ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ವ್ಯಾಪಾರಿಯ ಕೃಷಿ ಪ್ರೀತಿ: ಲಾಕ್‌ಡೌನ್ ನಡುವೆಯೂ ಮಾವಿಗೆ ಹೆಚ್ಚಿದ ಬೇಡಿಕೆ

Last Updated 19 ಮೇ 2021, 7:27 IST
ಅಕ್ಷರ ಗಾತ್ರ

ಹೂವಿನಹಡಗಲಿ: ಪ್ರಸ್ತುತ ಲಾಕ್ ಡೌನ್ ನಡುವೆಯೂ ಪಟ್ಟಣದಲ್ಲಿ ಬೆಳೆದಿರುವ ಮಾವಿಗೆ ಬೇಡಿಕೆ ಹೆಚ್ಚಾಗಿದೆ. ಸಾವಯವ ಪದ್ಧತಿಯಲ್ಲಿ ಬೆಳೆಯಲಾದ ಇಲ್ಲಿನ ರುಚಿಕರ ಮಾವಿನ ಹಣ್ಣನ್ನು ಗ್ರಾಹಕರು ತೋಟಕ್ಕೇ ಹೋಗಿ ಖರೀದಿಸುತ್ತಿದ್ದಾರೆ.

ಪಟ್ಟಣದ ಚಿನ್ನದ ವ್ಯಾಪಾರಿ ವಿಠಲ್ ರಾಯ್ಕರ್ ಮಾರ್ಗದರ್ಶನದಲ್ಲಿ ಅವರ ಪುತ್ರ ರಾಘವೇಂದ್ರ ರಾಯ್ಕರ್ ಹೊಳಗುಂದಿ ರಸ್ತೆಯಲ್ಲಿರುವ ತಮ್ಮ 2.50 ಎಕರೆ ತೋಟದಲ್ಲಿ 2016ರಿಂದ ಸಾವಯವ ಕೃಷಿ ಮಾಡುತ್ತಿದ್ದಾರೆ. ಮಿಶ್ರ ಬೆಳೆಯಾಗಿ ವಿವಿಧ ತಳಿಯ ಮಾವು, ಲಿಂಬೆಯನ್ನು ಬೆಳೆದಿದ್ದಾರೆ. ಕಳೆದ ಮೂರು ವರ್ಷದಿಂದ ಫಸಲು ಬರುತ್ತಿದ್ದು, ಈ ವರ್ಷ ಸಮೃದ್ಧ ಫಸಲು ಬಂದಿದೆ. ಬಲಿತ ಮಾವಿನ ಕಾಯಿಗಳು ಗಿಡಕ್ಕೇ ಭಾರವಾಗಿ ತೊನೆದಾಡುತ್ತಿವೆ.

ಮಲ್ಲಿಕಾ, ಬದಾಮಿ, ನೀಲಂ, ತೋತಾಪುರಿ ತಳಿಯ ಮಾವಿಗೆ ಬೇಡಿಕೆ ಹೆಚ್ಚಿದೆ. ಪ್ರತಿ ಕೆ.ಜಿ. ಮಾವಿಗೆ ₹40 ರಿಂದ ₹60 ದರ ನಿಗದಿಪಡಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆದ ಇಲ್ಲಿನ ಮಾವು ಕೊಂಡೊಯ್ಯುವ ಗ್ರಾಹಕರು ನೈಸರ್ಗಿಕ ವಿಧಾನದಲ್ಲಿ ಒಣ ಹುಲ್ಲಿನಲ್ಲಿ ಭಟ್ಟಿ ಹಾಕಿ ಮಾಗಿಸಿ ಸೇವಿಸುತ್ತಾರೆ. ಈ ಹಣ್ಣುಗಳಿಗೆ ವಿಶೇಷ ಸ್ವಾದ, ರುಚಿ ಇರುವುದರಿಂದ ಬೇಡಿಕೆಯೂ ಹೆಚ್ಚಾಗಿದೆ. ಲಾಕ್ ಡೌನ್ ನಿರ್ಬಂಧದ ನಡುವೆಯೂ ಇವರಿಗೆ ಮಾರುಕಟ್ಟೆ ಸಮಸ್ಯೆ ಉಂಟಾಗಿಲ್ಲ.

ಫಸಲು ತುಂಬಿದ ತೋಟವನ್ನು ಇವರು ವ್ಯಾಪಾರಿಗಳಿಗೆ ಇಡಿಯಾಗಿ ಗುತ್ತಿಗೆ ನೀಡುವುದಿಲ್ಲ. ಕನಿಷ್ಠ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಹೆಚ್ಚುವರಿಯಾದ ಹಣ್ಣನ್ನು ಮಾತ್ರ ವ್ಯಾಪಾರಿಗಳಿಗೆ ನೀಡುತ್ತಾರೆ. ಹಿಂದಿನ ವರ್ಷ 3 ಟನ್ ಮಾವು ಇಳುವರಿ ₹1.50 ಲಕ್ಷ ಆದಾಯ ತಂದು ಕೊಟ್ಟಿತ್ತು. ಈ ಬಾರಿ 10 ಟನ್ ಇಳುವರಿಯ ನಿರೀಕ್ಷೆ ಯಲ್ಲಿದ್ದಾರೆ.

ಲಾಕ್ ಡೌನ್ ಜಾರಿಯಿಂದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಚೆಗೆ ತಾಲ್ಲೂಕಿನ ಮಿರಾಕೊರನಹಳ್ಳಿಯ ರೈತರೊಬ್ಬರು ಬಾಳೆಯ ಬೆಲೆ ಕುಸಿತದಿಂದ ಕಂಗಾಲಾಗಿ ಫಸಲು ತುಂಬಿದ ಬಾಳೆ ಬೆಳೆಯನ್ನೇ ನಾಶಪಡಿಸಿದ್ದರು. ಇಂತಹ ಸಂಕಷ್ಟದಲ್ಲೂ ಇಲ್ಲಿನ ರುಚಿಕರ ಮಾವು ಬೇಡಿಕೆ ಹೆಚ್ಚಿಸಿಕೊಂಡಿದೆ. ಮಿಶ್ರ ಬೆಳೆಯಲ್ಲಿರುವ ಲಿಂಬು 365 ದಿನವೂ ನಿರಂತರ ಆದಾಯ ತಂದುಕೊಡುತ್ತಿದೆ. ಸುತ್ತಲೂ ನೆಟ್ಟಿರುವ ತೆಂಗು, ತೇಗ, ಶ್ರೀಗಂಧ, ಬಗೆ ಬಗೆಯ ಹೂ ಗಿಡಗಳು ತೋಟದ ಅಂದವನ್ನು ಹೆಚ್ಚಿಸಿದೆ.

‘ನಾವು ವ್ಯವಹಾರಿಕ ಉದ್ದೇಶದಿಂದ ಕೃಷಿ ಮಾಡುತ್ತಿಲ್ಲ. ತಂದೆ ವಿಠಲ್ ರಾಯ್ಕರ್ ಅವರಿಗೆ ಕೃಷಿ ಮಾಡಿಸುವುದೆಂದರೆ ಎಲ್ಲಿಲ್ಲದ ಪ್ರೀತಿ. ಅವರ ಅಭಿಲಾಷೆಯಂತೆ ನಮ್ಮ ವೃತ್ತಿ ಬದುಕಿನ ಒತ್ತಡವನ್ನು ಕಳೆಯಲು ತೋಟ ಮಾಡಿದ್ದೇವೆ. ನಮ್ಮ ಸಂತೃಪ್ತಿಯ ಜತೆಗೆ ತೋಟ ನಿರ್ವಹಣೆ ಮಾಡುವ ಕಾರ್ಮಿಕರ ಖರ್ಚು ನೀಗಿದರೆ ಸಾಕು’ ಎಂದು ರಾಘವೇಂದ್ರ ರಾಯ್ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT