ಗುರುವಾರ , ಅಕ್ಟೋಬರ್ 22, 2020
22 °C

ಬಳ್ಳಾರಿ: ಜಾತಿ ಗಣತಿ ವರದಿ ಬಹಿರಂಗಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಜಾತಿ ಗಣತಿ ವರದಿಯನ್ನು ಸರ್ಕಾರ ಬಹಿರಂಗ ಪಡಿಸಬೇಕೆಂದು ಆಗ್ರಹಿಸಿ ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಸಂಗೊಳ್ಳಿ ರಾಯಣ್ಣ ಸಾಮಾಜಿಕ, ಶೈಕ್ಷಣಿಕ ಟ್ರಸ್ಟ್‌ ಕಾರ್ಯಕರ್ತರು ಸೋಮವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಸಲ್ಲಿಸಿದರು.

‘ಕಾಲಕಾಲಕ್ಕೆ ಜಾತಿವಾರು ಸಮೀಕ್ಷೆ ನಡೆಸಿ, ಅದನ್ನು ಆಧರಿಸಿ ಮೀಸಲಾತಿ ಪರಿಷ್ಕರಿಸಬೇಕೆಂದು ಸುಪ್ರೀಂಕೋರ್ಟ್‌ ಹೇಳಿದೆ. ರಾಜ್ಯ ಸರ್ಕಾರವು 2015ರಲ್ಲೇ ಸಮೀಕ್ಷೆ ನಡೆಸಿ, ಗಣತಿ ಪೂರ್ಣಗೊಳಿಸಿದೆ. ಸಮೀಕ್ಷೆಗೆ ₹175 ಕೋಟಿ ವೆಚ್ಚ ಮಾಡಲಾಗಿದೆ. ಹೀಗಿದ್ದರೂ ಇದುವರೆಗೆ ವರದಿ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ರಾಜಕೀಯ ದುರುದ್ದೇಶದಿಂದ ಸರ್ಕಾರ ವರದಿ ಮೂಲೆಗುಂಪು ಮಾಡಿದೆ’ ಎಂದು ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್ ಆರೋಪಿಸಿದರು.

‘ಸರ್ಕಾರ ವರದಿ ಬಹಿರಂಗ ಪಡಿಸಿದರೆ ಹಿಂದುಳಿದ ವರ್ಗದವರು ಸೇರಿದಂತೆ ಇತರೆ ಜಾತಿಗಳ ಬಡವರಿಗೂ ಅನುಕೂಲವಾಗುತ್ತದೆ. ರಾಜಕೀಯ, ಶೈಕ್ಷಣಿಕ, ಉದ್ಯೋಗ ಮೀಸಲಾತಿ ಜಾರಿಯಾಗಿ ದಶಕಗಳಾದರೂ ಜಾತಿ ಸಂಖ್ಯಾಬಲವಿಲ್ಲದ ಎಷ್ಟೋ ಅಸಂಘಟಿತ ಹಿಂದುಳಿದ ಜಾತಿಗಳಿಗೆ ಮೀಸಲಾತಿಯ ಪ್ರಯೋಜನ ಸಿಕ್ಕಿಲ್ಲ. ಸರ್ಕಾರ ತಡಮಾಡದೆ ವರದಿ ಬಹಿರಂಗ ಪಡಿಸಬೇಕು’ ಎಂದು ಒತ್ತಾಯಿಸಿದರು.

ಟ್ರಸ್ಟ್‌ ಮುಖಂಡ ರವಿಶಂಕರ್‌ ದೇವರಮನೆ ಮಾತನಾಡಿ, ‘ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ. ಆದರೆ, ಈಗ ನಿಗದಿಪಡಿಸಿದ ಮೀಸಲಾತಿಯಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಬೋಡ ರಾಮಪ್ಪ, ಯು.ಅಶ್ವತಪ್ಪ, ಗೌಳಿ ರುದ್ರಪ್ಪ, ಗೌಳಿ ಸಣ್ಣೆಕ್ಕೆಪ್ಪ, ಸಣ್ಣ ಮಾರೆಪ್ಪ, ಜಿ.ಮಲ್ಲಿಕಾರ್ಜುನ, ಬಿ.ಗುರುಮೂರ್ತಿ, ಗೌಳಿ ಯಲ್ಲಪ್ಪ, ಎಂ.ಗುರುನಾಥರಾವ್ ಜಿ.ದೇವರೆಡ್ಡಿ, ಶಶಿಕಾಂತ್, ಪ್ರಶಾಂತ್ ಕಡ್ಡಿರಾಂಪುರ, ಸಂಕ್ಲಾಪುರ ಹನುಮಂತಪ್ಪ, ಈ ಕುಮಾರ ಸ್ವಾಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು