ಶುಕ್ರವಾರ, ಆಗಸ್ಟ್ 6, 2021
22 °C

ಆನ್‌ಲೈನ್‌ ಶಿಕ್ಷಣ ಪ್ರಸ್ತಾವ ತಿರಸ್ಕರಿಸಿ: ಎಸ್‌ಎಫ್ಐ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ತಜ್ಞರ ಸಮಿತಿ ಶಿಫಾರಸು ಮಾಡಿರುವ ಆನ್‌ಲೈನ್‌ ಶಿಕ್ಷಣ ಅವೈಜ್ಞಾನಿಕವಾಗಿದ್ದು, ಸರ್ಕಾರ ಅದನ್ನು ಜಾರಿಗೊಳಿಸದಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌.ಎಫ್‌.ಐ) ತಾಲ್ಲೂಕು ಸಮಿತಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಸಲ್ಲಿಸಿದರು.

ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೆ ಸರ್ಕಾರ ಇನ್ನೂ ಹಸಿರು ನಿಶಾನೆ ತೋರಿಲ್ಲ. ಹೀಗಿರುವಾಗ ತಜ್ಞರ ಸಮಿತಿ ಆನ್‌ಲೈನ್‌ ಶಿಕ್ಷಣಕ್ಕೆ ಶಿಫಾರಸು ಮಾಡಿರುವುದು ಸರಿಯಲ್ಲ. ತಜ್ಞರ ಸಮಿತಿಯ ಪ್ರಸ್ತಾವವನ್ನು ಸರ್ಕಾರ ಕ್ಷಣಮಾತ್ರ ಯೋಚಿಸದೇ ತಿರಸ್ಕರಿಸಬೇಕು. ಪ್ರಜಾಸತ್ತಾತ್ಮಕ ಶಿಕ್ಷಣದ ಹಕ್ಕುಗಳನ್ನು ದುರ್ಬಲಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಆನ್‌ಲೈನ್‌ ತರಗತಿ ಹೆಸರಿನಲ್ಲಿ ಪೋಷಕರಿಂದ ಹಣ ವಸೂಲಿ ಮಾಡುವ ಕುತಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ.

ಪದವಿ, ಸ್ನಾತಕೋತ್ತರ, ಕಾನೂನು, ಡಿಪ್ಲೊಮಾ, ಎಂಜಿನಿಯರಿಂಗ್‌ ಸೇರಿದಂತೆ ಎಲ್ಲ ರೀತಿಯ ವೃತ್ತಿಪರ ಕೋರ್ಸ್‌ಗಳ ಪರೀಕ್ಷೆಗಳನ್ನು ಸರ್ಕಾರ ರದ್ದುಗೊಳಿಸಬೇಕು. ಆರು ತಿಂಗಳ ಶೈಕ್ಷಣಿಕ ಶುಲ್ಕ ಮನ್ನಾ ಮಾಡಬೇಕು. ಕೇರಳ ಮಾದರಿಯಲ್ಲಿ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಮುಂದಿನ ಆರು ತಿಂಗಳ ವರೆಗೆ ಹತ್ತು ಕೆ.ಜಿ. ಆಹಾರ ಧಾನ್ಯ ನೀಡಬೇಕು. ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳ ಕುಟುಂಬಕ್ಕೆ ಸರ್ಕಾರ ಮಾಸಿಕ ₹7,500 ಭತ್ಯೆ ವಿತರಿಸಬೇಕು. ವಿವಿಧ ವಿಶ್ವವಿದ್ಯಾಲಯಗಳು ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳ ಫೆಲೋಶಿಪ್‌ ಶೀಘ್ರ ಕೊಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಫೆಡರೇಶನ್‌ ತಾಲ್ಲೂಕು ಅಧ್ಯಕ್ಷ ಜೆ‌.ಶಿವಕುಮಾರ್, ವಿದ್ಯಾರ್ಥಿ ಮುಖಂಡರಾದ ಕೆ.ಎ ಪವನ್ ಕುಮಾರ್. ಬಿಸಾಟಿ ಸೂರ್ಯ, ಕಿರಣ್, ನದೀಮ್, ಗುರುರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು