿಶ್ ಶ್ರೀಕಾಂತ್ ಮೆಂಡ್ಕೆ ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ 4ನೇ ಟಾಪರ್‌ ಎನಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಭಾಗ್ಯನಗರ 6ನೇ ಕ್ರಾಸ್ ನಿವಾಸಿ ಸರ್ವೇಯರ್‌ (ಲಾಸ್ ಅಸೆಸರ್) ಆಗಿರುವ ಶ್ರೀಕಾಂತ್‌–ಸುಜಾತಾ ದಂಪತಿಯ ಪುತ್ರನಾದ ಸಾಯಿಶ್, 591 ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಷಯದಲ್ಲಿ ರಾಜ್ಯದ ಮೊದಲ 10 ಟಾಪರ್‌ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ರಸಾಯನವಿಜ್ಞಾನದಲ್ಲಿ 100ಕ್ಕೆ 100 ಅಂಕ ಗಳಿಸಿ ಹುಬ್ಬೇರಿಸುವಂಥ ಸಾಧನೆ ಮಾಡಿದ್ದಾರೆ. ಉಳಿದಂತೆ, ಪ್ರಥಮ ಭಾಷೆ ಇಂಗ್ಲಿಷ್‌–95, ದ್ವಿತೀಯ ಭಾಷೆ ಹಿಂದಿ–99, ಭೌತವಿಜ್ಞಾನ–99, ಗಣಿತ– 99 ಹಾಗೂ ಜೀವವಿಜ್ಞಾನದಲ್ಲಿ 99 ಅಂಕಗಳನ್ನು ಪಡೆದಿದ್ದಾರೆ. ಯಾವುದೇ ಕೋಚಿಂಗ್‌ಗೆ ಹೋಗದೇ ಈ ಸಾಧನೆ ಮಾಡಿರುವುದು ವಿಶೇಷ.

‘ಕಾಲೇಜಿನಲ್ಲಿ ಉಪನ್ಯಾಸಕರು ಹೇಳಿಕೊಟ್ಟಿದ್ದನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೆ. ಅವತ್ತಿನ ಪಾಠವನ್ನು ಅವತ್ತೇ ಅಭ್ಯಾಸ ಮಾಡುತ್ತಿದ್ದೆ. ಇದರಿಂದಾಗಿ ಹೆಚ್ಚು ನೆನಪಿನಲ್ಲಿ ಉಳಿಯುತ್ತಿತ್ತು. ನಿತ್ಯ 8 ಗಂಟೆಗೂ ಜಾಸ್ತಿ ಸಮಯ ಅಭ್ಯಾಸ ಮಾಡುತ್ತಿದ್ದೆ. ವೇಳಾಪಟ್ಟಿ ಹಾಕಿಕೊಂಡು ಅದನ್ನು ಅನುಸರಿಸುತ್ತಿದ್ದೆ. ಪರಿಶ್ರಮ ಪಟ್ಟಿದ್ದಕ್ಕೂ ಒಳ್ಳೆಯ ಅಂಕಗಳು ಬಂದಿವೆ. ಹೀಗಾಗಿ, ಹೆಮ್ಮೆಯಾಗುತ್ತಿದೆ’ ಎಂದು ಸಾಯಿಶ್ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

ಎಂ.ವಿ. ಹೇರವಾಡಕರ ಪ್ರೌಢಶಾಲೆಯಲ್ಲಿ ಓದಿದ ಅವರು, ಎಸ್ಸೆಸ್ಸೆಲ್ಸಿಯಲ್ಲಿ ಶೇ 97.92 ಅಂಕ ಗಳಿಸಿ ಶಾಲೆಗೆ 3ನೇ ಸ್ಥಾನ ಪಡೆದಿದ್ದರು.

‘ಎಸ್ಸೆಸ್ಸೆಲ್ಸಿವರೆಗೂ ಕ್ರಿಕೆಟ್‌ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಇತ್ತು. ವಿವಿಧ ಪಂದ್ಯಗಳಲ್ಲಿ ಭಾಗವಹಿಸಿದ್ದೆ. ಆದರೆ, ಪಿಯುಸಿಗೆ ಬಂದಾಗ ಓದಿಗೆ ಸಮಯ ಮೀಸಲಿರಿಸಿದೆ. ರಸಾಯನವಿಜ್ಞಾನ ವಿಷು ಬಹಳ ಇಷ್ಟವಿತ್ತು. 100ಕ್ಕೆ 100 ಅಂಕ ಗಳಿಸಿರುವುದಕ್ಕೆ ಬಹಳ ಖುಷಿಯಾಗಿದೆ. ಗಣಿತವೂ ನನಗೆ ಕಷ್ಟ ಎನಿಸುವುದಿಲ್ಲ’ ಎಂದು ತಿಳಿಸಿದರು.

‘ಜೆಇಇ ಪರೀಕ್ಷೆ ತೆಗೆದುಕೊಂಡಿದ್ದೆ. ಮೊದಲ ಯತ್ನದಲ್ಲಿ ಶೇ 98.16ರಷ್ಟು ಅಂಕಗಳು ಬಂದಿವೆ. 2ನೇ ಯತ್ನದ ಫಲಿತಾಂಶ ಪ್ರಕಟವಾಗಿಲ್ಲ. ಆದರೆ, ಮತ್ತಷ್ಟು ಸುಧಾರಿಸುವ ನಿರೀಕ್ಷೆ ಇದೆ. ಸಿಇಟಿಗೂ ಸಿದ್ಧವಾಗುತ್ತಿದ್ದೇನೆ. ಜೆಇಇಗಾಗಿ ಕೋಚಿಂಗ್‌ಗೆ ಸೇರಿದ್ದೆ’ ಎಂದು ಮಾಹಿತಿ ನೀಡಿದರು.

‘ಅಣ್ಣ ಸಮರ್ಥ ಪ್ರಾಡಕ್ಟ್‌ ಡಿಸೈನ್ ಎಂಜಿನಿಯರ್‌ ಆಗಿದ್ದಾರೆ. ಮರ್ಸಿಡಿಸ್ ಬೆಂಜ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೇ ನನಗೆ ಸ್ಫೂರ್ತಿ. ನನಗೂ ಎಂಜಿನಿಯರ್‌ ಆಗಬೇಕು ಎಂಬ ಆಸೆ ಇದೆ’ ಎಂದು ಮುಂದಿನ ಕನಸುಗಳನ್ನು ಹಂಚಿಕೊಂಡರು.

‘ಅಣ್ಣನೇ ಅವನಿಗೆ ಮಾದರಿ ಹಾಗೂ ಮಾರ್ಗದರ್ಶಕ. ಸಾಯಿಶ್ ಚಿಕ್ಕಂದಿನಿಂದಲೂ ಚೆನ್ನಾಗಿ ಓದುತ್ತಿದ್ದಾನೆ. ಹೀಗಾಗಿ, ಅವನಿಗೆ ಪ್ರೋತ್ಸಾಹ ಕೊಡುತ್ತಿದ್ದೇವೆ. ಈಗ ರಾಜ್ಯಕ್ಕೆ 4ನೇ ಸ್ಥಾನ ಪಡೆದಿರುವುದು ಹೆಮ್ಮೆ ಹಾಗೂ ಖುಷಿ ತಂದಿದೆ. ಯಾವ ಕಾಲೇಜಿಗೆ ಸೇರಿಸಬೇಕು ಎನ್ನುವುದನ್ನು ಸಿಇಟಿ ಫಲಿತಾಂಶ ಆಧರಿಸಿ ನಿರ್ಧರಿಸುತ್ತೇವೆ’ ಎಂದು ತಂದೆ ಶ್ರೀಕಾಂತ್ ಪ್ರತಿಕ್ರಿಯಿಸಿದರು.

‘ಫೇಸ್‌ಬುಕ್‌ನಲ್ಲಿ ನನ್ನ ಖಾತೆ ಇದೆ. ಆದರೆ, ಅದರಲ್ಲೇ ಮುಳುಗಿ ಹೋಗಿರಲಿಲ್ಲ. ಹೆಚ್ಚಾಗಿ ನೋಡುತ್ತಿರಲಿಲ್ಲ; ಬಳಸುತ್ತಿರಲಿಲ್ಲ. ಅಭ್ಯಾಸಕ್ಕೆ ಆದ್ಯತೆ ನೀಡಿದ್ದೆ. ಉಪನ್ಯಾಸಕರು ಹೇಳಿದ್ದನ್ನು ಕೇಳಿದರೆ ಒಳ್ಳೆಯ ಅಂಕ ಪಡೆಯುವುದು ಕಷ್ಟವಾಗಲಾರದು. ಗಣಿತ ಅಥವಾ ವಿಜ್ಞಾನದ ವಿಷಯಗಳು ಕಬ್ಬಿಣದ ಕಡಲೆ ಏನಲ್ಲ. ಗಮನವಿಟ್ಟು ಓದಿಕೊಳ್ಳಬೇಕಷ್ಟೇ. ನಾನು ಹಾಗೆಯೇ ಮಾಡುತ್ತಿದ್ದೆ’ ಎನ್ನುತ್ತಾರೆ ಅವರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT