ಶನಿವಾರ, ಅಕ್ಟೋಬರ್ 1, 2022
20 °C

ಮಾಧುಸ್ವಾಮಿ ಮಾತನಾಡುವ ಮುನ್ನ ಸ್ವಲ್ಪ ಯೋಚಿಸಬೇಕಿತ್ತು: ಸಚಿವ ಬಿ. ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: 'ಸರ್ಕಾರ ನಡೀತಾ ಇಲ್ಲ. ತಳ್ತಾ ಇದ್ದೀವಿ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಯಾವ ಮನಸ್ಥಿತಿಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈ ರೀತಿ ಹೇಳಿಕೆ ಕೊಡುವ ಮುನ್ನ ಸ್ವಲ್ಪ ಯೋಚಿಸಬೇಕಿತ್ತು‘ ಎಂದು ಸಾರಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

ಬಳ್ಳಾರಿ ಸಮೀಪದ ಮಿಂಚೇರಿ ಗುಡ್ಡದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶ್ರೀರಾಮುಲು, ’ಮಾಧುಸ್ವಾಮಿ ನೀಡಿರುವ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ನೀವು ಗಮನಕ್ಕೆ ತಂದಿದ್ದೀರಿ. ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಕೊಂಡು ಸ್ಪಷ್ಟನೆ ಕೊಡಿಸುವ ಕೆಲಸ ಮಾಡುವೆ‘ ಎಂದರು.

’ರಾಜ್ಯ ನಾಯಕತ್ವ ಕುರಿತು ನಮ್ಮ ಪಕ್ಷದಲ್ಲಿ ಗೊಂದಲ ಇಲ್ಲ. ಹೈಕಮಾಂಡ್‌ನಲ್ಲೂ ಈ ಬಗ್ಗೆ ಗೊಂದಲವಿಲ್ಲ. 2023ರ ವಿಧಾನಸಭೆ ಚುನಾವಣೆಯನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ. ಈ ಸುಳಿವನ್ನು ಹೈಕಮಾಂಡ್‌ ಈಗಾಗಲೇ ನೀಡಿದೆ‘ ಎಂದು ಸಚಿವರು ಸ್ಪಷ್ಟಪಡಿಸಿದರು.

’ಮುಖ್ಯಮಂತ್ರಿ ಅವರಾಗಲೀ, ಸಚಿವ ಸಂಪುಟದ ಸಹೊದ್ಯೋಗಿಗಳಾಗಲೀ ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಕೆಲಸವನ್ನು  ಮಾಡುತ್ತಿದ್ದಾರೆ‘ ಎಂದು ಅವರು ನುಡಿದರು.

’ಸಂಡೂರಿನ ಸೂಕ್ಷ್ಮ ಪರಿಸರದಲ್ಲಿರುವ ಕಂದಾಯ ಜಮೀನುಗಳಲ್ಲಿ ಬರುತ್ತಿರುವ ಕೆಲವು ಕಾರ್ಖಾನೆಗಳ ವಿಷಯವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಏಕೆಂದರೆ, ಪರಿಸರ ಉಳಿಸಬೇಕಾಗಿದೆ. ಯಶವಂತಪುರ, ಸಂಡೂರು, ಸೋಮಲಾಪುರ ಮುಂತಾದ ಸ್ಥಳಗಳಲ್ಲಿ ಕಾರ್ಖಾನೆ ಸ್ಥಾಪನೆ ಸಂಬಂಧ ಸಾರ್ವಜನಿಕರ ಅಹವಾಲು ಕೇಳುವ ಸಮಯದಲ್ಲಿ ಸಾಕಷ್ಟು ಗೊಂದಲಗಳಾಗಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ‘ ಎಂದು ತಿಳಿಸಿದರು.

’ಕಾರ್ಖಾನೆಗಳ ಸ್ಥಾಪನೆ ವೇಳೆಯಲ್ಲಿ ಸೂಕ್ಷ್ಮ ಪರಿಸರ ಉಳಿಸುವ ಪ್ರಶ್ನೆ ಬಂದಾಗ ಅತ್ತ ಕಡೆ ಸರ್ಕಾರ ಗಮನ ಕೊಡುವ ಅಗತ್ಯವಿದೆ. ಇಂಥ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಗೂ ಸೂಚಿಸಿದ್ದೇನೆ‘ ಎಂದು ಸಚಿವ ಶ್ರೀರಾಮುಲು ನುಡಿದರು.

ಜನ ಹಾಗೂ ಅರಣ್ಯ ಇಲಾಖೆ ಆಕ್ಷೇಪಗಳ ನಡುವೆಯೂ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಗಣಿಗಾರಿಕೆಗೆ ಹಾಗೂ ಕಾರ್ಖಾನೆಗಳಿಗೆ ಅವಕಾಶ ನೀಡುತ್ತಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀರಾಮುಲು ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು