ಬುಧವಾರ, ಜುಲೈ 6, 2022
22 °C
ದುರುದ್ದೇಶದಿಂದ ಪದೇ ಪದೇ ಕಾಡಿಗೆ ಬೆಂಕಿ

ವಿಜಯನಗರ: ಕಿಡಿಗೇಡಿಗಳ ಕೃತ್ಯಕ್ಕೆ ಕಾಡು ನಾಶ, ಕಾಡ್ಗಿಚ್ಚು ನಂದಿಸುವುದೇ ಸವಾಲು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕಾಡಿನ ಮಹತ್ವ ಅರಿಯದ ಕಿಡಿಗೇಡಿಗಳ ಕೃತ್ಯದಿಂದ ಪ್ರತಿವರ್ಷ ಅಮೂಲ್ಯ ಕಾಡು ನಾಶವಾಗುತ್ತಿದೆ.

ಉದ್ದೇಶಪೂರ್ವಕವಾಗಿಯೇ ಕಾಡಿನಲ್ಲಿ ಬೆಂಕಿ ಹಚ್ಚುತ್ತಿರುವುದರಿಂದ ಅಮೂಲ್ಯ ಔಷಧೀಯ ಸಸ್ಯಗಳು, ವನ್ಯಜೀವಿಗಳು ಪ್ರತಿ ವರ್ಷ ಬಲಿಯಾಗುತ್ತಿವೆ. ಅರಣ್ಯ ಇಲಾಖೆಯವರು ಬೆಂಕಿ ಅವಘಡಗಳನ್ನು ತಡೆಯಲು ಹೊಸ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಕಿಡಿಗೇಡಿಗಳು ಹೊಸ ಹೊಸ ಉಪಾಯಗಳನ್ನು ಕಂಡುಕೊಂಡು ಕಾಡಿಗೆ ಬೆಂಕಿ ಹಚ್ಚಿ ಅದನ್ನು ನಾಶಗೊಳಿಸುವ ಕೆಲಸ ಎಗ್ಗಿಲ್ಲದೇ ಮುಂದುವರೆಸಿದ್ದಾರೆ.

ಅರಣ್ಯ ಇಲಾಖೆಯಿಂದ ಕಾಡಿನಲ್ಲಿ ‘ಫೈರ್‌ ಲೈನ್‌’, ಕಾಡಂಚಿನ ಜನರ ಮೇಲೆ ಹೆಚ್ಚಿನ ನಿಗಾ, ಗಸ್ತು ಹೆಚ್ಚಿಸಿದರೂ ಕಾಡಿಗೆ ಬೆಂಕಿ ಬೀಳುವುದು ನಿಂತಿಲ್ಲ. ಆದರೆ, ಅವುಗಳ ಸಂಖ್ಯೆ ತಗ್ಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ತಾಲ್ಲೂಕಿನ ನಾಲ್ಕು ಕಡೆಗಳಲ್ಲಿ ಕಾಡಿಗೆ ಬೆಂಕಿ ಬಿದ್ದಿದೆ.

ತಾಲ್ಲೂಕಿನ ಗುಂಡಾ ಅರಣ್ಯ, ಸಂಡೂರು ರಸ್ತೆಯಲ್ಲಿ ಕಾಡು, ಬೆಟ್ಟ ಗುಡ್ಡಗಳಲ್ಲಿ ಹರಡಿಕೊಂಡಿದೆ. ಕೆಂಡದಂತಹ ಬಿಸಿಲಿನಿಂದ ಬಹುತೇಕ ಗಿಡ, ಮರಗಳು ಒಣಗಿ ಹೋಗಿವೆ. ಎತ್ತರದ ಪ್ರದೇಶದಲ್ಲಿ ಹೆಚ್ಚಾಗಿ ಗಾಳಿ ಬೀಸುವುದರಿಂದ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಬಹುಬೇಗ ಚಾಚುತ್ತದೆ. ಇಡೀ ಕಾಡು ಹೊತ್ತು ಉರಿಯಲು ಕೆಲ ನಿಮಿಷ ಸಾಕು. ಇದನ್ನು ಚೆನ್ನಾಗಿ ಅರಿತಿರುವ ಕಿಡಿಗೇಡಿಗಳು ಬೆಂಕಿ ಹಚ್ಚಿ ಅರಣ್ಯ ನಾಶಗೊಳಿಸುತ್ತಿದ್ದಾರೆ. ಅವರ ಈ ಕುಕೃತ್ಯದಿಂದ ನೂರಾರು ಎಕರೆ ಕಾಡು ಸುಟ್ಟು ಹೋಗುತ್ತಿದೆ. ಒಂದು ಸಲ ಕಾಡಿಗೆ ಬೆಂಕಿ ಬಿದ್ದರೆ ಅರಣ್ಯ ಇಲಾಖೆಯವರಿಗೆ ಅದನ್ನು ತಡೆಯುವುದು ಅಷ್ಟು ಸುಲಭದ ಕೆಲಸವಲ್ಲ.

ಬೆಂಕಿ ಹಚ್ಚಲು ಕಾರಣವೇನು?: ಕಾಡಂಚಿನಲ್ಲಿ ವಾಸಿಸುತ್ತಿರುವವರು, ಉಳುಮೆ ಮಾಡುತ್ತಿರುವವರು, ಕುರಿಗಾಹಿಗಳೇ ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆ ಎನ್ನುವ ಆರೋಪ ಇದೆ. ಅದನ್ನು ಅರಣ್ಯ ಇಲಾಖೆಯು ಒಪ್ಪುತ್ತದೆ. ಆದರೆ, ಅವರ ವಿರುದ್ಧ ಪ್ರಕರಣ ಹೂಡಿ ಸಂಘರ್ಷಕ್ಕೆ ಇಳಿಯುವುದರ ಬದಲು ಮನಃಪರಿವರ್ತನೆ, ಕಾನೂನು ಏನು ಹೇಳುತ್ತದೆ ಎನ್ನುವುದರ ಬಗ್ಗೆ ತಿಳಿವಳಿಕೆ ಮೂಡಿಸಿ ಬದಲಾವಣೆ ತರುವುದು ಇಲಾಖೆಯ ಉದ್ದೇಶ. ಆದರೆ, ಅದು ದುರ್ಬಳಕೆಯಾಗುತ್ತಿದೆ.

‘ಕೃಷಿ ಜಮೀನಿನ ವ್ಯಾಪ್ತಿ ಹಿಗ್ಗಿಸಿಕೊಳ್ಳುವ ದುರಾಸೆಯಿಂದ ಕೆಲವರು ಕಾಡಿಗೆ ಬೆಂಕಿ ಇಡುತ್ತಾರೆ. ಕಾಡಿನಲ್ಲಿ ಬೇಟೆ ಆಡುವುದನ್ನು ನಿರ್ಬಂಧಿಸಲಾಗಿದೆ. ಕುರಿಗಾಹಿಗಳಿಗೆ ಕಾಡೊಳಗೆ ತೆರಳಲು ಬಿಡುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಅವರು ಸಿಟ್ಟಾಗಿ ಬೆಂಕಿ ಹಚ್ಚುತ್ತಾರೆ. ಬೇಸಿಗೆಯಲ್ಲಿ ಕಾಡು ಒಣಗಿರುವುದರಿಂದ ಅವರು ಸುಲಭವಾಗಿ ಮಾಡುತ್ತಾರೆ’ ಎಂದು ವಲಯ ಅರಣ್ಯ ಅಧಿಕಾರಿ ವಿನಯ್‌ ಕೆ.ಸಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಫೆಬ್ರುವರಿಯಿಂದ ಜೂನ್‌ ವರೆಗೆ ಅರಣ್ಯ ಇಲಾಖೆಯವರಿಗೆ ಸವಾಲಿನ ಕೆಲಸ. ಬಹಳ ಕಟ್ಟೆಚ್ಚರದಿಂದ ಕೆಲಸ ಮಾಡಲಾಗುತ್ತದೆ. ಕಾಡಂಚಿನಲ್ಲಿ ಓಡಾಡುವವರನ್ನು ವಿಚಾರಿಸಲಾಗುತ್ತದೆ. ರಾಜ್ಯದ ಹಲವೆಡೆ ಮಳೆಯಾಗಿದೆ. ಆ ರೀತಿ ನಮ್ಮಲ್ಲೂ ಒಂದೆರಡು ಸಲ ಮಳೆಯಾದರೆ ಕಾಡು ಹಸಿಯಾಗುತ್ತದೆ. ಆಗ ಯಾರಾದರೂ ಬೆಂಕಿ ಹಚ್ಚಿದರೂ ಬೇಗ ಹೊತ್ತಿಕೊಳ್ಳುವುದಿಲ್ಲ’ ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು