ಸೋಮವಾರ, ಜನವರಿ 27, 2020
14 °C
ವಿಜಯನಗರ ಜಿಲ್ಲೆ ರಚನೆ, ಮೂಲಸೌಕರ್ಯ ಪ್ರಮುಖ ಬೇಡಿಕೆಗಳು

ಭರವಸೆ ಮಹಾಪೂರ, ಬೆಟ್ಟದಷ್ಟು ಸವಾಲು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಭರವಸೆಗಳ ಮಹಾಪೂರವೇ ಹರಿಸಿ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಶಾಸಕ ಆನಂದ್‌ ಸಿಂಗ್‌ ಅವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಅದನ್ನವರು ಹೇಗೆ ಮೆಟ್ಟಿ ನಿಲ್ಲುವರೋ?

ಇಂತಹದ್ದೊಂದು ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣವೂ ಇದೆ. ‘ನಾನು ಗೆದ್ದರೆ ಸಚಿವನಾಗುವೆ. ವಿಜಯನಗರ ಜಿಲ್ಲೆ ಮಾಡುವೆ. ಬಹುವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಸಮಸ್ಯೆ ಇತ್ಯರ್ಥಪಡಿಸುವೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ಕೊಡುವೆ’ ಎಂದು ಮಾತು ಕೊಟ್ಟಿದ್ದಾರೆ.

ಈಗ ಅವರು ಗೆದ್ದಾಗಿದೆ. ಕೆಲವೇ ದಿನಗಳಲ್ಲಿ ಸಚಿವರಾಗುವ ಸಾಧ್ಯತೆಯೂ ಇದೆ. ಹೀಗಾಗಿಯೇ ಜನ ಕೂಡ ಅವರ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕಳೆದೊಂದು ದಶಕದಿಂದ ವಿಜಯನಗರ ಜಿಲ್ಲೆ ರಚನೆ ಮಾಡಬೇಕು ಎಂಬ ಬೇಡಿಕೆ ಇದೆ. ಆ ಬೇಡಿಕೆಯನ್ನು ಈಡೇರಿಸುವುದಾಗಿ ಸಿಂಗ್‌ ಹೇಳಿದ್ದಾರೆ. ಆದರೆ, ಅವರು ಹೇಳಿದಂತೆ ಅಷ್ಟು ಸುಲಭವಾಗಿ ಆ ಕೆಲಸ ಆಗುವಂತೆ ಕಾಣಿಸುತ್ತಿಲ್ಲ.

ಸ್ವಪಕ್ಷೀಯ ಶಾಸಕರಾದ ಸೋಮಶೇಖರ್‌ ರೆಡ್ಡಿ, ಕರುಣಾಕರ ರೆಡ್ಡಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಉಪಚುನಾವಣೆಯ ಪ್ರಚಾರಕ್ಕೆ ಬಂದಿದ್ದ ಸೋಮಶೇಖರ್‌ ರೆಡ್ಡಿ, ‘ಯಾವ ಕಾರಣಕ್ಕೂ ಜಿಲ್ಲೆ ಆಗಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

ಸಿಂಗ್‌ ಮೇಲಿನ ಮುನಿಸಿನಿಂದಾಗಿ, ಹೆಸರಿಗಷ್ಟೇ ಒಂದೆರಡು ದಿನ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಕರುಣಾಕರ ರೆಡ್ಡಿ ಅವರಂತೂ ಕಾಣಿಸಿಕೊಳ್ಳಲೇ ಇಲ್ಲ. ‘ಜಿಲ್ಲೆ ಮಾಡುವುದಾದರೆ ಹರಪನಹಳ್ಳಿ ಮಾಡಬೇಕು’ ಎಂದು ವಾದ ಮಂಡಿಸಿದ್ದಾರೆ. ಅವರದೇ ಪಕ್ಷದ ಶಾಸಕರು ಅದನ್ನು ವಿರೋಧಿಸುತ್ತಿರುವ ಕಾರಣ ಈ ವಿಷಯ ಸುಲಭವಾಗಿ ಇತ್ಯರ್ಥವಾಗುವ ಸಾಧ್ಯತೆ ಕಡಿಮೆ.

ಕಾಂಗ್ರೆಸ್‌ನಿಂದ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿರುವ ಆನಂದ್‌ ಸಿಂಗ್‌ಗೆ ಪಕ್ಷದಲ್ಲಿ ಹೆಚ್ಚಿನ ಮಹತ್ವ ನೀಡುತ್ತಿರುವುದಕ್ಕೆ ಈಗಾಗಲೇ ಆ ಪಕ್ಷದ ಶಾಸಕರು, ಮುಖಂಡರಲ್ಲಿ ಬೇಸರವಿದೆ. ಮಂತ್ರಿಯಾದರೆ ಸಿಂಗ್‌ ಪ್ರಭಾವ ಹೆಚ್ಚಾಗುತ್ತದೆ ಎಂಬ ಅಳಕು ಅವರಿಗಿದೆ. ಇನ್ನು ವಿಜಯನಗರ ಜಿಲ್ಲೆಯಾದರೆ, ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳ ಮೇಲೆ ಸಿಂಗ್‌ ಸಂಪೂರ್ಣ ಹಿಡಿತ ಸಾಧಿಸುತ್ತಾರೆ. ಆಗ ತಮಗೆ ಯಾರು ಕೇಳುವವರು ಇರುವುದಿಲ್ಲ ಎಂಬ ಆತಂಕ ಆ ಮುಖಂಡರನ್ನು ಕಾಡುತ್ತಿದೆ.

ಕಾರಿಗನೂರಿನಿಂದ ಭುವನಹಳ್ಳಿ ವರೆಗೆ ನೀರು ಪೂರೈಸುವ ಮಹತ್ವಕಾಂಕ್ಷಿ ಏತ ನೀರಾವರಿ ಯೋಜನೆಗೆ ಅನುಮೋದನೆ ಕೊಡಿಸಿಕೊಂಡು ಬರುವಲ್ಲಿ ಸಿಂಗ್‌ ಈಗಾಗಲೇ ಯಶಸ್ವಿಯಾಗಿದ್ದಾರೆ. ಆದರೆ, ಅದು ಯಾವ ರೀತಿ ಅನುಷ್ಠಾನಕ್ಕೆ ಬರುತ್ತದೆ ನೋಡಬೇಕಿದೆ. ಈ ಭಾಗದ ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಯಾದ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಆರಂಭಿಸುವುದರ ಕುರಿತು ಸಿಂಗ್‌ ಎಲ್ಲಿಯೂ ಹೇಳಿಲ್ಲ. ಹೀಗಾಗಿ ಅದು ಆರಂಭವಾಗುವ ಸಾಧ್ಯತೆ ಕ್ಷೀಣ.

ಈಗಲೂ ಕ್ಷೇತ್ರ ವ್ಯಾಪ್ತಿಯ ಕಮಲಾಪುರ ಸೇರಿದಂತೆ ಅನೇಕ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ನಗರದ ಕೆಲ ಬಡಾವಣೆಗಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕನಿಷ್ಠ ಮೂಲಸೌಕರ್ಯಗಳೇ ಇಲ್ಲ. ಅದನ್ನು ಕಲ್ಪಿಸಿ, ಮಾದರಿ ಕ್ಷೇತ್ರ ಮಾಡುವ ಅವರ ಭರವಸೆ ಹೇಗೆ ಈಡೇರುತ್ತದೆಯೋ ನೋಡಬೇಕಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು