ಶನಿವಾರ, ಸೆಪ್ಟೆಂಬರ್ 25, 2021
22 °C

ಮಾತೃಭಾಷೆಯಲ್ಲಿ ವಿದ್ಯೆ ಕೊಟ್ಟರೆ ಸೂಕ್ತ: ಸಾಹಿತಿ ಚಂದ್ರಶೇಖರ ಕಂಬಾರ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಮಾತೃ ಭಾಷೆಯಲ್ಲಿ ಜ್ಞಾನ ಪಡೆದರೆ ನಾವು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ, ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆ ಮತ್ತು ಸಮುದಾಯ ಕೇಂದ್ರೀತ ವಿಶ್ವವಿದ್ಯಾಲಯಗಳ ಅಸ್ಮಿತೆಯ ಪ್ರಶ್ನೆಗಳು’ ಕುರಿತ ರಾಷ್ಟ್ರೀಯ ವೆಬಿನಾರ್‌ ಅನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

‘ವಿದ್ಯೆಯನ್ನು ಕಲಿಯಬೇಕು ಎಂದರೆ ಅದು ಆಂಗ್ಲ ಭಾಷೆಯಲ್ಲಿ ಮಾತ್ರ ಎನ್ನುವ ಮಟ್ಟದಲ್ಲಿ ಆಂಗ್ಲ ಭಾಷೆಯ ಒತ್ತಡವನ್ನು ಹೇರಿದರು. ಇದು ದುರದೃಷ್ಟಕರ ಸಂಗತಿ. ಇಂದು ನಾವೆಲ್ಲರೂ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇಂಗ್ಲಿಷ್ ಇಲ್ಲದೆ ನಮ್ಮ ಜೀವನ ಇಲ್ಲದಂತಾಗಿದೆ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದ್ದೇವೆ’ ಎಂದು ಹೇಳಿದರು.

‘ಭಾರತದಲ್ಲಿ 35ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಿವೆ. ನಮ್ಮ ದೇಶದಲ್ಲಿರುವ ದೇಶಿಯ ಜ್ಞಾನ ಸಂಪತ್ತನ್ನು ಪ್ರಾದೇಶಿಕ ಮಾತೃ ಭಾಷೆಗಳಲ್ಲಿ ಶಾಸ್ತ್ರೀಯವಾಗಿ ಬಹುಶಿಸ್ತೀಯ ನೆಲೆಯಲ್ಲಿ ಅವುಗಳನ್ನು ಅಧ್ಯಯನ ಮಾಡಿದರೆ ಕನ್ನಡದ ವಿದ್ವತ್ ವಿಸ್ತಾರವಾಗುತ್ತದೆ. ಹೆಚ್ಚೆಚ್ಚು ಕನ್ನಡದ ಶಕ್ತಿ ಬೆಳೆಯುತ್ತದೆ’ ಎಂದರು.

‘ಶಿವರಾಮ ಕಾರಂತರು ಅನ್ಯ ಭಾಷೆಗಳ ಜ್ಞಾನ ಸಂಪತ್ತನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಕನ್ನಡದ ಶಕ್ತಿ ಹೆಚ್ಚಾಗಿದೆ. ಕುವೆಂಪು ಅವರು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಇತರೆ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ನೀಡಬೇಕೆಂದು ತಿಳಿಸಿದರು. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯವು ಪಿ.ಯು.ಸಿ. ಪಠ್ಯಪುಸ್ತಕಗಳನ್ನು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿ ಪ್ರಕಟಿಸಿದೆ’ ಎಂದು ತಿಳಿಸಿದರು.

ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಟಿ.ವಿ.ಕಟ್ಟೀಮನಿ ಮಾತನಾಡಿ, ‘ನಮ್ಮ ದೇಶದ ಆರ್ಯುವೇದ, ಯೋಗ, ನಾಟಿ ಔಷಧಿ, ಬುಡಕಟ್ಟುಗಳ ವೈದ್ಯ ಪದ್ಧತಿ, ಬೌದ್ಧ ಹಾಗೂ ಜೈನ ಧರ್ಮಗಳ ಜ್ಞಾನ ಪರಂಪರೆಯಲ್ಲಿ ನಮ್ಮ ಹಿರಿಯರು ಯಾವತ್ತೂ ವ್ಯಾಪಾರೀಕರಣ ಮಾಡಿಲ್ಲ. ಆದರೆ, ಇಂದು ಕಾಲ ಬದಲಾಗಿದೆ. ಬದಲಾದ ಕಾಲಘಟ್ಟದಲ್ಲಿ ನಾವು ಬದಲಾಗಬೇಕು. ಕನ್ನಡ ಭಾಷೆಯ ಜ್ಞಾನಶಾಖೆ ವಿಸ್ತಾರವಾಗಬೇಕಾದರೆ ಅನ್ಯ ಭಾಷೆಗಳನ್ನು ನಾವು ಅಳವಡಿಸಿಕೊಳ್ಳಬೇಕು’ ಎಂದರು.

‘ಎಲ್ಲಾ ಅಧ್ಯಾಪಕರುಗಳು ನಾವು ಏನು ಕಲಿತಿದ್ದೇವೋ ಅದರ ಬಗ್ಗೆ ಪಠ್ಯಕ್ರಮಗಳನ್ನು ಸಿದ್ಧಪಡಿಸುವುದನ್ನು ಹೊರತುಪಡಿಸಿ ಕಲೆ ಮತ್ತು ಸಂಸ್ಕೃತಿ, ಉತ್ತಮ ಸಂವಹನ ಕೌಶಲ, ವೃತ್ತಿಪರ ಕೋರ್ಸ್‍ಗಳು, ದೇಶಿಯ ಜ್ಞಾನ ಸಂಪತ್ತುಗಳ ಕುರಿತು ಶಿಕ್ಷಕರು ಮೊದಲು ತರಬೇತಿ ಹೊಂದಿ ನಂತರ ವಿದ್ಯಾರ್ಥಿಗಳಿಗೆ ಕಲಿಸಿದರೆ ಭಾರತ ರಾಷ್ಟ್ರವು ಅಭಿವೃದ್ಧಿ ಹೊಂದುವುದರಲ್ಲಿ ಎರಡು ಮಾತಿಲ್ಲ’ ಎಂದು ಅಭಿಪ್ರಾಯಪಟ್ಟರು.

ಕುಲಪತಿ ಪ್ರೊ. ಸ.ಚಿ.ರಮೇಶ, ‘ಕನ್ನಡ ವಿಶ್ವವಿದ್ಯಾಲಯದಲ್ಲಿ 1993ರಿಂದ ಪ್ರಸ್ತುತ ದಿನಗಳವರೆಗೆ ದೇಶಿಯ ಜ್ಞಾನಕ್ಕೆ ಸಂಬಂಧಿಸಿದಂತೆ ವಿದ್ವಾಂಸರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳುತ್ತಿದ್ದಾರೆ. ಇದು ಕನ್ನಡ ವಿಶ್ವವಿದ್ಯಾಲಯದ ಹೆಮ್ಮೆ’ ಎಂದರು.

ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ, ವೆಬಿನಾರ್‌ ಸಂಚಾಲಕ ಪ್ರೊ. ವೀರೇಶ ಬಡಿಗೇರ, ನಿರ್ದೇಶಕ ಪ್ರೊ. ಎ.ಮೋಹನ್ ಕುಂಟಾರ್, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ..ವಿ.ಮುರಲೀಧರ ಶರ್ಮಾ, ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಿ.ಬಿ.ನಾಯಕ, ವಿಜಯಪುರದ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ತುಳಸಿಮಾಲಾ, ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ನಾಗೇಶ ಬೆಟ್ಟಕೋಟೆ, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಕೆ.ಈ. ದೇವನಾಥನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು