ಮಂಗಳವಾರ, ಆಗಸ್ಟ್ 16, 2022
30 °C
ಒಂದುವರೆ ದಶಕದ ನಂತರ ಸಮೃದ್ಧಿ ಕಡೆಗೆ ಮುಖಮಾಡಿದ ಜಿಲ್ಲೆ

ಬಳ್ಳಾರಿಯೀಗ ಬಿಸಿಲೂರು ಅಲ್ಲ; ಮಳೆಯೂರು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಬಿಸಿಲೂರು ಎಂಬ ಹಣೆಪಟ್ಟಿ ಹೊಂದಿರುವ ಬಳ್ಳಾರಿ ಜಿಲ್ಲೆಯಲ್ಲಿ ಒಂದುವರೆ ದಶಕದ ನಂತರ ಸಮೃದ್ಧ ಮಳೆಯಾಗಿದ್ದು, ಜಿಲ್ಲೆ ಈಗ ಸಮೃದ್ಧಿಯ ಕಡೆಗೆ ಮುಖ ಮಾಡಿದೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಈ ವರ್ಷ ಆರಂಭದಿಂದಲೇ ಉತ್ತಮ ವರ್ಷಧಾರೆಯಾಗಿದೆ. ಈಗಲೂ ಮುಂದುವರೆದಿದೆ. ಬಹುತೇಕ ಕೆರೆ, ಕಟ್ಟೆಗಳು ಮೈದುಂಬಿಕೊಂಡು ಹರಿಯುತ್ತಿವೆ. ಅನೇಕ ಕಡೆ ಕೆರೆಗಳಿಗೆ ಕೋಡಿ ಬಿದ್ದು ಹರಿದುದ್ದುಂಟು. ಸಂಡೂರಿನ ನಾರಿಹಳ್ಳ ಜಲಾಶಯ ಬರೋಬ್ಬರಿ ಹತ್ತು ವರ್ಷಗಳ ನಂತರ ತುಂಬಿಕೊಂಡಿದೆ.

ಗಣಿಗಾರಿಕೆಯಿಂದ ಕೆಂಪಾಗಿದ್ದ ಹೊಸಪೇಟೆ, ಸಂಡೂರು ಸುತ್ತಮುತ್ತಲಿನ ಬೆಟ್ಟ, ಗುಡ್ಡಗಳು ಹಸಿರು ಹೊದ್ದುಕೊಂಡಿವೆ. ಅದರಲ್ಲೂ ಸಂಡೂರು, ಮಲೆನಾಡು ನಾಚಿಸುವಂತೆ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಹೊಸಪೇಟೆಯೂ ಹೊರತಾಗಿಲ್ಲ. ಗುಂಡಾ ಅರಣ್ಯ, ತುಂಗಭದ್ರಾ ಜಲಾಶಯ ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಬಳ್ಳಾರಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಕಂಪ್ಲಿ ಹಾಗೂ ಸಿರುಗುಪ್ಪ ಸುತ್ತಮುತ್ತಲಿನ ಪರಿಸರ ಹಸಿರಾಗಿದೆ.

ಕಳೆದ ಒಂದುವರೆ ದಶಕದಲ್ಲಿ ಜಿಲ್ಲೆಯ ಒಂದಿಲ್ಲೊಂದು ತಾಲ್ಲೂಕಿನಲ್ಲಿ ಭೀಕರ ಬರ ಇತ್ತು. ಅದರಲ್ಲೂ 2016ರಿಂದ 2018ರ ವರೆಗೆ ಜಿಲ್ಲೆಯ ಬಹುತೇಕ ಭಾಗಗಳು ಬರಕ್ಕೆ ನಲುಗಿದ್ದವು. 2018ರಿಂದ ಸತತ ಇದುವರೆಗೆ ತುಂಗಭದ್ರಾ ಜಲಾಶಯ ತುಂಬುತ್ತಿದೆ. ನದಿಯಂಚು, ಕಾಲುವೆಗಳಿಗೆ ಹೊಂದಿಕೊಂಡಿರುವ ನೀರಾವರಿ ಅವಲಂಬಿತ ಪ್ರದೇಶಗಳಲ್ಲಿ ರೈತರು ಎರಡು ಬೆಳೆ ಬೆಳೆದುಕೊಂಡಿದ್ದರು. ಆದರೆ, ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುವವರು ತೀರ ಸಂಕಷ್ಟಕ್ಕೆ ಒಳಗಾಗಿದ್ದರು. ಉದಾಹರಣೆಗೆ ಹೋದ ವರ್ಷ, ಜಲಾಶಯ ತುಂಬಿದರೂ, ಅದರ ಸನಿಹದಲ್ಲೇ ಇರುವ ಹೊಸಪೇಟೆಯ ಬಹುತೇಕ ಭಾಗಗಳು ಬರಕ್ಕೆ ನಲುಗಿ ಹೋಗಿದ್ದವು.

ಆದರೆ, ಈ ವರ್ಷ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶಗಳೆರಡರಲ್ಲಿ ಸಮೃದ್ಧಿ ಎದ್ದು ಕಾಣುತ್ತಿದೆ. ಹೊಲಗಳಲ್ಲಿ ಮೆಕ್ಕೆಜೋಳ, ಸಜ್ಜೆ, ಜೋಳದ ತೆನೆಗಳು ಬೆಳೆದು ನಿಂತಿವೆ. ರಾಶಿಗೆ ರೈತರು ಸಿದ್ಧತೆ ನಡೆಸಿದ್ದಾರೆ.

‘ಜಲಾಶಯ ಇದ್ದರೂ ನಮ್ಮ ಭಾಗದಲ್ಲಿ ನೀರಾವರಿ ವ್ಯವಸ್ಥೆ ಇಲ್ಲ. ಮಳೆ ಬಿದ್ದರಷ್ಟೇ ನಮ್ಮ ಭಾಗದ ರೈತರು ಬೆಳೆ ಬೆಳೆಯಲು ಸಾಧ್ಯ. ಮುಂಗಾರಿನಲ್ಲಿ ಮಳೆಯಾದರೆ, ಹಿಂಗಾರು ಮಳೆ ಕೈಕೊಡುತ್ತಿತ್ತು. ಹೀಗೆ ಹತ್ತು ವರ್ಷಕ್ಕೂ ಹೆಚ್ಚು ಅವಧಿಯಿಂದ ಮಳೆ ಜೂಜಾಟವಾಡುತ್ತಲೇ ಬಂದಿದೆ. ಅದರಲ್ಲೂ ಕೆಲವು ವರ್ಷ ಮಳೆಯೇ ಆಗಿಲ್ಲ. ಮಟ ಮಟ ಬಿಸಿಲಿನಲ್ಲಿ ಕಾಲ ಕಳೆದಿದ್ದೇವೆ. ಜನ, ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆ ಎದುರಾಗಿತ್ತು. ಈ ವರ್ಷ ಹಾಗಿಲ್ಲ. ಉತ್ತಮವಾಗಿ ಮಳೆಯಾಗಿದೆ. ಹೊಲದಲ್ಲಿ ಬೆಳೆ ಬೆಳೆದು ನಿಂತಿದೆ. ಇನ್ನೇನು ರಾಶಿ ಮಾಡಬೇಕಷ್ಟೇ. ಕುಡಿಯುವ ನೀರು, ಮೇವಿಗೂ ಸಮಸ್ಯೆ ಇಲ್ಲ. ದೇವರು ಪ್ರತಿ ವರ್ಷ ಇದೇ ರೀತಿ ಮಳೆ ಸುರಿಸಿದರೆ ರೈತರ ಬಾಳು ಹಸನಾಗುತ್ತದೆ’ ಎನ್ನುತ್ತಾರೆ ಕಾಕುಬಾಳು ಗ್ರಾಮದ ರೈತ ಪ್ರಕಾಶ್‌.

‘ಭೌಗೋಳಿಕವಾಗಿ ಉತ್ತಮ ಜಾಗದಲ್ಲಿದ್ದರೂ ನಾರಿಹಳ್ಳ ಜಲಾಶಯ ಕಳೆದು ಹತ್ತು ವರ್ಷಗಳ ನಂತರ ಈಗ ತುಂಬಿದೆ. ಗಣಿಗಾರಿಕೆ, ವರ್ಷದಿಂದ ವರ್ಷಕ್ಕೆ ಹಸಿರು ಕಡಿಮೆಯಾಗುತ್ತಿದೆ. ಜಲಮೂಲಗಳ ದಿಕ್ಕು ಬದಲಾಗುತ್ತಿರುವುದು ಪ್ರಮುಖ ಕಾರಣ. ಇಷ್ಟೆಲ್ಲ ಇದ್ದರೂ ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ನಾರಿಹಳ್ಳ ಅದನ್ನೆಲ್ಲ ಮೀರಿ ಮೈದುಂಬಿಕೊಂಡಿದೆ’ ಎಂದು ಸಂಡೂರಿನ ಬಸವರಾಜ ತಿಳಿಸಿದರು.

2005–06ರ ನಂತರ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದು ಈ ವರ್ಷ. ಬಹುತೇಕ ಕೆರೆ, ಕಟ್ಟೆ ತುಂಬಿರುವುದು ಖುಷಿಯ ಸಂಗತಿ ಎನ್ನುತ್ತಾರೆ ಪರಿಸರ ತಜ್ಞ ಸಮದ್‌ ಕೊಟ್ಟೂರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು