ಬುಧವಾರ, ಜೂನ್ 16, 2021
22 °C
ರಾಜ್ಯದಲ್ಲಿ ಬಳ್ಳಾರಿ, ಬಾಗಲಕೋಟೆಗೆ ಎರಡನೇ ಸ್ಥಾನ, ಬೆಂಗಳೂರು ಗ್ರಾಮಾಂತರ ಕಳಪೆ

ಆಂಟಿಜೆನ್‌ ಕಿಟ್‌ ಬಳಕೆ: ರಾಜಧಾನಿ ಹಿಂದೆ, ಕೊಪ್ಪಳ ಮುಂದೆ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಆಂಟಿಜಿನ್‌ ಕಿಟ್‌ ಬಳಸಿ ಕೋವಿಡ್‌ ತಪಾಸಣೆ ಮಾಡುವಲ್ಲಿ ರಾಜಧಾನಿ ಬೆಂಗಳೂರು ಹಿಂದೆ ಇದ್ದರೆ ಕೊಪ್ಪಳ ಜಿಲ್ಲೆ ಮುಂದೆ ಇದೆ. ಬಳ್ಳಾರಿ ಹಾಗೂ ಬಾಗಲಕೋಟೆ ಎರಡನೇ ಸ್ಥಾನದಲ್ಲಿದೆ.

ಕೊಪ್ಪಳ (ಶೇ 99) ಸೇರಿದಂತೆ ಎಂಟು ಜಿಲ್ಲೆಗಳಷ್ಟೇ ಶೇ 80ಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ. ಬೆಂಗಳೂರು ನಗರ (ಶೇ 50) ಮತ್ತು ಅತಿ ದೊಡ್ಡ ಜಿಲ್ಲೆ ಬೆಳಗಾವಿ (ಶೇ 49) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ (ಶೇ 33) ಹಾಗೂ ಕಿಟ್‌ಗಳನ್ನು ಬಳಕೆ ಮಾಡಿ ಅತ್ಯಂತ ಹಿಂದೆ ಉಳಿದಿದೆ. ಬೆಂಗಳೂರು ನಗರ ಜಿಲ್ಲೆಗೆ ಅತ್ಯಧಿಕ ಕಿಟ್‌ಗಳನ್ನು ಪೂರೈಸಲಾಗಿದೆ.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ ಆಗಸ್ಟ್‌ 14ರವರೆಗೆ 6,94,700 ಕಿಟ್‌ಗಳನ್ನು ವಿತರಿಸಿದ್ದು, 4,64,325 ಮಂದಿಗೆ ತಪಾಸಣೆ ನಡೆಸಲಾಗಿದ್ದು ಶೇ 67ರಷ್ಟು ಕಿಟ್‌ಗಳಷ್ಟೇ ಬಳಕೆಯಾಗಿದೆ.

ಬಳ್ಳಾರಿ ಹಾಗೂ ಬಾಗಲಕೋಟೆ ಶೇ 93ಷ್ಟು ಬಳಕೆ ಮಾಡಿದ್ದರೆ, ವಿಜಯಪುರ ಮತ್ತು ಗದಗ ಶೇ 87 ಬಳಸಿವೆ. ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆ ಶೇ 84ರಷ್ಟು ಕಿಟ್‌ಗಳನ್ನು ಬಳಸಿವೆ. 11 ಜಿಲ್ಲೆಗಳು ಶೇ 70ರಿಂದ 80ರಷ್ಟು ಕಿಟ್‌ಗಳನ್ನು ಬಳಸಿವೆ. 8 ಜಿಲ್ಲೆಗಳು ಶೇ 60ರಿಂದ 70ರಷ್ಟು ಕಿಟ್‌ಗಳನ್ನು ಬಳಸಿದೆ.

ಬಳ್ಳಾರಿ ಜಿಲ್ಲೆಯಕ್ಕಿ ಕಿಟ್‌ಗಳ ಬಳಕೆ ಹೆಚ್ಚಿರುವ ಕುರಿತು ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ‘ಜಿಲ್ಲೆಯಲ್ಲಿ ಹೆಚ್ಚು ಜ್ವರ ತಪಾಸಣೆ ಕೇಂದ್ರಗಳಿದ್ದು, ಎಲ್ಲೆಡೆ ಆಂಟಿಜೆನ್‌ ಕಿಟ್‌ ಬಳಸಿ ತಪಾಸಣೆ ನಡೆಸಲಾಗುತ್ತಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಹಂತದ ಸಂಪರ್ಕ ಹೊಂದಿರುವವರೆಲ್ಲರನ್ನೂ ಪತ್ತೆ ಹಚ್ಚಿ ತಪಾಸಣೆ ನಡೆಸುತ್ತಿರುವುದು ವಿಶೇಷ’ ಎಂದರು.

‘ಹೆಚ್ಚಿನ ಜನರೂ ಸ್ವಯಂಪ್ರೇರಣೆಯಿಂದ ಮುಂದೆ ಬಂದು ಜ್ವರ ತಪಾಸಣೆ ಮಾಡಿಸಿಕೊಳ್ಳುತ್ತಿರುವುದು ಕೂಡ ಜಿಲ್ಲೆಯ ಸಾಧನೆಗೆ ಕಾರಣ. ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಜ್ವರ ತಪಾಸಣೆ ಮಾಡಿಸಿಕೊಂಡರೆ ಅಪಾಯದಿಂದ ಪಾರಾಗಬಹುದು’ ಎಂದು ಅಭಿಪ್ರಾಯಪಟ್ಟರು.

‘ಬಳ್ಳಾರಿ, ಸಂಡೂರು, ಸಿರುಗುಪ್ಪ, ಕೂಡ್ಲಿಗಿ, ಹಡಗಲಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಹಾಗೂ ಜಿಲ್ಲಾ ಕೋವಿಡ್‌ ಆಸ್ಪತ್ರೆ, ವಿಮ್ಸ್‌ ಆಸ್ಪತ್ರೆಯಲ್ಲೂ ನಿರಂತರವಾಗಿ ಜ್ವರ ತಪಾಸಣೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಟೋಕನ್‌ ಪದ್ಧತಿ: ನಗರದ ಮುನ್ಸಿಪಲ್‌ ಕಾಲೇಜು ಆವರಣದಲ್ಲಿರುವ ಜ್ವರ ತಪಾಸಣೆ ಕೇಂದ್ರಕ್ಕೆ ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಟೋಕನ್‌ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಒಂದು ದಿನ ಮುಂಚೆಯೇ ಕೇಂದ್ರದಲ್ಲಿ ಟೋಕನ್‌ ಪಡೆಯಬೇಕು. ಟೋಕನ್ ಇಲ್ಲದೆ ಬಂದವರಲ್ಲಿ ಜ್ವರ, ಸುಸ್ತು ಹೆಚ್ಚಿದ್ದರೆ ಕೂಡಲೇ ತಪಾಸಣೆ ಮಾಡುವ ವ್ಯವಸ್ಥೆಯೂ ಇದೆ ಎಂದು ಉಸ್ತುವಾರಿ ಡಾ.ರಾಜಶೇಖರ್‌ ಗಾಣಿಗೇರ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು