ಶುಕ್ರವಾರ, ಜನವರಿ 22, 2021
27 °C
ಮೂರು ಲೇಔಟ್‌ಗಳ ಅಭಿವೃದ್ಧಿಗೆ ಡಿಸೆಂಬರ್‌ನಲ್ಲಿ ಟೆಂಡರ್‌;‌ ಹುಡಾ ಅಧ್ಯಕ್ಷ ಅಶೋಕ ಜೀರೆ

ಏಪ್ರಿಲ್‌ನೊಳಗೆ ಜನರಿಗೆ ಸಿಗಲಿವೆ ನಿವೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ತಾಲ್ಲೂಕಿನ ಇಂಗಳಗಿ ಸೇರಿದಂತೆ ಒಟ್ಟು ಮೂರು ಲೇಔಟ್‌ಗಳ ಅಭಿವೃದ್ಧಿಗೆ ಡಿಸೆಂಬರ್‌ನೊಳಗೆ ಟೆಂಡರ್‌ ಕರೆದು, ಬರುವ ಏಪ್ರಿಲ್‌ನೊಳಗೆ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ (ಹುಡಾ) ಅಶೋಕ ಜೀರೆ ತಿಳಿಸಿದರು.

ಅಧ್ಯಕ್ಷರಾದ ಐದು ತಿಂಗಳ ನಂತರ ಮಂಗಳವಾರ ಹುಡಾ ಕಚೇರಿಯಲ್ಲಿ ಕರೆದ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಗಳಗಿ ಸಮೀಪ ವಿಜಯನಗರ ಬಡಾವಣೆ ಎಲೆ ಎತ್ತಲಿದೆ. 20X30, 30X40, 40X60 ಸೈಜಿನ 301 ನಿವೇಶನಗಳನ್ನು ನಿರ್ಮಿಸಲಾಗುವುದು. ಖಾಸಗಿಯವರಿಗೆ ಸೇರಿದ ಜಮೀನಿನಲ್ಲಿ ಈ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಒಟ್ಟು ನಿವೇಶನಗಳಲ್ಲಿ 150 ನಿವೇಶನಗಳು ಪ್ರಾಧಿಕಾರದ ಒಡೆತನಕ್ಕೆ ಸೇರಲಿವೆ’ ಎಂದು ವಿವರಿಸಿದರು.

‘ಮೊದಲ ಹಂತದಲ್ಲಿ ವಿನಾಯಕ ನಗರದಲ್ಲಿ 52 ಎಕರೆ ಜಾಗವನ್ನು ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 2.13 ಎಕರೆಯಲ್ಲಿ 30X40 ಸೈಜಿನ 30 ನಿವೇಶನಗಳನ್ನು ಮಾಡಲಾಗುತ್ತಿದೆ. ಅದೇ ರೀತಿ ಅನಂತಶಯನಗುಡಿ ಸಮೀಪದ ಮಾರುತಿ ನಗರದಲ್ಲಿ ಒಂಬತ್ತು ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ. ಎಲ್ಲವೂ ಈ–ಹರಾಜಿನ ಮೂಲಕ ಮಾರಾಟ ಮಾಡಲಾಗುವುದು’ ಎಂದು ಹೇಳಿದರು.

‘ನಿವೇಶನಕ್ಕಾಗಿ ಸಾರ್ವಜನಿಕರಿಂದ ಒಟ್ಟು 2,200 ಅರ್ಜಿಗಳು ಈಗಾಗಲೇ ಬಂದಿವೆ. ನಿವೇಶನ ಮಾರಾಟಕ್ಕಾಗಿ ನಡೆಯುವ ಹರಾಜು ಪ್ರಕ್ರಿಯೆಯ ನಂತರ ಲಾಟರಿ ಮೂಲಕ ಆಯ್ಕೆ ನಡೆಸಲಾಗುವುದು. ಲೇಔಟ್‌ ನಿರ್ಮಾಣಕ್ಕಾಗಿ ಕಚೇರಿಗೆ ಬರುವ ಎಲ್ಲ ಕಡತಗಳನ್ನು ವಾರದೊಳಗೆ ವಿಲೇವಾರಿ ಮಾಡಲಾಗುತ್ತಿದೆ. ದೂರುಗಳಿಗೆ ಆಸ್ಪದ ಕೊಡುತ್ತಿಲ್ಲ’ ಎಂದು ತಿಳಿಸಿದರು.

ಬಸ್‌ ಶೆಲ್ಟರ್‌, ಉದ್ಯಾನಕ್ಕೆ ತಂತಿಬೇಲಿ:

‘ಪ್ರಾಧಿಕಾರದಿಂದ ನಗರದ ವಿವಿಧ ಕಡೆ ಒಟ್ಟು ಏಳು ಬಸ್‌ ತಂಗುದಾಣಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಎಂ.ಜೆ. ನಗರದ ತಂಗುದಾಣ ನಿರ್ಮಾಣ ಪೂರ್ಣಗೊಂಡಿದೆ. ಒಂದು ತಂಗುದಾಣಕ್ಕೆ ₹5 ಲಕ್ಷ ವೆಚ್ಚ ಮಾಡಲಾಗುತ್ತಿದೆ’ ಎಂದು ಅಶೋಕ ಜೀರೆ ಮಾಹಿತಿ ಹಂಚಿಕೊಂಡರು.

‘ಅರವಿಂದ ನಗರ, ಶಾಂತಿನಗರ ಹಾಗೂ ಗೋಕುಲ ನಗರದಲ್ಲಿ ಮೂರು ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 58 ಉದ್ಯಾನಗಳು ಇನ್ನಷ್ಟೇ ಅಭಿವೃದ್ಧಿ ಹೊಂದಬೇಕಿವೆ. ₹1 ಕೋಟಿ ವೆಚ್ಚದಲ್ಲಿ 33 ಉದ್ಯಾನಗಳಿಗೆ ತಂತಿಬೇಲಿ ಹಾಕಲಾಗಿದೆ. ಮಿಕ್ಕಳಿದವುಗಳಿಗೆ ಹಂತ ಹಂತವಾಗಿ ತಂತಿಬೇಲಿ ಹಾಕಲಾಗುವುದು. ಉದ್ಯಾನಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಗರಸಭೆಗೆ ಪತ್ರ ಬರೆಯಲಾಗಿದೆ. ಅದೇ ರೀತಿ ₹20 ಲಕ್ಷ ವೆಚ್ಚದಲ್ಲಿ ಹುಡಾ ಕಚೇರಿಯ ಸುಂದರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಬರಲಿದೆ ಹೊಸ ರಸ್ತೆ, ವಾಣಿಜ್ಯ ಸಂಕೀರ್ಣ:

‘ನಗರದ ಸಿದ್ಧಿಪ್ರಿಯ ಕಲ್ಯಾಣ ಮಂಟಪದಿಂದ ಟಿ.ಬಿ. ಡ್ಯಾಂ ಸಮೀಪದ ನೀಲಿಮಾ ಪೆಟ್ರೋಲ್‌ ಪಂಪ್‌ ವರೆಗೆ 100 ಅಡಿ ಅಗಲವಿರುವ 3 ಕಿ.ಮೀ ರಸ್ತೆಗೆ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಹೊಸ ರಸ್ತೆ ನಿರ್ಮಾಣದಿಂದ ಎರಡು ಕಿ.ಮೀ ಪ್ರಯಾಣದ ಅಂತರ ಕಡಿಮೆಯಾಗಲಿದೆ. ಅಷ್ಟೇ ಅಲ್ಲ, ವಿಜಯನಗರ ಜಿಲ್ಲೆಯಾದ ನಂತರ ವಾಹನ ಸಂಚಾರ ದಟ್ಟಣೆ ತಗ್ಗಿಸಲು ಸಹಕಾರಿಯಾಗಲಿದೆ. ರೈತರ ಜಮೀನುಗಳಿಗೂ ಬೇಡಿಕೆ ಸೃಷ್ಟಿಯಾಗಲಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜೀರೆ ವಿವರಿಸಿದರು.

‘ನಗರದ ಒಳಾಂಗಣ ಕ್ರೀಡಾಂಣಗದ ಖಾಲಿ ಜಾಗದಲ್ಲಿ ವರ್ತುಲ ರಸ್ತೆಯ ಎದುರು ₹3 ಕೋಟಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ಎರಡು ಅಂತಸ್ತಿನ ಕಟ್ಟಡದಲ್ಲಿ 10X12 ಅಳತೆಯ ಒಟ್ಟು 38 ಮಳಿಗೆಗಳು ಬರಲಿವೆ. ಈಗಾಗಲೇ ಕ್ರೀಡಾ ಇಲಾಖೆಗೆ ಪತ್ರ ಬರೆಯಲಾಗಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ವಾಣಿಜ್ಯ ಸಂಕೀರ್ಣ ನಿರ್ಮಾಣ ಕೆಲಸ ಶುರುವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಹುಡಾದಿಂದ ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಂಜೂರಾದ ಜಮೀನು ವರ್ತುಲ ರಸ್ತೆಯಲ್ಲಿ ಹೋಗಿದೆ. ಒಂದುವೇಳೆ ಅವರಿಗೆ ಹೊಸ ನಿವೇಶನ ಬೇಕಾದರೆ ಅದಕ್ಕೆ ತಗಲುವ ಹೆಚ್ಚುವರಿ ವೆಚ್ಚ ಭರಿಸಿ ಖರೀದಿಸಬಹುದು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಹುಡಾ ಆಯುಕ್ತ ಗುರುಪ್ರಸಾದ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.