ಶನಿವಾರ, ಡಿಸೆಂಬರ್ 7, 2019
25 °C
ಬರಿದಾಗುವ ಹಂತಕ್ಕೆ ತುಂಗಭದ್ರಾ ಜಲಾಶಯ; ರೈತರಲ್ಲಿ ಮನೆ ಮಾಡಿದ ನಿರಾಸೆ

ಮಳೆಯೂ ಇಲ್ಲ, ಒಳಹರಿವು ಇಲ್ಲ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಇದುವರೆಗೆ ಮಳೆ ಆಗದೇ ಇರುವುದು ರೈತರನ್ನು ಚಿಂತೆಗೀಡು ಮಾಡಿದರೆ, ದಿನದಿಂದ ದಿನಕ್ಕೆ ಇಲ್ಲಿನ ತುಂಗಭದ್ರಾ ಜಲಾಶಯ ಬರಿದಾಗುವ ಹಂತಕ್ಕೆ ಬರುತ್ತಿರುವುದರಿಂದ ರೈತಕುಲ ತೀವ್ರ ಆತಂಕಕ್ಕೆ ಒಳಗಾಗಿದೆ.

ಬಳ್ಳಾರಿ ಜಿಲ್ಲೆಯಾದ್ಯಂತ ಇದುವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಕೆಂಡದಂತಹ ಬಿಸಿಲಿನಿಂದ ಕಾದು ಕಾವಲಿಯಂತಾಗಿರುವ ಭೂಮಿಯ ಕಾವು ಸಹ ಆರಿಲ್ಲ. ಪರಿಸ್ಥಿತಿ ಹೀಗಿರುವಾಗ ಬಿತ್ತನೆ ದೂರದ ಮಾತಾಗಿಯೇ ಉಳಿದಿದೆ. 

ಮುಂಗಾರು ಮಳೆ ಸಕಾಲಕ್ಕೆ ಬರಬಹುದು ಎಂದು ಅಂದುಕೊಂಡಿದ್ದ ರೈತರು ಭೂಮಿ ಹದಮಾಡಿಕೊಂಡು ಅಗತ್ಯ ಸಿದ್ಧತೆ  ಮಾಡಿಕೊಂಡಿದ್ದರು. ಆದರೆ, ವರುಣ ಕೈಕೊಟ್ಟಿದ್ದರಿಂದ ಬಿತ್ತನೆ ಮಾಡಿಲ್ಲ. ಅಲ್ಲಲ್ಲಿ ಕೆಲವರು ಬಿತ್ತನೆ ಮಾಡಿದ್ದರು. ಆದರೆ, ಮಳೆಯಾಗದ ಕಾರಣ ಸಸಿಗಳು ಕೂಡ ಮೇಲೆ ಎದ್ದಿಲ್ಲ. ನೆಲದಲ್ಲಿ ಹಾಕಿದ ಬೀಜಗಳು ಮೊಳಕೆಯೊಡೆಯದೆ ಅಲ್ಲೇ ಹಾಳಾಗಿವೆ. 

ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಡೆಡ್‌ ಸ್ಟೋರೇಜ್‌ಗೆ ತಲುಪಿದೆ. ಎರಡು ತಿಂಗಳ ಹಿಂದೆಯೇ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಮಲೆನಾಡು ಹಾಗೂ ಜಲಾನಯನ ಪ್ರದೇಶದಲ್ಲೂ ಮಳೆಯಾಗದ ಕಾರಣ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ.  ಮಳೆಯೂ ಇಲ್ಲ, ಕಾಲುವೆಗಳಲ್ಲಿ ನೀರು ಹರಿಸದಂತಹ ಪರಿಸ್ಥಿತಿ ಇರುವುದರಿಂದ ರೈತರು ಕಂಗೆಟ್ಟಿ ಹೋಗಿದ್ದಾರೆ. ಆದರೆ, ಇನ್ನೂ 2.06 ಟಿ.ಎಂ.ಸಿ. ನೀರು ಅಣೆಕಟ್ಟೆಯಲ್ಲಿ ಇರುವುದರಿಂದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ಸದ್ಯಕ್ಕೆ ಕುಡಿಯುವ ನೀರಿನ ಯಾವುದೇ ಸಮಸ್ಯೆಯಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಬಹುದು.

2018ರ ಜೂನ್‌ 23ರಂದು ಜಲಾಶಯದಲ್ಲಿ 26.21 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. ಆರು ಸಾವಿರ ಕ್ಯುಸೆಕ್‌ಗೂ ಅಧಿಕ ಒಳಹರಿವು ಇತ್ತು. ಹೋದ ವರ್ಷ ಜಿಲ್ಲೆಯಲ್ಲಿ ಮಳೆಯಾಗದಿದ್ದರೂ ಬೇರೆ ಭಾಗಗಳಲ್ಲಿ ಮಳೆಯಾಗಿದ್ದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಜುಲೈ ತಿಂಗಳಲ್ಲೇ ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ರೈತರು ಭತ್ತ, ಬಾಳೆ, ಕಬ್ಬು ಬೆಳೆದಿದ್ದರು. ಆದರೆ, ಈ ಸಲ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಇದುವರೆಗೆ ಅಣೆಕಟ್ಟೆಗೆ ನೀರು ಹರಿದು ಬಂದಿಲ್ಲ. ಒಂದುವೇಳೆ ತಿಂಗಳಾಂತ್ಯದಿಂದ ನೀರು ಹರಿದು ಬಂದರೂ ಆಗಸ್ಟ್‌ ನಂತರವೇ ಕಾಲುವೆಗಳಿಗೆ ನೀರು ಹರಿ ಬಿಡಬಹುದು ಎನ್ನುತ್ತಾರೆ ತುಂಗಭದ್ರಾ ಮಂಡಳಿಯ ಅಧಿಕಾರಿಗಳು. 

ಈ ವಿಚಾರವೇ ರೈತರನ್ನು ಹೆಚ್ಚು ಕಾಡುತ್ತಿದೆ. ‘ಮಳೆಯೂ ಆಗುತ್ತಿಲ್ಲ. ಜಲಾಶಯಕ್ಕೆ ನೀರೂ ಸಹ ಬರುತ್ತಿಲ್ಲ. ಇದೇ ಪರಿಸ್ಥಿತಿ ಇದ್ದರೆ ರೈತರನ್ನು ಆ ದೇವರೇ ಕಾಪಾಡಬೇಕು. ಪ್ರತಿ ವರ್ಷ ಈ ಸಮಯದಲ್ಲಿ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಭತ್ತ ನಾಟಿ ಮಾಡುವ ಕೆಲಸ ಆರಂಭವಾಗುತ್ತಿತ್ತು. ಆದರೆ, ಈ ಸಲ ಎಲ್ಲಿ ಕೂಡ ನಾಟಿ ಆಗುತ್ತಿಲ್ಲ. ಮುಂಗಾರು ಮಳೆ ಸಕಾಲಕ್ಕೆ ಬರದ ಕಾರಣ ಈ ವರ್ಷವೂ ಜೋಳ ಬೆಳೆಯಲು ಆಗುವುದಿಲ್ಲ. ಏನೂ ಬೆಳೆಯದಿದ್ದರೆ ರೈತ ಹೇಗೆ ಬದುಕಬೇಕು‘ ಎಂದು ತಾಲ್ಲೂಕಿನ ಕಡ್ಡಿರಾಂಪುರದ ರೈತ ಬಸಯ್ಯ ಸ್ವಾಮಿ ಪ್ರಶ್ನಿಸುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು