ಸೋಮವಾರ, ಜನವರಿ 20, 2020
26 °C

ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ನಗರದಲ್ಲಿ ಮಂಗಳವಾರ ರಾತ್ರಿ ಹೊಸ ವರ್ಷವನ್ನು ಸಡಗರ, ಸಂಭ್ರಮದೊಂದಿಗೆ ಸ್ವಾಗತಿಸಲಾಯಿತು.

ಹೊಸ ವರ್ಷಕ್ಕೆ ಇನ್ನೂ ಒಂದು ಗಂಟೆ ಬಾಕಿ ಇರುವಾಗಲೇ ಯುವಕರು ಸಂಭ್ರಮದಲ್ಲಿ ಮುಳುಗಿದ್ದರು. ನಗರದಲ್ಲಿ ಯುವಕರು ಬೈಕಿನಲ್ಲಿ ಗುಂಪು ಗುಂಪಾಗಿ ಓಡಾಡಿ, ಕೇಕೆ ಹೊಡೆಯುತ್ತ ಸಂಚರಿಸಿದರು. ಕೆಲವರು ಅವರ ಓಣಿಗಳಲ್ಲೇ ಸಂಗೀತಕ್ಕೆ ಹೆಜ್ಜೆ ಹಾಕಿದರು. ಕೆಲವರು ಕಂಠಪೂರ್ತಿ ಕುಡಿದು ಮತ್ತಿನಲ್ಲಿದ್ದರು.

ನಗರ ಹೊರವಲಯದ ವಿಜಯಶ್ರೀ ಹೆರಿಟೇಜ್‌, ನಗರದ ರಾಯಲ್‌ ಕಿರೀಟಿ ಹೋಟೆಲ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು.

ಮಧ್ಯರಾತ್ರಿ ಹನ್ನೆರಡು ಗಂಟೆಯಾಗುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತ್ತು. ಕೇಕ್‌ ಕತ್ತರಿಸಿ, ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು, ‘2020ಕ್ಕೆ ಸ್ವಾಗತ, ಸುಸ್ವಾಗತ’ ಎಂದು ಕಿರುಚಿದರು. ಆಕಾಶದಲ್ಲಿ ಬಾಣ ಬಿರುಸುಗಳ ಚಿತ್ತಾರ, ಪಟಾಕಿಗಳ ಸದ್ದು ಎಲ್ಲೆಡೆ ಕೇಳಿಸಿತು.

ಇದಕ್ಕೂ ಮುನ್ನ ನಗರದ ಬೇಕರಿಗಳಲ್ಲಿ ನೂಕು ನುಗ್ಗಲು ಕಂಡು ಬಂತು. ಜನ ತಡಹೊತ್ತು ನಿಂತು ಕೇಕ್‌ಗಳನ್ನು ಖರೀದಿಸಿ ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಬಂತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು