ಹಂಪಿ ಸ್ಮಾರಕದ ಕಲ್ಲು ಬೀಳಿಸುವ ವಿಡಿಯೊ ವೈರಲ್‌

7

ಹಂಪಿ ಸ್ಮಾರಕದ ಕಲ್ಲು ಬೀಳಿಸುವ ವಿಡಿಯೊ ವೈರಲ್‌

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಹಂಪಿ ಗಜಶಾಲೆ ಹಿಂಭಾಗದಲ್ಲಿರುವ ವಿಷ್ಣು ದೇವಾಲಯ ಮಂಟಪದ ಕಲ್ಲುಗಳನ್ನು ಯುವಕರು ಬೀಳಿಸುತ್ತಿರುವ ದೃಶ್ಯ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅದಕ್ಕೆ ಟೀಕೆ ವ್ಯಕ್ತವಾಗಿದೆ.

‘ಬೇರೆ ರಾಜ್ಯದವರು ಹೊಟ್ಟೆಪಾಡಿಗಾಗಿ ನಮ್ಮ ರಾಜ್ಯಕ್ಕೆ ಬಂದು ಹಂಪಿ ಹಾಳು ಮಾಡುತ್ತಿರುವುದು ಸರಿಯಲ್ಲ’ ಎಂದು ‘ಸೇವ್‌ ಹಂಪಿ’ ಹೆಸರಿನಲ್ಲಿ ಒಬ್ಬರು ಟೀಕಿಸಿದ್ದಾರೆ. ‘ಈ ರೀತಿ ಹಂಪಿಯಲ್ಲಿ ಮಾಡುತ್ತಿರುವುದು ಎಷ್ಟು ಸರಿ’ ಎಂದು ‘ಉತ್ತರ ಕರ್ನಾಟಕ ಸ್ಪೆಷಲ್‌’ ಹೆಸರಿನಲ್ಲಿ ಟ್ರೋಲ್‌ ಮಾಡಲಾಗಿದೆ.

‘ವೈರಲ್‌ ಆಗಿರುವ ವಿಡಿಯೊ ಅನ್ನು ಆಯುಷ್‌ ಸಾಹು ಎಂಬುವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. ಅದಕ್ಕೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಅವರು ಡಿಲೀಟ್‌ ಮಾಡಿದ್ದಾರೆ. ವಿಡಿಯೊದಲ್ಲಿರುವುದು ಹಂಪಿ ವಿಷ್ಣು ದೇಗುಲ. ಅಲ್ಲಿ ಮಂಟಪದ ಕಲ್ಲುಗಳು ಈಗಲೂ ಬಿದ್ದಿವೆ. ವಿಡಿಯೊದಲ್ಲಿರುವ ಕಿಡಿಗೇಡಿಗಳೇ ಮಾಡಿರಬಹುದು’ ಎಂದು ಸ್ಥಳೀಯ ನಿವಾಸಿ ವಿಶ್ವನಾಥ ಮಾಳಗಿ ಅಭಿಪ್ರಾಯ ಪಟ್ಟಿದ್ದಾರೆ.

‘ವಿಷ್ಣು ದೇಗುಲದ ಬಳಿ ಭದ್ರತಾ ಸಿಬ್ಬಂದಿ ಇರುವುದಿಲ್ಲ. ಜನ ಕೂಡ ಓಡಾಡುವುದಿಲ್ಲ. ಇದನ್ನೆಲ್ಲ ನೋಡಿಕೊಂಡೇ ಕೃತ್ಯವೆಸಗಿರುವ ಸಾಧ್ಯತೆ ಇದೆ. ವಿಡಿಯೊ ಮೂಲಕ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಂಪಿಯಲ್ಲಿ ಆಗಾಗ ಇಂತಹ ಘಟನೆಗಳು ಆಗುತ್ತಿದ್ದು, ಅದನ್ನು ತಡೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಎ.ಎಸ್‌.ಐ. ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಸಿಗಲಿಲ್ಲ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !