ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ನಾಳೆಯಿಂದ 24ರವರೆಗೆ ಸಂಪೂರ್ಣ ಲಾಕ್‌ಡೌನ್ 

Last Updated 18 ಮೇ 2021, 9:48 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಾದ್ಯಂತ ಮೇ.19ರ ಬೆಳಿಗ್ಗೆ 10ರಿಂದ 24ರ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಿ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಮತ್ತು ಜಿಲ್ಲಾಧಿಕಾರಿ ಸಂಪೂರ್ಣ ಲಾಕ್‌ಡೌನ್‌ ಮಾಹಿತಿ ನೀಡಿದರು.

‘ಸೋಂಕಿನ ಪ್ರಮಾಣ ಹೆಚ್ಚಳ, ತುರ್ತು ಆಮ್ಲಜನಕ, ವೆಂಟಿಲೇಟರ್‌ ಸೌಕರ್ಯಕ್ಕೆ ಹೆಚ್ಚಿದ ಬೇಡಿಕೆ, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿದ ಒತ್ತಡದ ನಿರ್ವಹಣೆ ಹಾಗೂ ಸೋಂಕಿನ ನಿಯಂತ್ರಣದ ಸಲುವಾಗಿ ಸಂಪೂರ್ಣ ಲಾಕ್‌ಡೌನ್‌ ಅನಿವಾರ್ಯವಾಗಿದೆ. ಔಷಧಿ ಮಳಿಗೆಗಳು ಪೂರ್ಣಾವಧಿ ಕಾರ್ಯನಿರ್ವಹಿಸಬಹುದು’ ಎಂದು ಅವರು ಪ್ರತಿಪಾದಿಸಿದರು.

‘ಈ ಅವಧಿಯಲ್ಲಿ ಹಾಲಿನ ಉತ್ಪನ್ನದ ಮಳಿಗೆಗಳು, ಮೊಟ್ಟೆ ಅಂಗಡಿಗಳು, ಕೃಷಿಗೆ ಸಂಬಂಧಿಸಿದ ಅಂಗಡಿಗಳು ಮಾತ್ರ ಬೆಳಿಗ್ಗೆ 6ರಿಂದ 10ಗಂಟೆಯವರೆಗಷ್ಟೇ ಕಾರ್ಯನಿರ್ವಹಿಸಬಹುದು. ಈ ಸಮಯದಲ್ಲಿ ಮಾತ್ರ ಗ್ರಾಹಕರು ಖರೀದಿಸಬೇಕು. ಹೋಟೆಲ್‌ಗಳಿಗೆ ಗ್ರಾಹಕರು ಹೋಗುವಂತಿಲ್ಲ. ಆದರೆ ಹೋಟೆಲ್‌ಗಳು ಪಾರ್ಸಲ್‌ಗಳನ್ನು ಮನೆಗಳಿಗೆ ಪೂರೈಸಬಹುದು. ಕಾರ್ಮಿಕರು ಕಾರ್ಖಾನೆಗಳ ಆವರಣದಲ್ಲೇ ಕಡ್ಡಾಯವಾಗಿ ಇರಬೇಕು. ಕಟ್ಟಡ ನಿರ್ಮಾಣ ಸ್ಥಳದಲ್ಲಿಯೇ ಕಾರ್ಮಿಕರು ವಾಸ್ತವ್ಯ ಹೂಡಬೇಕು’ ಎಂದು ಸ್ಪಷ್ಟಪಡಿಸಿದರು.

‘ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸಗಟು ಮಾರಾಟಗಾರರು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಲು ಹಾಗೂ ಬೇರೆಡೆ ಸಾಗಿಸಲು ನಿರ್ಬಂಧವಿಲ್ಲ. ಅಡುಗೆ ಅನಿಲ ಸಿಲಿಂಡರ್‌ ವಿತರಣೆಯನ್ನು ಮಾಡಬಹುದು. ಅಗತ್ಯ ಸೇವೆಗಳಾದ ಆಂಬ್ಯುಲೆನ್ಸ್, ಅಗ್ನಿ ಶಾಮಕ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು, ಬ್ಯಾಂಕ್, ವಿದ್ಯುತ್, ಆಮ್ಲಜನಕ ಉತ್ಪಾದನಾ ಘಟಕ, ಪೆಟ್ರೋಲ್ ಪಂಪ್, ನೀರು ನೈರ್ಮಲ್ಯ ಸೇವೆಗಳಿಗೆ ಅನುಮತಿ ನೀಡಲಾಗಿದೆ’ ಎಂದರು.

ದಿನಸಿ, ಹಣ್ಣು ತರಕಾರಿ ಅಂಗಡಿಗೆ ನಿಷೇಧ:ಲಾಕ್‌ಡೌನ್‌ ಅವಧಿಯಲ್ಲಿ ಕಿರಾಣಿ ಅಂಗಡಿಗಳು, ದಿನಸಿ, ಹಣು ತರಕಾರಿಗಳು, ಮಾಂಸ ಮತ್ತು ಮೀನು, ಮದ್ಯದ ಅಂಗಡಿಗಳು, ಪಶು ಆಹಾರದ ಅಂಗಡಿಗಳು ಹಾಗೂ ಹಣ್ಣು ಮತ್ತು ತರಕಾರಿಗಳ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ರೋಗಿಗಳು, ಸಂಬಂಧಿಕರನ್ನು ತಡೆಯದಿರಿ’:‘ರೋಗಿಗಳು ಮತ್ತು ಅವರೊಂದಿಗೆ ಸಂಚರಿಸುವ ಸಂಬಂಧಿಕರನ್ನು ಪೊಲೀಸರು ತಡೆಯುವಂತಿಲ್ಲ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

‘ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಅವರು ಆಸ್ಪತ್ರೆಗೆ, ಔಷಧಿ ಅಂಗಡಿಗಳಿಗೆ, ಡಯಾಗ್ನಸ್ಟಿಕ್‌ ಕೇಂದ್ರಗಳಿಗೆ ತೆರಳಲು ಪೊಲೀಸರು ಅವಕಾಶ ನೀಡಬೇಕು’ ಎಂದು ಹೇಳಿದರು.

‘ರಾತ್ರಿ ವಸತಿ ರಹಿತ ನಿರ್ಗತಿಕರ ಕೇಂದ್ರ, ವೃದ್ಧಾಶ್ರಮ, ಬಾಲಮಂದಿರಗಳು, ಅನಾಥಾಶ್ರಮಗಳು ಕಾರ್ಯನಿರ್ವಹಿಸಬಹುದು.ಮೇ 25ರ ನಂತರ ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿ–ಗತಿಯನ್ನು ಪರಿಶೀಲಿಸಿದ ಬಳಿಕ ನಿರ್ಬಂಧಗಳನ್ನು ತೆರವು ಮಾಡುವುದರ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ಹೆಚ್ಚಿದ ಜನಸಂದಣಿ: ಸಂಪೂರ್ಣ ಲಾಕ್‌ಡೌನ್‌ ವಿಧಿಸುವ ಸೂಚನೆ ದೊರಕಿದ ಸಾರ್ವಜನಿಕರು ಮಂಗಳವಾರ ಬೆಳಿಗ್ಗೆ ದಿನಸಿ ಅಂಗಡಿ, ಮಾರ್ಕೆಟ್‌ಗಳಲ್ಲಿ ನೆರೆದು ಸಾಮಗ್ರಿಗಳನ್ನು ಖರೀದಿಸಿದ್ದು ಕಂಡು ಬಂತು. ಪ್ರಮುಖ ರಸ್ತೆ ವೃತ್ತಗಳಲ್ಲಿ ಎಂದಿಗಿಂತ ಹೆಚ್ಚಿನ ವಾಹನ ಸಂಚಾರವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT