ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕೇರಿ ಜನ ಒಗ್ಗಟ್ಟು, ಬಿಜೆಪಿಗೆ ಇಕ್ಕಟ್ಟು

ಅರ್ಧಗಂಟೆಗೂ ಹೆಚ್ಚು ಕಾಲ ಜಟಾಪಟಿ; ಸಂಚಾರ ಅಸ್ತವ್ಯಸ್ತ
Last Updated 6 ಜನವರಿ 2020, 13:10 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಚಲವಾದಿಕೇರಿಯ ದಲಿತರು, ವಾಲ್ಮೀಕಿ ನಾಯಕರು ಹಾಗೂ ಮುಸ್ಲಿಮರು ಒಗ್ಗಟ್ಟು ಪ್ರದರ್ಶಿಸಿ ಪ್ರತಿರೋಧ ತೋರಿದ್ದರಿಂದ ಬಿಜೆಪಿಯ ಉದ್ದೇಶಿತ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನ ಸೋಮವಾರ ನಡೆಯಲಿಲ್ಲ.

ವಿಷಯ ತಿಳಿದು ಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೇರಿದ ಸ್ಥಳೀಯರು, ‘ಗೋ ಬ್ಯಾಕ್‌’ ಎಂದು ಘೋಷಣೆ ಕೂಗಿ, ಕಪ್ಪು ಬಾವುಟಗಳನ್ನು ಪ್ರದರ್ಶಿಸಿ, ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಅಡ್ಡಗಟ್ಟಿ ತಡೆದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, ‘ನಾವೇನೂ ನಿಮ್ಮ ಆಸ್ತಿ ಕಬಳಿಸಲು ಬಂದಿಲ್ಲ. ಕಾಯ್ದೆ ಕುರಿತು ತಿಳಿವಳಿಕೆ ಮೂಡಿಸಲು ಕರಪತ್ರ ಹಂಚಲು ಬಂದಿದ್ದೇವೆ. ಅದನ್ನು ತಡೆಯುವ ಹಕ್ಕು ನಿಮಗಿಲ್ಲ’ ಎಂದರು. ಅದಕ್ಕೆ ಸ್ಥಳೀಯರು, ‘ನೀವು ಇಲ್ಲಿಗೆ ಬಂದು ವಾತಾವರಣ ಹಾಳುಗೆಡವಬೇಡಿ. ಯಾವುದೇ ಕಾರಣಕ್ಕೂ ಕೇರಿಯೊಳಗೆ ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.

ಎರಡೂ ಕಡೆಯವರ ನಡುವೆ ಪರಸ್ಪರ ವಾಗ್ವಾದ ನಡೆದು ಪರಿಸ್ಥಿತಿ ಬಿಗಡಾಯಿಸುವ ಹಂತಕ್ಕೆ ಹೋಗಿತ್ತು. ಈ ವೇಳೆ ಅಲ್ಲಿಗೆ ಧಾವಿಸಿದ ಯುವ ಮುಖಂಡ ಎಚ್‌.ಎಲ್‌. ಸಂತೋಷ್‌, ಅಂಜುಮನ್‌ ಸಮಿತಿ ಅಧ್ಯಕ್ಷ ಅಬ್ದುಲ್‌ ಖಾದರ್‌ ರಫಾಯ್‌, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಫಹೀಮ್‌ ಬಾಷಾ ಅವರು, ‘ಈಗ ವಾತಾವರಣ ಸರಿಯಿಲ್ಲ. ಈ ವೇಳೆ ಇಲ್ಲಿ ಅಭಿಯಾನ ನಡೆಸಿದರೆ ಪರಿಸ್ಥಿತಿ ಬಿಗಡಾಯಿಸಬಹುದು. ಇದರಿಂದ ಇಡೀ ಊರಿನ ನೆಮ್ಮದಿ ಹಾಳಾಗಬಹುದು’ ಎಂದರು.

ಆದರೆ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಸವರಾಜ ನಾಲತ್ವಾಡ, ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಕವಿತಾ ಈಶ್ವರ್‌ ಸಿಂಗ್‌, ಅವರ ಮಾತು ಕೇಳಿಸಿಕೊಳ್ಳಲಿಲ್ಲ. ನಂತರ ಪೊಲೀಸರು ಮಧ್ಯ ಪ್ರವೇಶಿಸಿ, ಬಿಜೆಪಿಯವರನ್ನು ಅಲ್ಲಿಂದ ಕಳುಹಿಸಿದರು.

ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಎರಡೂ ಕಡೆಯವರು ಮುಖಾಮುಖಾಯಾಗಿ ನಿಂತು, ಘೋಷಣೆ ಕೂಗಿದ್ದರಿಂದ ಮುಖ್ಯರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜನ ರಸ್ತೆಬದಿಯಲ್ಲಿ ನಿಂತು, ‘ಅಲ್ಲಿ ಏನಾಗುತ್ತಿದೆ’ ಎಂದು ಪ್ರಶ್ನಿಸುತ್ತಿದ್ದರು.

ಬಳಿಕ ಸಂತೋಷ್‌ ಮಾತನಾಡಿ, ‘ಪೌರತ್ವ ಕಾಯ್ದೆ ನೆಪದಲ್ಲಿ ಅಸ್ಸಾಂನಲ್ಲಿ 19 ಲಕ್ಷ ಜನರನ್ನು ಜೈಲಿಗೆ ಹಾಕಿದ್ದಾರೆ. ಅದರಲ್ಲಿ ಹಿಂದೂಗಳು, ದಲಿತರು, ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂತಹ ಪರಿಸ್ಥಿತಿ ನಮ್ಮ ರಾಜ್ಯದವರಿಗೆ ಬರುವುದು ಬೇಡ. ಕಾಯ್ದೆ ಕುರಿತು ಎಲ್ಲರೂ ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ. ಬಿಜೆಪಿಯವರು ಬಂದು ನಮಗೆ ಪಾಠ ಮಾಡಬೇಕಿಲ್ಲ’ ಎಂದರು.

‘ಯಾವ ಧರ್ಮೀಯರ ಬಗ್ಗೆಯೂ ನಮಗೆ ದ್ವೇಷವಿಲ್ಲ. ಕಾಯ್ದೆ ಬಗ್ಗೆ ಅರಿವು ಮೂಡಿಸುವುದಷ್ಟೇ ನಮ್ಮ ಕೆಲಸ. ಅದಕ್ಕೆ ಅಡ್ಡಿಪಡಿಸಿರುವುದು ಸರಿಯಲ್ಲ’ ಎಂದು ಬಸವರಾಜ ನಾಲತ್ವಾಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT