ಬಾಲ ಸಾಹೇಬ್‌ ಬಾಳು ಬೆಳಗಿದ ಊದುಬತ್ತಿ

ಸೋಮವಾರ, ಮೇ 27, 2019
23 °C

ಬಾಲ ಸಾಹೇಬ್‌ ಬಾಳು ಬೆಳಗಿದ ಊದುಬತ್ತಿ

Published:
Updated:
Prajavani

ಹಗರಿಬೊಮ್ಮನಹಳ್ಳಿ: ಈ ಶೆಡ್ ಬಳಿ ಹೋಗುತ್ತಿದ್ದಂತೆಯೇ ದುಂಡು ಮಲ್ಲಿಗೆಯ ಊದುಬತ್ತಿ ವಾಸನೆ ಘಮ್ಮೆಂದು ಬರುತ್ತದೆ. ಕಣ್ಣು ಹಾಯಿಸಿದಲೆಲ್ಲ ಊದುಬತ್ತಿಗಳ ಬಂಡಲ್‌ಗಳೇ ಕಣ್ಣಿಗೆ ರಾಚುತ್ತವೆ.

ಇದು ತಾಲ್ಲೂಕಿನ ಅಲಬೂರು ಗ್ರಾಮದ ಪಿ. ಬಾಲ ಸಾಹೇಬ್‌ ಮತ್ತು ಅವರ ಪತ್ನಿ ಹಸೀನಾಬಿ ಅವರ ಶೆಡ್‌ನಲ್ಲಿ ಕಂಡು ಬರುವ ಚಿತ್ರಣ. 

ಬಾಲ ಸಾಹೇಬ್ ಜೀವನೋಪಾಯಕ್ಕಾಗಿ 20 ವರ್ಷಗಳಿಂದ ಕೊಳವೆ ಬಾವಿಗಳ ಮೋಟಾರ್ ದುರಸ್ತಿ ಕೆಲಸ ಮಾಡುತ್ತಿದ್ದರು. ಆದರೆ, ಸತತ ಬರಗಾಲದಿಂದಾಗಿ ಕೊಳವೆ ಬಾವಿಗಳಲ್ಲಿ ನೀರು ಬತ್ತಿದ ಪರಿಣಾಮ ಮೋಟಾರ್ ದುರಸ್ತಿ ಕೆಲಸ ನಿಂತು ಹೋಯಿತು. ಇದರಿಂದ ವಿಚಲಿತರಾಗದ ಬಾಲಸಾಹೇಬ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೊರೆತ ಸಾಲದಿಂದ ಊದುಬತ್ತಿ ತಯಾರಿಕಾ ಘಟಕ ಸ್ಥಾಪಿಸಿ, ಅವರ ಕುಟುಂಬದ ಬದುಕಿನ ಬಂಡಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಬಾಲ ಸಾಹೇಬ್ ಮತ್ತು ಹಸೀನಾಬಿ ಅವರು ₹1.50 ಲಕ್ಷ ಸಾಲ ಪಡೆದು ಹರಿಹರದಲ್ಲಿ ₹1.30 ಲಕ್ಷಕ್ಕೆ ಊದುಬತ್ತಿ ತಯಾರಿಕೆ ಯಂತ್ರ ಖರೀದಿಸಿದರು. ಬಳಿಕ ಒಂದು ದಿನದ ತರಬೇತಿ ಪಡೆದು, ಊದುಬುತ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡರು. 

ನಿತ್ಯ 50 ಕೆ.ಜಿ. ಊದುಬತ್ತಿ ತಯಾರಿಸುತ್ತಾರೆ. ಅವರು ತಯಾರಿಸಿದ ಕಡ್ಡಿಗಳಿಗೆ ಹರಿಹರ, ಚಿತ್ರದುರ್ಗ, ಹೊಸಪೇಟೆಯಲ್ಲಿ ಭಾರಿ ಬೇಡಿಕೆ ಇದೆ. ಘಟಕ ಆರಂಭಿಸಿದ ಏಳು ತಿಂಗಳಲ್ಲೇ ಒಂದು ಟನ್‍ಗೂ ಅಧಿಕ ಕಚ್ಚಾ ಊದುಬತ್ತಿ ಮಾರಾಟವಾಗಿದೆ. ದುಂಡುಮಲ್ಲಿಗೆ ಸುವಾಸನೆ ಬೀರುವ ಊದುಬತ್ತಿಗೆ ಭಾರಿ ಬೇಡಿಕೆ ಇದೆ. ಎಲ್ಲ ಖರ್ಚು ತೆಗೆದು ತಿಂಗಳಿಗೆ ₹18ರಿಂದ 20ಸಾವಿರ ಲಾಭ ಗಳಿಸುತ್ತಾರೆ.

ಪತಿ ಪತ್ನಿ ಇಬ್ಬರೂ ಘಟಕದಲ್ಲಿ ಕೆಲಸ ಮಾಡುತ್ತಿರುವುದರಿಂದ ಕೂಲಿ ಕೆಲಸಗಾರರ ಅಗತ್ಯ ಇದುವರೆಗೆ ಕಂಡು ಬಂದಿಲ್ಲ. ಊದುಬತ್ತಿ ತಯಾರಿಕೆಗೆ ಬೇಕಾದ ಕಚ್ಚಾ ಪದಾರ್ಥಗಳನ್ನು ದಾವಣಗೆರೆಯಲ್ಲಿ ಖರೀದಿಸುತ್ತಾರೆ. ಒಂದು ಕ್ವಿಂಟಲ್ ಊದುಬತ್ತಿ ತಯಾರಿಸಲು ಕ್ವಿಂಟಲ್ ಪೌಡರ್‌ಗೆ ₹2,200, ಕಡ್ಡಿಗೆ ₹3,150, ಗಮ್ ಪೌಡರ್, ಸುವಾಸನೆಯ ದ್ರಾವಣಕ್ಕೆ ₹3,000 ವೆಚ್ಚ ಮಾಡುತ್ತಾರೆ.

‘ಇದುವರೆಗೂ ಮಾರುಕಟ್ಟೆಯ ತೊಂದರೆಯಾಗಿಲ್ಲ. ಘಟಕದಲ್ಲಿ ತಯಾರಾದ ಊದುಬತ್ತಿಗೆ ಅತ್ಯುತ್ತಮ ಬೆಲೆ ಇದೆ. ಉತ್ಪನ್ನ ತೂಕವಾದ ತಕ್ಷಣ ಹಣ ನೀಡುತ್ತಾರೆ’ ಎಂದು ಬಾಲ ಸಾಹೇಬ್ ಹೇಳಿದರು. ‘ಘಟಕ ಸ್ಥಾಪನೆಗೆ ಪಡೆದ ಒಟ್ಟು ಸಾಲದಲ್ಲಿ ಅರ್ಧ ತೀರಿಸಿದ್ದಾರೆ. ಕಿರು ಉದ್ಯಮಗಳನ್ನು ಪ್ರೋತ್ಸಾಹಿಸಿ ಜನರನ್ನು ಆರ್ಥಿಕವಾಗಿ ಸ್ವಾವಲಂಬಿಗೊಳಿಸಲು ಸಂಸ್ಥೆ ಎಲ್ಲ ರೀತಿಯ ನೆರವು ನೀಡುತ್ತಿದೆ’ ಎಂದು ಯೋಜನೆಯ ಸೇವಾ ಪ್ರತಿನಿಧಿ ಹೂಗಾರ ಸುಮತಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !