ಸೋಮವಾರ, ಸೆಪ್ಟೆಂಬರ್ 20, 2021
22 °C
ಪರಿಸರ ಪ್ರೇಮಿಗಳ ವಿರೋಧದ ನಡುವೆಯೂ ಮುಂದುವರಿದ ಜಾಕ್‌ವೆಲ್‌ ಕಾಮಗಾರಿ

ಹೊಸಪೇಟೆ: ನೀರು ನಾಯಿ ಸಂರಕ್ಷಿತ ಪ್ರದೇಶಕ್ಕೆ ಕಂಟಕ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ನೀರು ನಾಯಿ ಸಂರಕ್ಷಿತ ಪ್ರದೇಶಕ್ಕೆ ಕಂಟಕ ಬಂದೊದಗಿದೆ.

ಕೊಪ್ಪಳ ಜಿಲ್ಲೆಯ 11 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಅದರ ಅನುಷ್ಠಾನಕ್ಕಾಗಿ ತಾಲ್ಲೂಕಿನ ಕಾಳಘಟ್ಟ ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ನಾರಾಯಣಪೇಟೆ ನಡುವೆ ಹರಿಯುವ ತುಂಗಭದ್ರಾ ನದಿಯ ಗಂಗಮ್ಮನ ಮಡಗು ಬಳಿ ಜಾಕ್‌ವೆಲ್‌ ನಿರ್ಮಿಸಲಾಗುತ್ತಿದೆ. ಅದು ನೀರು ನಾಯಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಆದರೆ, ರಾಜಾರೋಷವಾಗಿ ಕೆಲಸ ಮುಂದುವರೆದಿದೆ.

ಕಾಮಗಾರಿಗೆ ತಡೆ ಹಿಡಿಯಬೇಕೆಂದು ಒತ್ತಾಯಿಸಿ ಪರಿಸರ ಪ್ರೇಮಿಗಳು ಇತ್ತೀಚೆಗೆ ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ವಿರೋಧ ದಾಖಲಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಕಾಮಗಾರಿ ತಡೆ ಹಿಡಿಯುವ ಕೆಲಸ ಮಾಡಿಲ್ಲ. ಹೀಗಾಗಿ ಜೆ.ಸಿ.ಬಿ., ಹಿಟಾಚಿಗಳನ್ನು ಬಳಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ.

ನಗರದ ತುಂಗಭದ್ರಾ ಅಣೆಕಟ್ಟೆಯಿಂದ ಕಂಪ್ಲಿ ವರೆಗೆ ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಪರಿಸರ ಪ್ರೇಮಿಗಳು, ಹೋರಾಟಗಾರರ ಸತತ ಒತ್ತಾಯದ ಬಳಿಕ, ಅರಣ್ಯ ಇಲಾಖೆಯು ಜಲಬಾಂಬ್‌ ಬಳಸಿ ನಡೆಸುತ್ತಿದ್ದ ಮೀನುಗಾರಿಕೆಗೆ ಕಡಿವಾಣ ಹಾಕಿತು. ಇನ್ನೇನು ನೀರುನಾಯಿ ಸಂತತಿ ವೃದ್ಧಿಗೆ ಸಹಾಯಕವಾಗಲಿದೆ ಎಂದು ಪರಿಸರವಾದಿಗಳು ಅಂದುಕೊಳ್ಳುತ್ತಿರುವಾಗಲೇ ಹೊಸದೊಂದು ಸಮಸ್ಯೆ ಸೃಷ್ಟಿಯಾಗಿರುವುದು ಅವರನ್ನು ಚಿಂತೆಗೀಡು ಮಾಡಿದೆ.

‘ನದಿಯಲ್ಲಿ ನೀರುನಾಯಿಗಳ ಜತೆಗೆ ಮೊಸಳೆ, ಆಮೆ ಸೇರಿದಂತೆ ಹಲವು ಪ್ರಭೇದದ ಮೀನುಗಳು ವಾಸವಾಗಿವೆ. ಒಂದುವೇಳೆ ಜಾಕ್‌ವೆಲ್‌ ನಿರ್ಮಿಸಿದರೆ ಅವುಗಳ ಸಂತತಿ ನಾಶವಾಗುತ್ತದೆ. ಜಾಕ್‌ವೆಲ್‌ಗಾಗಿ ವಿಶಾಲ ಪ್ರದೇಶದಲ್ಲಿ ನೆಲ ಅಗೆಯಲಾಗುತ್ತಿದೆ. ಅದರಿಂದ ನದಿ ಹರಿಯುವ ಮಾರ್ಗ ಬದಲಾಗುತ್ತದೆ. ನೂರಾರು ಹಾರ್ಸ್‌ ಪವರ್‌ ಸಾಮರ್ಥ್ಯದ ಮೋಟಾರ್‌ಗಳನ್ನು ಕೂರಿಸಲಾಗುತ್ತದೆ. ಅದರ ಶಬ್ದದಿಂದ ಅಲ್ಲಿ ನೆಲೆಸಿರುವ ಜೀವ ಜಂತುಗಳಿಗೆ ತೊಂದರೆಯಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು.

‘ಕೆರೆಗಳಿಗೆ ನೀರು ತುಂಬಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನದಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದು ಬೇಡ. ಅದರ ಬದಲು ಕೊಪ್ಪಳದ ಶಿವಪುರ ಬಳಿ ಜಾಕ್‌ವೆಲ್‌ ಸ್ಥಾಪಿಸಬಹುದು. ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ’ ಎಂದು ಸಲಹೆ ಮಾಡಿದರು.

*
ರಾಜ್ಯ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆಯಬೇಕೆಂದು ತಿಳಿಸಿ, ಕೆಲಸ ನಿಲ್ಲಿಸಿದ್ದೆ. ಮತ್ತೆ ಆರಂಭಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವೆ.
–ರಮೇಶ ಕುಮಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು