ಮಂಗಳವಾರ, ನವೆಂಬರ್ 19, 2019
28 °C
ನೀರಾವರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ; ರೈತ ಸಮುದಾಯದಲ್ಲಿ ಹರ್ಷ

ಏತ ನೀರಾವರಿ ಯೋಜನೆ: ದಶಕಗಳ ಹೋರಾಟಕ್ಕೆ ಸಿಕ್ಕ ಜಯ

Published:
Updated:
Prajavani

ಹೊಸಪೇಟೆ: ಮಳೆಯಾಶ್ರಿತ ಪ್ರದೇಶಕ್ಕೆ ಏತ ನೀರಾವರಿ ಯೋಜನೆ ಮೂಲಕ ನೀರುಣಿಸಬೇಕೆಂಬ ರೈತರ ದಶಕಗಳ ಬೇಡಿಕೆಗೆ ಸರ್ಕಾರ ಕೊನೆಗೂ ಸ್ಪಂದಿಸಿದ್ದು, ಈ ಭಾಗದ ರೈತರ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಂತಾಗಿದೆ.

ತಾಲ್ಲೂಕಿನ ಪಾಪಿನಾಯಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಏತ ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗೆ ಜಲಸಂಪನ್ಮೂಲ ಇಲಾಖೆ ಗುರುವಾರ (ನ.7) ಅನುಮೋದನೆ ನೀಡಿದೆ. ಒಟ್ಟು ₹243.35 ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದ್ದು, ಪ್ರಸಕ್ತ ಸಾಲಿನಲ್ಲಿ ಮೊದಲ ಹಂತದಲ್ಲಿ ₹75 ಕೋಟಿ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.

ತುಂಗಭದ್ರಾ ನದಿ ಮೂಲಕ ನೀರನ್ನೆತ್ತಿ 18 ಕೆರೆ ಹಾಗೂ ನಾಲ್ಕು ಚೆಕ್‌ ಡ್ಯಾಂಗಳನ್ನು ತುಂಬಿಸಿ, ಕೃಷಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಯೋಜನೆ ಇದಾಗಿದೆ. ಇದರಿಂದಾಗಿ ತಾಲ್ಲೂಕಿನ ಇಂಗಳಗಿ, ವಡ್ಡರಹಳ್ಳಿ, ಪಿ.ಕೆ. ಹಳ್ಳಿ, ಬೈಲುವದ್ದಿಗೇರಿ, ಗುಂಡ್ಲವದ್ದಿಗೇರಿ, ಕಾಕುಬಾಳು, ಧರ್ಮಸಾಗರ, ಜಿ.ಜಿ. ಕ್ಯಾಂಪ್‌, ಕೊಟಗಿನಹಾಳು, ಗಾದಿಗನೂರು ಹಾಗೂ ಭುವನಹಳ್ಳಿ ಗ್ರಾಮಗಳಿಗೆ ಅನುಕೂಲವಾಗಲಿದೆ.

ಈ ಎಲ್ಲ ಗ್ರಾಮಗಳು ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆಯನ್ನೇ ಅವಲಂಬಿಸಿ ರೈತರು ಕೃಷಿ ಮಾಡುತ್ತಾರೆ. ಅನೇಕ ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ಈ ಭಾಗದ ಕೆರೆ, ಕಟ್ಟೆಗಳನ್ನು ತುಂಬಿಸಬೇಕೆಂದು ರೈತರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ಈಗ ಫಲ ದೊರೆತಿದೆ.

‘ರಾಜ್ಯ ಸರ್ಕಾರ ರೈತರ ಹೋರಾಟಕ್ಕೆ ಮಣಿದು ಯೋಜನೆ ಜಾರಿಗೆ ತರಲು ಮುಂದಾಗಿರುವುದು ಖುಷಿ ತಂದಿದೆ. ಈಗ ತಡ ಮಾಡದೇ ಕಾಮಗಾರಿಗೆ ಚಾಲನೆ ಕೊಡಬೇಕು. ಕಾಲಮಿತಿಯಲ್ಲಿ ಅದನ್ನು ಪೂರ್ಣಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಗಂಟೆ ಸೋಮಶೇಖರ್‌ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)