ಶುಕ್ರವಾರ, ನವೆಂಬರ್ 27, 2020
19 °C
ಐನಾಪುರದಲ್ಲಿ 9 ಎಕರೆಯಲ್ಲಿ ಕೃಷಿ

ಚಿಕ್ಕೋಡಿ: ಗಮನಸೆಳೆದ ‘ಯೋಗಿಕ ಬೇಸಾಯ’

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ‘ಬೆಳೆಗಳಿಗೂ ಭಾವನೆಗಳಿರುತ್ತವೆ. ಮನುಷ್ಯನ ಭಾವನೆಗಳನ್ನು ಗ್ರಹಿಸುವ ಶಕ್ತಿ ಅವುಗಳಲ್ಲಿದೆ. ರಾಜಯೋಗದ ಮೂಲಕ ಶುದ್ಧ, ಸಕಾರಾತ್ಮಕ, ಶ್ರೇಷ್ಠ, ಶಕ್ತಿಶಾಲಿ ಭಾವನೆಗಳು ಪಸರಿಸಿ ಬೆಳೆಗಳಿಗೆ ಉತ್ತಮ ಸಂಸ್ಕಾರ ನೀಡಿದರೆ ಸಾತ್ವಿಕ ಆಹಾರವನ್ನು ಪಡೆಯಬಹುದು. ಇದು ಶಾಶ್ವತ ಯೋಗಿಕ ಬೇಸಾಯ ಪದ್ಧತಿಯಿಂದ ಸಾಧ್ಯ’.

– ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರದ ಸಂಚಾಲಕರಾದ ಗ್ರಾಮ ವಿಕಾಸ ಬೆಳಗಾವಿ ವಿಭಾಗದ ಸಂಯೋಜಕಿ ಶಾಂತಕ್ಕ ಅವರ ಮಾತಿದು.

‘ಕಾಗವಾಡ ತಾಲ್ಲೂಕಿನ ಐನಾಪುರದಲ್ಲಿ ಲಕ್ಷ್ಮಣ ಹೊಳಬಸಪ್ಪ ದೇವಪೂಜೆ ಏಳು ವರ್ಷಗಳಿಂದ 9 ಎಕರೆಯಲ್ಲಿ ಶಾಶ್ವತ ಯೋಗಿಕ ಕೃಷಿ ಕೈಗೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಆರೋಗ್ಯಯುತ ಫಸಲಿನೊಂದಿಗೆ ಆದಾಯ ಗಳಿಸುತ್ತಿದ್ದಾರೆ. ತಮ್ಮ ಹಾಗೂ ಪರಿವಾರದ ಆರೋಗ್ಯ ಸುರಕ್ಷತೆಯೊಂದಿಗೆ ಸಮಾಜಕ್ಕೂ ಕೃಷಿ ಉತ್ಪನ್ನಗಳನ್ನು ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಎಲ್ಲರೂ ಯೋಗಿಕ ಕೃಷಿ ಅಳವಡಿಸಿಕೊಂಡಾಗ ಪ್ರಕೃತಿ ಕಾಪಾಡಬಹುದು’ ಎನ್ನುತ್ತಾರೆ.

ಏನಿದು ಯೋಗಿಕ ಕೃಷಿ?: ‘ಪ್ರಕೃತಿಯಿಂದ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದೇವೆ. ಆದರೆ, ವಾಪಸ್ ನಾವೇನು ಕೊಟ್ಟಿದ್ದೇವೆ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪರಿಸರಕ್ಕೆ ಕೃತಜ್ಞತೆ ಅರ್ಪಿಸಬೇಕು. ಸಮತೋಲನಕ್ಕಾಗಿ ಸಂಕಲ್ಪ ಮಾಡಬೇಕು. ಇದಕ್ಕೆ ಯೋಗಿಕ ಕೃಷಿ ಪರಿಹಾರವಾಗಿದೆ. ವಿಜ್ಞಾನ ಮತ್ತು ಅಧ್ಯಾತ್ಮಗಳ ಒಗ್ಗೂಡಿಕೆಯೇ ಯೋಗಿಕ ಕೃಷಿ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭೂತಾಯಿಯೇ ನಿನ್ನ ಉಡಿಯಲ್ಲಿ ಬೀಜಗಳನ್ನು ಹಾಕುತ್ತಿದ್ದೇನೆ; ಅವುಗಳನ್ನು ಸಂರಕ್ಷಿಸು’ ಎಂಬ ಶುಭ ಭಾವನೆಯೊಂದಿಗೆ ಬಿತ್ತನೆ ಮಾಡಬೇಕು. ಬೀಜಾಮೃತ, ಜೀವಾಮೃತ ನೀಡಬೇಕು. ಕೀಟನಾಶಕ, ರೋಗ ಬಾಧೆ ತಡೆಯಲು ಸ್ಥಳೀಯ ಸಂಪನ್ಮೂಲಗಳಿಂದ ತಯಾರಿಸಿದ ದ್ರಾವಣ ಸಿಂಪಡಿಸಬೇಕು. ನಿತ್ಯ ಒಂದಿಷ್ಟು ಸಮಯ ರಾಜಯೋಗದ ಮೂಲಕ ಬೆಳೆಗಳಲ್ಲಿ ಶುದ್ಧ ಭಾವನೆಗಳನ್ನು ಮೂಡಿಸಬೇಕು. ಇದರಿಂದ ಉತ್ತಮ ಫಸಲು ಪಡೆಯಬಹುದು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಲಕ್ಷ್ಮಣ ಅನುಭವ: ‘ಹಂತ ಹಂತವಾಗಿ 9 ಎಕರೆಯಲ್ಲಿ ಯೋಗಿಕ ಕೃಷಿ ಮಾಡುತ್ತಿದ್ದು, ಇದರಿಂದ ಹೆಚ್ಚಿನ ಇಳುವರಿ ಸಿಗುತ್ತಿದೆ. ಮೂರೂವರೆ ಎಕರೆ ಭೂಮಿಯಲ್ಲಿ ಪೇರಲದೊಂದಿಗೆ ಮಿಶ್ರ ಬೆಳೆಯಾಗಿ ಮಾವು, ಅಂಜೂರ, ನುಗ್ಗೆ, ಕಿತ್ತಳೆ ಹಾಕಿದ್ದೇನೆ. ಬೇಲಿಯಾಗಿ ಹೆಬ್ಬೇವು ಬೆಳೆಸಿದ್ದೇನೆ. ಲಾಕ್‌ಡೌನ್ ನಡುವೆಯೂ ಪೇರಲಕ್ಕೆ ಬೇಡಿಕೆ ಇತ್ತು. ಎರಡು ಎಕರೆಯಲ್ಲಿ ಬದನೆ, ಜವಾರಿ ಬಾಳೆ, ಸಪೋಟಾ, ತೆಂಗು ಹಾಕಿದ್ದೇನೆ’ ಎಂದು ಲಕ್ಷ್ಮಣ ದೇವಪೂಜೆ ತಿಳಿಸಿದರು.

‘ಗಿರ್ ತಳಿಯ ಎರಡು ಹಸುಗಳನ್ನು ಸಾಕಿದ್ದು, ಗೋಮೂತ್ರ ಮತ್ತು ಸಗಣಿಯಿಂದ ಜೀವಾಮೃತ, ಬೀಜಾಮೃತ ತಯಾರಿಸಿ ಬೆಳೆಗಳಿಗೆ ನೀಡುತ್ತೇನೆ. ಹಾಲುಯುಕ್ತ ಹತ್ತು ಬಗೆಯ ಸಸ್ಯಗಳ ಎಲೆಗಳನ್ನು ಕೊಳೆಸಿ ದ್ರಾವಣ ತಯಾರಿಸಿ ಬೆಳೆಗಳಿಗೆ ಸಿಂಪಡಿಸಿ, ಕೀಟ ಮತ್ತು ರೋಗಬಾಧೆ ತಡೆಯುತ್ತೇನೆ’ ಎಂದು ಅನುಭವ ಹಂಚಿಕೊಂಡರು. ಸಂಪರ್ಕಕ್ಕೆ ಲಕ್ಷ್ಮಣ ಮೊ: 99806 18827, ಶಾಂತಕ್ಕ ಮೊ: 89714 03668.

***

ಬೆಳೆಗಳ ಮಧ್ಯೆ ಅಲ್ಲಲ್ಲಿ ಶಿವಧ್ವಜ ಹಾಕಿರುವುದರಿಂದ ಅವುಗಳಿಗೆ ಚೈತನ್ಯ ಸಿಗುತ್ತದೆ. ಹೊಲದಲ್ಲಿ ರಾಜಯೋಗದ ಮೂಲಕ ಸಕಾರಾತ್ಮಕ ಚಿಂತನೆಗಳನ್ನು ಪಸರಿಸುತ್ತೇನೆ
ಲಕ್ಷ್ಮಣ ದೇವಪೂಜೆ, ಕೃಷಿಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು