ಭಾನುವಾರ, ಮೇ 22, 2022
21 °C

ರಕ್ತದಾನಕ್ಕೆ ಅನಗತ್ಯ ಭಯ ಬೇಡ: ವಿ.ಎಸ್‌. ಪ್ರಭಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ (ಪಿಡಿಐಟಿ) ಮಂಗಳವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್‌ಕ್ರಾಸ್‌, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ರಕ್ತದಾನ ಮಾಡಿದರು.

ಶಿಬಿರ ಉದ್ಘಾಟಿಸಿ ಮಾತನಾಡಿದ ವಿಜಯನಗರ ಕಾಲೇಜಿನ ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ, ‘ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ, ದಾನದಿಂದಲೇ ಪಡೆಯಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಎಲ್ಲರೂ ಕೈ ಜೋಡಿಸಿ ರಕ್ತದಾನದ ಮೂಲಕ ಜೀವದಾನಕ್ಕೆ ಮುಂದಾಗಬೇಕು’ ಎಂದು ಹೇಳಿದರು.

‘ರಕ್ತದಾನದ ಬಗ್ಗೆ ಜನರಿಗೆ ಅನಗತ್ಯ ಭಯ, ತಪ್ಪು ತಿಳಿವಳಿಕೆಗಳಿವೆ. ಆದರೆ, ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಲ್ಲ, ರಕ್ತದಾನಿಗಳೂ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತ ಕಣಗಳ ಉತ್ಪತ್ತಿ ಆಗುತ್ತದೆ, ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್‌ ಅಂಶ ಕಡಿಮೆಯಾಗುತ್ತದೆ. ಇನ್ನಷ್ಟು ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಪ್ರಾಂಶುಪಾಲ ಎಸ್.ಎಂ.ಶಶಿಧರ್ ಮಾತನಾಡಿ, ‘ರಕ್ತ ಸಂಜೀವಿನಿ ಇದ್ದಂತೆ. ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಸಂದರ್ಭದಲ್ಲಿ ರಕ್ತ ಸಿಕ್ಕರೆ ಜೀವ ಉಳಿಸಬಹುದು. ಈ ಕೆಲಸಕ್ಕೆ ಎಲ್ಲರೂ ಮುಂದೆ ಬರಬೇಕು’ ಎಂದು ಹೇಳಿದರು.

‘2019ರಲ್ಲಿ ಪುಲ್ವಾಮ ದುರಂತದಲ್ಲಿ ನಮ್ಮ ವೀರ ಸೈನಿಕರು ಹುತಾತ್ಮರಾಗಿದ್ದರು. ಆ ತ್ಯಾಗ ನೆನಪಿಸಲು ಈ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ’ ಎಂದು ಪರಿಷತ್ತಿನ ಸಂಚಾಲಕ ರೇಣುಕಪ್ಪ ಚೌಡಿಕಿ ತಿಳಿಸಿದರು.

ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ರಾವ್, ರೇಖಾ ಪ್ರಕಾಶ್, ಅನ್ನಪೂರ್ಣ ಸದಾಶಿವ ಮೂರ್ತಿ, ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಜಿತೇಂದ್ರ, ಪಿಡಿಐಟಿಯ ಎನ್.ಎಸ್.ಎಸ್. ಘಟಕದ ನವೀನ್, ರೆಡ್ ಕ್ರಾಸ್ ಘಟಕದ ಎಸ್‌. ನವೀನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು