ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ – ವಿಜಯನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ: ಬಿರುಸು ಪಡೆಯದ ಚುನಾವಣೆ

Last Updated 17 ನವೆಂಬರ್ 2021, 19:20 IST
ಅಕ್ಷರ ಗಾತ್ರ

ಬಳ್ಳಾರಿ: ವಿಧಾನ ಪರಿಷತ್‌ಗೆ ಬಳ್ಳಾರಿ ಮತ್ತು ವಿಜಯನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿಸೆಂಬರ್‌ 10ರಂದು ನಡೆಯುವ ಚುನಾವಣೆಗೆ 25 ದಿನಗಳು ಮಾತ್ರ ಉಳಿದಿದ್ದರೂ ಇನ್ನೂ ‘ಖದರ್‌’ ಬಂದಿಲ್ಲ. ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದರೂ, ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ಮೈಕೊಡವಿಕೊಂಡು ಎದ್ದಿಲ್ಲ...

ಮೇಲ್ಮನೆ ಚುನಾವಣೆ ಆಗಿದ್ದರಿಂದಲೋ ಏನೋ ಅಷ್ಟೊಂದು ಉತ್ಸಾಹ ಕಾಣುತ್ತಿಲ್ಲ. ಬಿಜೆಪಿ, ಕಾಂಗ್ರೆಸ್‌ ಟಿಕೆಟ್‌ಗೆ ಪೈ‍‍ಪೋಟಿ ಕಂಡುಬರುತ್ತಿಲ್ಲ. ‘ಟಿಕೆಟ್‌ ಕೇಳೋಣ, ಸಿಕ್ಕರೆ ಚಲೋ, ಸಿಗದಿದ್ದರೆ ಇನ್ನೂ ಚಲೋ’ ಎಂಬ ಭಾವನೆ ಆಕಾಂಕ್ಷಿಗಳಲ್ಲಿ ಇದ್ದಂತಿದೆ. ‘ಪರಿಷತ್‌ ಚುನಾವಣೆಗೆ ಸ್ಪರ್ಧಿಸಿ, ಜೇಬಿಗೆ ಹೊರೆ ಮಾಡಿಕೊಳ್ಳುವುದು ಬೇಡ’ ಎಂಬ ಲೆಕ್ಕಾಚಾರ ಹಲವರಿಗೆ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಬಳ್ಳಾರಿ– ವಿಜಯನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು 2015ರಿಂದ ವಿಧಾನ ಪರಿಷತ್ತಿನಲ್ಲಿ ಪ್ರತಿನಿಧಿಸಿರುವ ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ ಈ ಮಾತಿಗೆ ಅಪವಾದ. ಆರು ತಿಂಗಳು ಮೊದಲೇ ‘ಅಖಾಡ’ಕ್ಕೆ ಇಳಿದಿರುವ ಅವರು, ಸದ್ದುಗದ್ದಲವಿಲ್ಲದೆ 100ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಪ್ರಚಾರ ಮುಗಿಸಿದ್ದಾರೆ.

ಗಣಿ ಉದ್ಯಮಿ, ಮರಾಠ ಸಮಾಜದ ಅನಿಲ್‌ ಲಾಡ್‌, ವಿಧಾನಪರಿಷತ್‌ನ ಮಾಜಿ ಸದಸ್ಯ, ಕುರುಬ ಜಾತಿಗೆ ಸೇರಿದ ಕೆ.ಎಸ್‌.ಎಲ್‌ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ದಲಿತ ಸಮುದಾಯದ ಮುಂಡರಗಿ ನಾಗರಾಜ್‌ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕುರುಬರು ಹಾಗೂ ದಲಿತರು ತಮ್ಮ ಸಮುದಾಯಕ್ಕೇ ಟಿಕೆಟ್‌ ಕೊಡಬೇಕು ಎಂದು ಕೇಳಿದ್ದಾರೆ. ಕುರುಬರಲ್ಲಿ ಪ್ರಬಲ ಅಭ್ಯರ್ಥಿಗಳು ಇಲ್ಲ. ದಲಿತ ಸಮಾಜಕ್ಕೆ ಸೇರಿದ ಭೀಮಾನಾಯ್ಕ್‌ ಹಗರಿ ಮತ್ತು ಪರಮೇಶ್ವರ ನಾಯ್ಕ್‌ ಹಡಗಲಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಇದರಿಂದಾಗಿ ಈ ಜಾತಿಗೆ ಟಿಕೆಟ್‌ ಕೊಡುವ ಸಾಧ್ಯತೆ ಕಡಿಮೆ ಎಂದೂ ಕಾಂಗ್ರೆಸ್‌ ವಲಯದಲ್ಲಿ ಹೇಳಲಾಗುತ್ತಿದೆ.

ಕೊಂಡಯ್ಯನವರ ವಿರುದ್ಧ ಸ್ಪರ್ಧಿಸಿ ಸೋತ, ಬಿಜೆ‍ಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್‌, ಗಣಿ ಉದ್ಯಮಿ ಸತೀಶ್‌ ರೆಡ್ಡಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಮ್ಮೂರು ಶೇಖರ್‌ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಮಲಿಂಗಪ್ಪ ಅವರು ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

ಚನ್ನಬಸವನಗೌಡ, ಸತೀಶ್‌ರೆಡ್ಡಿ ಲಿಂಗಾಯತರು. ದಮ್ಮೂರು ಶೇಖರ್‌ ಹಾಗೂ ರಾಮಲಿಂಗಪ್ಪ ಕುರುಬರು. ಈ ಕ್ಷೇತ್ರದಲ್ಲಿ ವಾಲ್ಮೀಕಿ, ದಲಿತರು, ಲಿಂಗಾಯತರು ಮತ್ತು ಕುರುಬ ಜಾತಿ ಅನುಕ್ರಮವಾಗಿ ಪ್ರಬಲವಾಗಿವೆ. ರಾಯಚೂರಿನಲ್ಲಿ ಕುರುಬರಿಗೆ ಟಿಕೆಟ್‌ ಕೊಟ್ಟರೆ ಇಲ್ಲಿ ಲಿಂಗಾಯತರಿಗೆ, ಅಲ್ಲಿ ಲಿಂಗಾಯತರನ್ನು ಪರಿಗಣಿಸಿದರೆ, ಇಲ್ಲಿ ಕುರುಬರಿಗೆ ಟಿಕೆಟ್‌ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಜಾತಿ ನೆಲೆಯಲ್ಲಿ ನೋಡಿದರೆ ಕೊಂಡಯ್ಯ ಅತೀ ಕಡಿಮೆ ಸಂಖ್ಯೆಯಲ್ಲಿರುವ ನೇಕಾರ ಪದ್ಮಸಾಲಿ ಸಮಾಜದವರು. ಆದರೂ ಇಲ್ಲಿ ಗೆಲ್ಲುತ್ತಿದ್ದಾರೆ. ‘ಇದಕ್ಕೆ ಎಲ್ಲ ಜಾತಿ, ಪಕ್ಷಗಳು ಮತ್ತು ನಾಯಕರ ಜತೆ ಅವರ ಒಡನಾಟವೇ ಕಾರಣ. ಅವರ ಮನೆಗೆ ಯಾರೇ ಹೋದರೂ ಯಾವ ಪಕ್ಷದವರೆಂದು ಕೇಳದೆ ಕೆಲಸ ಮಾಡಿಕೊಡುತ್ತಾರೆ’ ಎನ್ನುವ ಮಾತನ್ನು ಅವರ ವಿರೋಧಿಗಳೂ ಹೇಳುತ್ತಾರೆ.

2016ರ ಪರಿಷತ್‌ ಚುನಾವಣೆಯಲ್ಲಿ ಚನ್ನಬಸವನಗೌಡ ಪಾಟೀಲ್‌ ವಿರುದ್ಧ ಕೊಂಡಯ್ಯ 3,600 ಮತಗಳ ಅಂತರದಿಂದ ಆಯ್ಕೆ ಆಗಿದ್ದರು. ಆಗ, ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುವುದೋ, ಇಲ್ಲವೋ ಎಂಬ ವಾತಾವರಣವಿತ್ತು. ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಿಡಿದ ಪಟ್ಟಿನಿಂದಾಗಿ ಕೊನೆ ಗಳಿಗೆಯಲ್ಲಿ ಟಿಕೆಟ್‌ ಸಿಕ್ಕಿತು. ಈ ಸಲವೂ ಬಹುತೇಕ ಅವರಿಗೇ ಕಾಂಗ್ರೆಸ್‌ ಟಿಕೆಟ್‌ ಎನ್ನುವ ವಾತಾವರಣವಿದೆ. ಆದರೂ, ಕಾಂಗ್ರೆಸ್‌ ಹೈಕಮಾಂಡ್‌ ಹೇಗೆ ಯೋಚಿಸುವುದೋ ಎಂದು ಹೇಳುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT