ಮಂಗಳವಾರ, ಮೇ 18, 2021
29 °C

ವಿಜಯನಗರ ಜಿಲ್ಲೆಗೆ ಆಗ್ರಹಿಸಿ ಪಂಜಿನ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಹೊಸಪೇಟೆ ಜಿಲ್ಲಾ ಕೇಂದ್ರವಾಗಿಟ್ಟುಕೊಂಡು ನೂತನ ವಿಜಯನಗರ ಜಿಲ್ಲೆ ರಚಿಸಬೇಕೆಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಕಾರ್ಯಕರ್ತರು ಶುಕ್ರವಾರ ಸಂಜೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. 

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ರೋಟರಿ ವೃತ್ತದ ವರೆಗೆ ರ್‍ಯಾಲಿ ನಡೆಸಿದರು. ಅನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಹೋರಾಟ ಸಮಿತಿ ಮುಖಂಡ ನಿಂಬಗಲ್‌ ರಾಮಕೃಷ್ಣ, ‘2007ರಿಂದ ನೂತನ ಜಿಲ್ಲೆ ರಚನೆ ಸಂಬಂಧ ಹೋರಾಟ ನಡೆಸುತ್ತಿದ್ದೇವೆ. ಅನೇಕ ಹೋರಾಟಗಾರರು ಈಗ ನಮ್ಮ ನಡುವೆ ಇಲ್ಲ. ತಡವಾಗಿಯಾದರೂ ಸರ್ಕಾರ ಸ್ಪಂದಿಸಿ ಹೆಜ್ಜೆ ಇಟ್ಟಿರುವುದು ಸೂಕ್ತವಾಗಿದೆ. ಇದು ಹೋರಾಟ ಸಮಿತಿಗೆ ಸಂದ ದೊಡ್ಡ ಜಯವಾಗಿದೆ. ಶೀಘ್ರವೇ ಜಿಲ್ಲೆ ಘೋಷಿಸಲು ಸಿ.ಎಂ. ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರೆಯಲಿದೆ’ ಎಂದರು.

‘ಹೊಸಪೇಟೆ, ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಹಾಗೂ ಕಂಪ್ಲಿ ತಾಲ್ಲೂಕುಗಳನ್ನು ಒಳಗೊಂಡ ಹೊಸ ಜಿಲ್ಲೆಯ ಉದಯವಾದರೆ ಪಶ್ಚಿಮ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಯಾಗುತ್ತದೆ. ಜಿಲ್ಲಾ ಕೇಂದ್ರವಾಗಲು ಅಗತ್ಯ ಸೌಕರ್ಯಗಳು ಹೊಸಪೇಟೆ ನಗರದಲ್ಲಿವೆ. ಹಾಗಾಗಿ ಇದನ್ನೇ ಕೇಂದ್ರವಾಗಿಟ್ಟುಕೊಂಡು ಜಿಲ್ಲೆ ರಚಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದರು.

ಮುಖಂಡರಾದ ಗುಜ್ಜಲ್‌ ನಾಗರಾಜ, ವೈ. ಯಮುನೇಶ್‌, ಸಿ.ಎನ್‌. ಸುಧಾ, ಜೆ. ಸಲೀಂ, ತಾರಿಹಳ್ಳಿ ವೆಂಕಟೇಶ, ಎಂ. ಶಾಮಪ್ಪ, ಶಾಂತಮ್ಮ, ಪಿ.ಆರ್‌. ಶ್ವೇತಾ, ಎನ್‌. ರಾಮಚಂದ್ರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು